ಬೆಂಗಳೂರು : ಚಾರಿತ್ರಿಕ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ರೈತ ಹೋರಾಟ 28ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ನಿರಂತರ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದೆ.
ಇಂದಿನ ಧರಣಿಯನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹಾಗೂ ಹಿರಿಯ ಹೋರಾಟಗಾರ ಮಾವಳ್ಳಿ ಶಂಕರ್ ಉದ್ಘಾಟಿಸಿ ಮಾತನಾಡಿದ ಅವರು ಸುಳ್ಳು ಪ್ರಚಾರ ಹಾಗೂ ಕೋಮುವಾದದ ಮೂಲಕ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಜನರನ್ನು ಮರಳು ಮಾಡುತ್ತಿದೆ.ಮತ ಖರೀದಿ ಮತ್ತು ವಿರೋಧ ಪಕ್ಷ ಗಳ ಶಾಸಕರ ಖರೀದಿಯನ್ನೇ ತನ್ನ ರಾಜಕೀಯ ಕಾರ್ಯತಂತ್ರ ಮಾಡಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿ ಉಂಟು ಮಾಡುತ್ತಿದೆ.
ಈ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಂಡವಾಳಶಾಹಿ ಪರ ಧೋರಣೆಗಳನ್ನು ಅನುಸರಿಸುತ್ತಾ ದುರ್ಬಲ ವರ್ಗಗಳ ಹಕ್ಕು ನಿರಾಕರಿಸುವ ಕಾಯ್ದೆಗಳನ್ನು ಮಾಡುತ್ತಿದೆ.ನೋಟು ರದ್ದು, ಜಿಎಸ್ ಟಿ ಯಂತೇಯೇ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿ ಕೊಡುವ ಉದ್ದೇಶವನ್ನೇ ಈ ಕೃಷಿ ಕಾಯ್ದೆಗಳು ಹೊಂದಿವೆ.ಇದರಿಂದ ಕೋಟ್ಯಾಂತರ ಜನರ ಬದುಕು ದಿವಾಳಿಯಾಗಲಿದೆ.ಇದರ ವಿರುದ್ಧ ದೆಹಲಿಯಲ್ಲಿ ಸುಮಾರು 40 ಜನ ಹೋರಾಟ ನಿರತ ರೈತರು ಹುತಾತ್ಮ ರಾಗಿದ್ದರೂ ಅಂಜದೇ ಹೋರಾಡುತ್ತಿರುವ ಬೆಂಬಲಕ್ಕೆ ಇಡೀ ದೇಶದ ಶ್ರಮಿಕರು ನಿಲ್ಲಬೇಕು ಎಂದು ಕರೆ ನೀಡಿದರು.
ಪ್ರತಿಭಾಟನೆ ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಕೆ ಮಹಾಂತೇಶ್, ಕೆ ಎನ್ ಉಮೇಶ್ , ರಾಜ್ಯ ಉಪಾಧ್ಯಕ್ಷೆ ಲೀಲಾವತಿಯವರು ಕೃಷಿ ಕಾಯ್ದೆಗಳ ಅಪಾಯಗಳ ಕುರಿತು ಮಾತಾನಾಡಿದರು.
ಇಂದಿನ ಪ್ರತಿಭಟನಾ ಧರಣಿಯಲ್ಲಿ ಯಶವಂತಪುರ ಎಪಿಎಂಸಿ ಯಾರ್ಡ್ ಮಂಡಿ ಹಮಾಲರ ಸಂಘದ ಅಧ್ಯಕ್ಷರಾದ ಮೂರ್ತಿ,ಕಾರ್ಯದರ್ಶಿ ಕುಮರೇಷನ್ , ಉಪಾಧ್ಯಕ್ಷ ವೇಲು ಮುರುಗನ್ , ಮಹಿಳಾ ಹಮಾಲಿ ಕಾರ್ಮಿಕರ ನಾಯಕಿ ತಂಗಮ್ಮ , ಮುಖಂಡ ಅಣ್ಣಾದೊರೈ, ಕಟ್ಟಡ ಕಾರ್ಮಿಕ ಸಂಘಟನೆ ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ವೀರಮಣಿ, ಜಿಲ್ಲಾ ಮುಖಂಡರಾದ ಹರೀಶ್ , ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡ ಶರಣಪ್ಪ ಕರ್ನಾಟಕ ಪ್ರಾಂತ ರೈತ ಸಂಘದ ಟಿ ಯಶವಂತ ಕರ್ನಾಟಕ ಜನಶಕ್ತಿಯ ರವಿ ಮೋಹನ್ ಮುಂತಾದವರು ಭಾಗವಹಿಸಿದ್ದರು.