ಬೆಳಗಾವಿ : ಭೂ ಸುಧಾರಣೆ, ಎಪಿಎಂಸಿ ಮತ್ತು ಜಾನುವಾರು ಕಾಯ್ದೆಗಳಿಗೆ ರಾಜ್ಯ ಸರ್ಕಾರವು 2020ರಲ್ಲಿ ತಂದಿರುವ ರೈತ ವಿರೋಧಿ ತಿದ್ದುಪಡಿಗಳನ್ನು ಕೂಡಲೇ ರದ್ದುಗೊಳಿಸಬೇಕು ಇಲ್ಲದೆ ಹೋದರೆ ರಾಜ್ಯದಲ್ಲಿ ದೆಹಲಿ ಮಾದರಿ ಹೋರಾಟ ನಡೆಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರ ನಾಯಕ ಅಶೋಕ್ ಧವಳೆ ಎಚ್ಚರಿಸಿದ್ದಾರೆ.
ಸಂಯುಕ್ತ ಹೋರಾಟ- ಕರ್ನಾಟಕ ವತಿಯಿಂದ ಇಲ್ಲಿನ ಗೋಕಾಕ ರಸ್ತೆಯ ಸಂಕಲ್ಪ ಗಾರ್ಡನ್‌ನಲ್ಲಿ ಆಯೋಜಿಸಿದ್ದ ‘ರೈತ ಅಧಿವೇಶನ’ ಉದ್ಘಾಟಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಜಾರಿಗೊಳಿಸಿರುವ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆಗಳ ತಿದ್ದುಪಡಿಗಳನ್ನು ಕೂಡಲೇ ರದ್ದುಪಡಿಸಿ ಹಿಂಪಡೆಯಬೇಕು. ರೈತರ ಹಿತಿವನ್ನು ಕಾಪಾಡಬೇಕು, ಇಲ್ಲದೆ ಹೋದರೆ ಕರ್ನಾಟಕದಲ್ಲಿ ದೆಹಲಿ ಮಾದರಿ ಹೋರಾಟಕ್ಕೆ ರೈತರು ಸಜ್ಜಾಗಿದ್ದಾರೆ ಎಂದರು. ವಿಪರೀತ ಮಳೆಯಿಂದ ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಸಾವಿವಾರುಕೋಟಿ ರೂ. ಬೆಳೆ ನಷ್ಟವಾಗಿದ್ದು, ಆಹಾರಧಾನ್ಯ ಬೆಳೆಗಳಿಗೆ ಎಕರೆಗೆ ಕನಿಷ್ಠ 25ಸಾವಿರರೂ., ತರಕಾರಿ, ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 1ಲಕ್ಷ ರೂ. ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಅಶೋಕ ಧವಳೆ ಆಗ್ರಹಿಸಿದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, `ಕೇಂದ್ರದ ಬಿಜೆಪಿ ಸರಕಾರವು ರೈತ ಸಮುದಾಯದ ನಂಬಿಕೆಯನ್ನು ಕಳೆದುಕೊಂಡಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ನಿಟ್ಟಿನಲ್ಲಿ ದಿಲ್ಲಿ ಗಡಿಗಳಲ್ಲಿ ಸೇರಿದಂತೆ ಹಲವೆಡೆ ನಡೆದ ಹೋರಾಟಕ್ಕೆ ಮಾಧ್ಯಮಗಳು ನಿರೀಕ್ಷಿತ ಬೆಂಬಲ ನೀಡಲಿಲ್ಲ. ಆದರೂ, ರೈತರು ಹೋರಾಡಿ ಗೆದ್ದಿದ್ದಾರೆ’ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಬದುಕಿನ ಬಗ್ಗೆ ಮಾತನಾಡಿದರೆ, ಸರಕಾರಕ್ಕೆ ಅದು ಆದ್ಯತೆಯ ವಿಷಯವಲ್ಲ. ಅಧಿವೇಶನದಲ್ಲಿ `ಮತಾಂತರ ನಿಷೇಧ ಕಾಯ್ದೆ’ ಮಂಡಿಸಲು ಮುಂದಾಗಿದೆ. ಭಾವನಾವಾದಿಗಳನ್ನು ಮೆಚ್ಚಿಸಿ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಅವರು ಆದ್ಯತೆ ನೀಡಿದ್ದಾರೆ. ರೈತ ವಿರೋಧಿ ಹಾಗೂ ಕರಾಳ ಕೃಷಿ ಕಾನೂನುಗಳನ್ನು ಈ ಅಧಿವೇಶನದಲ್ಲೇ ವಾಪಸ್ ಪಡೆಯಬೇಕು’ ಎಂದು ಅಲ್ಲಮ ಪ್ರಭು ಬೆಟ್ಟದೂರು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, `ಸಂಘರ್ಷ ಮಾಡುವುದರಲ್ಲಿ ನಾವು ಪ್ರವೀಣರು. ಇಡೀ ಸಮಾಜದ ಒಳಿತಿಗಾಗಿ ಬೆಂಕಿ ಹಚ್ಚಿಕೊಳ್ಳುವುದಕ್ಕೂ ಸಿದ್ಧವಿದ್ದೇವೆ. ಮುತ್ತಿಗೆಯನ್ನೂ ಹಾಕುತ್ತೇವೆ. ಇನ್ನೊಂದು ಆಯಾಮದ ಹೋರಾಟವೇ ಈ ರೈತ ಅಧಿವೇಶನ. ಸರ್ವಾಧಿಕಾರ ವರ್ಸಸ್ ಪ್ರಜಾಪ್ರಭುತ್ವ ಹೋರಾಟ ನಡೆಯುತ್ತಿದೆ. ಸರ್ವಾಧಿಕಾರಿಯ ನಡೆಯ ವಿರುದ್ಧ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವುದು ಪ್ರಜಾಪ್ರಭುತ್ವ ಉಳಿದಿದೆ, ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶವನ್ನು ನೀಡಿದೆ’ ಎಂದು ಹೇಳಿದರು.
ರೈತ ಅಧಿವೇಶನದಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಶಾಸಕ ಬಿ.ಆರ್.ಪಾಟೀಲ್, ಮುಖಂಡರಾದ ಸಿದ್ದಗೌಡ ಮೋದಗಿ, ಚಾಮರಸ ಮಾಲಿಪಾಟೀಲ್, ಶಾರದಾ ಗೋಪಾಲ್, ದೇವಿ, ಪ್ರಕಾಶ ಕಮ್ಮರಡಿ, ಬಿ.ಎ.ಸೊಪ್ಪಿನ, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಮಾವಳ್ಳಿ ಶಂಕರ್, ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಈ ವಿಧಾನಮಂಡಲ ಅಧಿವೇಶದಲ್ಲೇ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒಕ್ಕೊರಲ ದನಿಯಲ್ಲಿ ಮಂಡಿಸಲಾಯಿತು.
* ರಾಜ್ಯ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿಯಾದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು. ರೈತರ ಭೂಮಿಯನ್ನು ಕಿತ್ತು ಕಾರ್ಪೊರೇಟ್ ಕಂಪನಿಗಳ ಪಾಲಾಗಿಸುವುದನ್ನು ಕೈಬಿಟ್ಟು, ರೈತರಿಗೆ ಕೃಷಿಯು ಲಾಭದಾಯಕ ಆಗುವಂತೆ ಸಹಕಾರಿ ಬೇಸಾಯಕ್ಕೆ ಅಗತ್ಯ ಪ್ರೋತ್ಸಾಹ ನೀಡಬೇಕು.
* ರಾಜ್ಯದ ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ರದ್ದಾಗಬೇಕು. ಎಪಿಎಂಸಿಗಳನ್ನು ರೈತ ಸ್ನೇಹಿಯಾಗಿ ಮಾರ್ಪಡಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು.
* ರಾಜ್ಯದ ಹೈನುಗಾರಿಕೆಗೆ, ಆ ಮೂಲಕ ಸಣ್ಣ ರೈತರ ಪ್ರಮುಖ ಉಪ ಆದಾಯಕ್ಕೆ ಕೊಡಲಿ ಪೆಟ್ಟು ನೀಡಿರುವ ಜಾನುವಾರು ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗಳನ್ನು ರದ್ದುಪಡಿಸಬೇಕು. ಕೋಳಿ- ಕುರಿ ಸಾಕಣೆ, ರೇಷ್ಮೆ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಬೇಡಿಕೆಗಳನ್ನು ಈಡೇರಿಸಬೇಕು.
* ವಿದ್ಯುತ್ ಮಸೂದೆ 2020/2021 ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣ ನೀತಿ ಕೈಬಿಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ಹಾಗೂ ಸಾರ್ವಜನಿಕರ ಗೃಹ ಬಳಕೆಗೆ ಸ್ಮಾರ್ಟ್ ಮೀಟರ್ ಜೋಡಿಸುವ ದುಸ್ಸಾಹಸವನ್ನು ನಿಲ್ಲಿಸಬೇಕು. ವಿದ್ಯುತ್ ಬಿಲ್ಲಿನ ಎಲ್ಲ ವಿನಾಯಿತಿ ಹಾಗೂ ರಿಯಾಯಿತಿಗಳನ್ನು ಹಿಂದಿನಂತೆಯೇ ಮುಂದುವರಿಸಬೇಕು.
* ರಾಜ್ಯದ ಎಲ್ಲ ಪ್ರಮುಖ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧಗೊಳಿಸಬೇಕು. ರೈತರಿಗೆ ಆದಾಯ ಖಾತರಿಗೊಳಿಸುವ ಕಾಯ್ದೆ ಜಾರಿಗೆ ತರಬೇಕು.
* ರಾಜ್ಯದಾದ್ಯಂತ ಭೂಮಿ-ವಸತಿ ವಂಚಿತ ಬಡವರಿಗೆ ಜಮೀನು, ಮನೆ, ನಿವೇಶನ ಒದಗಿಸಬೇಕು. ಎಲ್ಲ ಅನಧಿಕೃತ (ಬಗರ್‌ಹುಕುಂ) ಭೂಮಿ ಹಾಗೂ ಮನೆಗಳನ್ನು ಸಕ್ರಮಗೊಳಿಸಿ, ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು. ಯಾವುದೇ ಕಾರಣಕ್ಕೂ ಬಡ ಜನರನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಒಕ್ಕಲೆಬ್ಬಿಸಬಾರದು.
* ಅರಣ್ಯ ಹಕ್ಕು ಕಾಯ್ದೆ -2006ನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕಾಯ್ದೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಇತರ ಪಾರಂಪರಿಕ ಅರಣ್ಯವಾಸಿಗಳ ಕೃಷಿ ಭೂಮಿ ಹಾಗೂ ಮನೆ ಜಾಗಗಳನ್ನು ಸಕ್ರಮಗೊಳಿಸಲು ಅನುಕೂಲವಾಗುವಂತೆ ಮಾಡಬೇಕು.
* ಕಬ್ಬು ಬೆಳೆಗಾರರ ಸಮಸ್ಯೆಗಳ ನಿವಾರಣೆಗಾಗಿ ಸಕ್ಕರೆ ಲಾಬಿಯನ್ನು ನಿಯಂತ್ರಿಸಬೇಕು. ಕಾರ್ಖಾನೆಗಳ ಅಕ್ರಮ- ಅವ್ಯವಹಾರಗಳನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು.
* ವಿವಿಧ ಇಲಾಖೆಗಳೊಂದಿಗಿನ ರೈತರ ವಿವಾದಗಳ ಪರಿಹಾರಕ್ಕಾಗಿ ಪ್ರತ್ಯೇಕ ಕಂದಾಯ ನ್ಯಾಯಾಲಯಗಳು ಹಾಗೂ ಸಹಕಾರ ವ್ಯಾಜ್ಯಗಳ ಪರಿಹಾರಕ್ಕಾಗಿ ಸಹಕಾರ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.
* ಮಹದಾಯಿ-ಕಳಸಾ-ಬಂಡೂರಿ ವಿವಾದವನ್ನು ಶೀಘ್ರವಾಗಿ ಪರಿಹರಿಸಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು.
* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರ ಎಲ್ಲ ಸಾಲಗಳನ್ನು ಒಂದು ಸಲದ ಕ್ರಮವಾಗಿ ಸಂಪೂರ್ಣವಾಗಿ ಸಾಲ ಮನ್ನಾ ಮಾಡಬೇಕು. ಸಾಲ ನೀಡುವಾಗ ಆದ್ಯತಾ ವಲಯ ಎಂದು ಪರಿಗಣಿಸಬೇಕು.
* ವಿಶೇಷ ಸಂದರ್ಭಗಳಲ್ಲಿ ಸಾಲಮನ್ನಾ ಮಾಡುವಂತಹ ಋಣಮುಕ್ತ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು.
* ಅತಿವೃಷ್ಟಿಯಿಂದ ಹಾಳಾದ ಆಹಾರ ಧಾನ್ಯದ ಬೆಳೆಗಳಿಗೆ ಎಕರೆಗೆ ₹25 ಸಾವಿರ ಹಾಗೂ ತೋಟಗಾರಿಕೆಗೆ ಎಕರೆಗೆ ₹1 ಲಕ್ಷ ಪರಿಹಾರ ಒದಗಿಸಬೇಕು. ಮನೆ ಕಳೆದುಕೊಂಡವರಿಗೆ ಸಮರ್ಪಕ ಪರಿಹಾರ ಕೊಡಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅವೈಜ್ಞಾನಿಕ ಮಾನದಂಡಗಳನ್ನು ಪರಿಷ್ಕರಿಸಬೇಕು.
* ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ₹250 ರಿಂದ ₹350ಕ್ಕೆ ಹೆಚ್ಚಿಸಬೇಕು. ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ವರದಿಗಳನ್ನು ಪ್ರಮಾಣಪತ್ರದ ಮೂಲಕ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮುಂದೆ ತರಬೇಕು. ಅಡಿಕೆ ಬೆಳೆಗಳಿಗೆ ಬಾಧಿಸುವ ಹಳದಿ ಎಲೆ ರೋಗ ಮತ್ತು ತೊಂಡೆ ರೋಗಕ್ಕೆ ಶೀಘ್ರವೇ ಪರಿಹಾರ ಕಲ್ಪಿಸಬೇಕು. ಸಮಸ್ಯೆಗಳ ನಿವಾರಣೆಗಾಗಿ ಅಡಿಕೆ ಅಭಿವೃದ್ಧಿ ಮಂಡಳಿ ರಚಿಸಬೇಕು.
* ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು.
* ಪಡಿತರ ವಿತರಣೆ ಪದ್ಧತಿಯನ್ನು ಕೇರಳ ಮಾದರಿಯಲ್ಲಿ ರೂಪಿಸಿ, ಎಲ್ಲ ಆಹಾರ ಸಾಮಗ್ರಿಗಳಿಗೂ ವಿಸ್ತರಿಸಬೇಕು. ಅಗತ್ಯ ವಸ್ತುಗಳ ಕಾಯ್ದೆಯನ್ನು ಮತ್ತಷ್ಟು ಗ್ರಾಹಕ ಸ್ನೇಹಿಯನ್ನಾಗಿ ರೂಪಿಸಿ ಪುನರ್ ಜಾರಿಗೊಳಿಸಬೇಕು.
* ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು. ಎಲ್ಲ ರೀತಿಯ ಗುತ್ತಿಗೆ ಅಥವಾ ಹೊರಗುತ್ತಿಗೆ ಉದ್ಯೋಗ ಪದ್ಧತಿಯನ್ನು ಕೊನೆಗೊಳಿಸಬೇಕು. ಸರ್ಕಾರಿ, ಅರೆ ಸರ್ಕಾರಿ ಇಲಾಖೆ/ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
* ಶೋಷಿತ- ಹಿಂದುಳಿದ ಹಾಗೂ ಬಡ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಾಪಸ್ ಪಡೆಯಬೇಕು. ಪ್ರಗತಿಪರ ವೈಜ್ಞಾನಿಕ ಶಿಕ್ಷಣ ಕ್ರಮಕ್ಕೆ ಒತ್ತು ಕೊಡಬೇಕು.