ಸುರಿಯುತ್ತಲೇ ಇದೆ ಮಳೆ, ಇನ್ನೂ ನಾಲ್ಕು ದಿನ ಇದೇ ರಗಳೆ

  • ಮಳೆ ಜೊತೆಯಲ್ಲೇ ಥಂಡಿ ವಾತಾವರಣ
  • ಸೂರ್ಯನ ದರ್ಶನ ಕಾಣದ ಬೆಂಗಳೂರು
  • ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೆರೆ ನೀರು ಖಾಲಿಯಾಗಲು ಸಮಯವೇ ಸಿಗುತ್ತಿಲ್ಲ

ಬೆಂಗಳೂರು :  ಬೆಂಗಳೂರು ಈಗ ಮಳೆಯೂರಾಗಿ ಬಿಟ್ಟಿದೆ. ಕಳೆದ ಒಂದು ವಾರದಿಂದ ಬೆಂಗಳೂರು ನಗರದ ಜನತೆಗೆ  ಮಳೆ ರೂಢಿಯಾಗಿದ್ದು, ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದರೆ, ಸಂಜೆ 6 ಗಂಟೆ ಸುಮಾರಿಗೆ ಆರಂಭವಾಗುವ ಮಳೆ ಬೆಳಗ್ಗೆವರೆಗೂ ಆಗಾಗ ಸುರಿಯುತ್ತಲೇ ಇರುತ್ತದೆ.

ಬೆಂಗಳೂರಿನಲ್ಲಿ ಪ್ರತಿ ಸಂಜೆ ಆರಂಭವಾಗುವ ಮಳೆ ಮಾರನೇ ದಿನ ಬೆಳಗ್ಗೆವರೆಗೂ ಆಗಾಗ ಬರುತ್ತಲೇ ಇರುತ್ತದೆ. ಹೀಗಾಗಿ, ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೆರೆ ನೀರು ಖಾಲಿಯಾಗಲು ಸಮಯವೇ ಸಿಗುತ್ತಿಲ್ಲ. ಬೆಳಗಿನಿಂದ ಸಂಜೆವರೆಗೆ ಒಂದಷ್ಟು ನೀರು ಕಡಿಮೆ ಆದರೂ, ಸಂಜೆ ವೇಳೆಗೆ ಸುರಿಯುವ ಮಳೆ ಇನ್ನಷ್ಟು ನೀರಿನ ಸಂಗ್ರಹ ಹೆಚ್ಚಿಸುತ್ತಿದೆ.

ಇನ್ನೂ 4 ದಿನ ಮಳೆಯಾಟ..! : ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇನ್ನೂ ಐದು ದಿನ ಮಳೆಯಾಗುವ ಸಾಧ್ಯತೆ ಇದೆ. ಗುಡುಗು – ಮಿಂಚಿನ ಸಮೇತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ 18 ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಎಚ್ಚರಿಕೆ ರವಾನಿಸಲಾಗಿದೆ.

ಬೆಂಗಳೂರು ನಗರದಲ್ಲಿ ಹೆಚ್ಚಿದ ಶೀತ : ಬೆಂಗಳೂರು ನಗರದಲ್ಲಿ ಕನಿಷ್ಟ ತಾಪಮಾನ 19 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, ಮುಂದಿನ ಭಾನುವಾರದವರೆಗೂ ಇದೇ ವಾತಾವರಣ ಇರಲಿದೆ. ಇನ್ನು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ದಾಟುವುದಿಲ್ಲ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ 8 ಗುರುವಾರವಂತೂ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಶಿಯಸ್‌ಗೆ ಕುಸಿಯಬಹುದು ಎಂದು ವೆದರ್ ಡಾಟ್ ಕಾಂ ಅಂದಾಜಿಸಿದೆ.

ಬೆಂಗಳೂರಿನ ಇನ್ನಿತರ ಎಲ್ಲ ಭಾಗಗಳಿಗೆ ಹೋಲಿಸಿದರೆ ಐಟಿ ಉದ್ಯಮ ವ್ಯಾಪಿಸಿರುವ ಪೂರ್ವ ಭಾಗದ ಬಡಾವಣೆಗಳಲ್ಲೇ ಮಳೆ ಅನಾಹುತ ಹೆಚ್ಚಾಗಿ ವರದಿಯಾಗುತ್ತಿದೆ. ನೀರು ಸರಾಗವಾಗಿ ಹರಿದು ಹೋಗದ ಪರಿಣಾಮ, ರಸ್ತೆಗಳು, ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳ ತುಂಬೆಲ್ಲಾ ನೀರು ನಿಲ್ಲುತ್ತಿದೆ. ಈ ಭಾಗದಲ್ಲಿ ಕೆರೆಗಳು ತುಂಬಿದ್ದು, ಕೋಡಿ ಹರಿದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಜನವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *