ಬೆಂಗಳೂರು: ಕೆಲ ದಿನಗಳಿಂದ ಕೊಂಚ ಬಿಡುವು ಪಡೆದಿದ್ದ ಮಳೆ, ಬೆಂಗಳೂರಿನಲ್ಲಿ ಧಾರಾಕಾರವಾಗಿ ಧರೆಗಿಳಿದಿದೆ. ಗುಡುಗು ಮಿಂಚು ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು ಕಂಡು ಬಂದಿದೆ.
ಮಹಾಲಯ ಅಮವಾಸೆಯದಂದು ರಜಾ ದಿನವಾಗಿದ್ದರಿಂದ ವಾಹನ ಸಂಚಾರ ಅಷ್ಟಾಗಿ ಇರಲಿಲ್ಲ. ಜೊತೆಗೆ ರಾತ್ರಿ 9 ಗಂಟೆಯ ನಂತರ ಮಳೆ ಆರಂಭವಾದ್ದರಿಂದ ಟ್ರಾಫಿಕ್ ಜಾಮ್ ಉಂಟಾದಂತೆ ಕಂಡು ಬಂದಿಲ್ಲ. ಅದಾಗ್ಯೂ ಕೆಲವೆಡೆ ವಾಹನ ಸಂಚಾರ ನಿಧಾನವಾಗಿದೆ. ನಗರದ ಮೆಜೆಸ್ಟಿಕ್, ರಾಜಾಜಿನಗರ, ವಿಜಯನಗರ, ಕೆಆರ್ ಮಾರುಕಟ್ಟೆ, ಸುಂಕದಕಟ್ಟೆ, ರಾಜರಾಜೇಶ್ವರಿನಗರ, ಜಯನಗರ, ಗಾಂಧಿ ಬಜಾರ್ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ.
ಬೆಳಿಗ್ಗೆಯಿಂದ ಸೂರ್ಯನ ಬಿಸಿ ಶಾಖ ನೆತ್ತಿ ಸುಡುವಂತಿತ್ತು. ಸಂಜೆ ನಾಲ್ಕು ಗಂಟೆ ಬಳಿಕ ಕೊಂಚ ಮೋಡ ಕವಿದ ವಾತಾವರಣವಿತ್ತು. 6ರ ನಂತರ ಕಪ್ಪು ಮೋಡ ಆವರಿಸಿ ಜೋರು ಗಾಳಿ ಬೀಸಿಲಾರಂಭಿಸಿತು. ರಾತ್ರಿ ಒಂಬತ್ತರ ನಂತರ ಮಳೆ ತೀವ್ರಗೊಂಡಿದೆ. ಹಲವು ದಿನಗಳ ಬಳಿಕ ಇಂದು ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗಿದೆ.
ಇದನ್ನೂ ಓದಿ: 50 ಕೋಟಿಗೆ ಬೇಡಿಕೆ; ಜೀವ ಬೆದರಿಕೆ ಆರೋಪದಡಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದೂರು
ಹಲವೆಡೆ ವಾಹನ ಸವಾರರು ಮೆಟ್ರೋ ಪಿಲ್ಲರ್ ಹಾಗೂ ಅಂಗಡಿಗಳ ಮುಂದೆ ನಿಂತಿರುವ ದೃಶ್ಯಗಳು ಕಂಡು ಬಂದಿವೆ. ಅಲ್ಲದೆ ಗಾಳಿ ಮಳೆಗೆ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ. ಇನ್ನೂ ಕೆಲವು ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಹೀಗೆ ಅನಿರೀಕ್ಷಿತ ಮಳೆಯಿಂದಾಗಿ ಬೆಂಗಳೂರು ತಂಪಾಗಿದೆ.
ಈ ವಾರ ಬೆಂಗಳೂರಿನಲ್ಲಿ ಹವಾಮಾನ ಹೇಗಿರುತ್ತೆ?
ಅಕ್ಟೋಬರ್ 3ರಂದು ನಗರದಲ್ಲಿ ಮಳೆಯಾಗುವುದಿಲ್ಲ. ಆದರೆ ಅಕ್ಟೋಬರ್ 4 ಮತ್ತು 5 ರಂದು ಲಘು ಮಳೆಯಾಗುವ ಸಾಧ್ಯತೆ ಇದೆ. ಇದರ ನಂತರ, ಅಕ್ಟೋಬರ್ 6 ರಂದು ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.
ಸೆಪ್ಟೆಂಬರ್ನಲ್ಲಿ ಕಡಿಮೆ ಮಳೆ ದಾಖಲು
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷ ಬೆಂಗಳೂರಿಗೆ ಅತ್ಯಂತ ಮಳೆಯ ತಿಂಗಳಾದ ಸೆಪ್ಟೆಂಬರ್ ಬಿಸಿ ವಾತಾವರಣವನ್ನು ಕಂಡಿದೆ. ಬೆಂಗಳೂರಿನ ಹವಾಮಾನ ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ಅವರ ಪ್ರಕಾರ, ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 19 ರವರೆಗೆ ಸಾಮಾನ್ಯವಾಗಿ 105.8 ಮಿಮೀ ಮಳೆಯಾಗಿದ್ದರೆ, ಈ ತಿಂಗಳು ಇದುವರೆಗೆ ಕೇವಲ 1.8 ಮಿಮೀ ಮಳೆಯಾಗಿದೆ. ಗಾಳಿಯು ಬೆಚ್ಚಗಿರುತ್ತದೆ ಮತ್ತು ವಾತಾವರಣದಲ್ಲಿ ಒಟ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಮೋಡಗಳು ರೂಪುಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು IMD ಹೇಳುತ್ತದೆ. ಇದರಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗಿದೆ.
ರಾಜ್ಯದಾದ್ಯಂತ ಮಳೆ… ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕೊಡಗು, ಮಂಡ್ಯ, ಮೈಸೂರು, ತುಮಕೂರು, ಉಡುಪಿ, ಗದಗ, ಹಾವೇರಿ, ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮುಂದಿನ ಒಂದು ವಾರ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ 150 – ಭಾಗ 2 ಭಾರತದ ಪ್ರಾಪಗ್ಯಾಂಡ ಸಿನಿಮಾ:ಒಂದು ಇಣುಕು ನೋಟ – ಕೆ.ಫಣಿರಾಜ್ಮ ಶ್ರೀ ಮುರಳಿ ಮಾತುಕತೆ