ಲಿಂಗಸ್ಗೂರು: ರಾಯಚೂರಿನಲ್ಲಿ ಅಕ್ಟೋಬರ್ 14 ರಿಂದ 16ರ ವರೆಗೆ ನಡೆಯಲಿರುವ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) 17ನೇ ರಾಜ್ಯ ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆಯನ್ನು ಪಟ್ಟಣದ ಗುರುಭವನದಲ್ಲಿ ನಡೆಸಲಾಯಿತು.
ಈ ಸಭೆಗೆ ಮಾರ್ಗದರ್ಶಕರಾಗಿ ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ್ ಭಾಗವಹಿಸಿ ಮಾತನಾಡಿ, 2016 ರಿಂದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ರೈತರು ಸಾಲಗಾರರಾಗಿ ಪರಿತಪಿಸುವ ಸ್ಥಿತಿಗೆ ತಲುಪಿದ್ದಾರೆ. ಕೃಷಿಗೆ ರೈತನು ಮಾಡಿದ ಸಾಲವು ಮರುಪಾವತಿಗಾಗಿ ಸ್ಥಿರ-ಚರ ಆಸ್ತಿ ಮಾರಾಟ ಮಾಡಿದರು ಸಾಲ ತೀರಲಾಗದ ಮಟ್ಟಕ್ಕೆ ತಲುಪುವಂತಾಗಿದೆ. ಇದರಿಂದಾಗಿ ಇಂದು ನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವುಗಳಿಂದ ಮುಕ್ತಿ ದೊರಕಲು ಕೇರಳ ರಾಜ್ಯದ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಜಾರಿ ಹಾಗೂ ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಗಳನ್ನು ಜಾರಿಗೆ ತರಬೇಕೆಂಬುದ ರಾಜ್ಯ ಸಮ್ಮೇಳನದ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.
ಬಲವಂತದ ಭೂ ಸ್ವಾಧೀನ ಕಾಯ್ದೆ ವಿರೋಧಿಸಿ ಹಾಗೂ ಬಗರ್ ಹುಕ್ಕುಂ ಹಾಗೂ ಅರಣ್ಯ ಭೂಮಿ ಬಡ ರೈತರಿಗೆ ಹಂಚಿಕೆಗಾಗಿ, ಈಗಾಗಲೇ ಹೊರಡಿಸಿರುವ ಹೊಸ ವಿದ್ಯುತ್ ಬಿಲ್, ಜಲನೀತಿ ಕಾಯಿದೆ ವಿರುದ್ಧ ಹಾಗೂ ಸಮಗ್ರ ನೀರಾವರಿಗಾಗಿ, ರೈತರ ಸಾಲ ಮನ್ನಾ,ಕೋಮವಾದ ನಿಗ್ರಹಕ್ಕೆ ಮತ್ತು ಸೌಹಾರ್ದತೆಯ ಸಂರಕ್ಷಣೆಗಾಗಿ, ಒತ್ತಾಯಿಸಿ ರಾಜ್ಯ ಸಮ್ಮೇಳನವನ್ನು ನಡೆಲಾಗುತ್ತಿದೆ ಎಂದರು.
ಕೆಪಿಆರ್‌ಎಸ್ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ರಮೇಶ್ ವೀರಾಪುರ್ ಮಾತನಾಡಿ, ಸಮ್ಮೇಳನವು ರಾಯಚೂರು ಪಟ್ಟಣದ ಹೈದರಾಬಾದ್ ಬೈಪಾಸ್ ರೋಡ್ ನಲ್ಲಿರುವ ಹರ್ಷಿತಾ ಗಾರ್ಡನ್ ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಮೊದಲ ದಿನ ಬೆಳಗ್ಗೆ 12 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬಹಿರಂಗ ಸಭೆ ನಡೆಸಲಾಗುತ್ತಿದೆ. ಆದ್ದರಿಂದ ತಾಲೂಕಿನ ವಿವಿಧಡೆಗಳಿಂದ ರೈತರು ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಆರ್ ಎಸ್ ತಾಲೂಕ ಮುಖಂಡರಾದ ಆಂಜನೇಯ ನಾಗಲಾಪುರ, ಸದ್ದಾಮ್ ಹುಸೇನ್, ನಿಂಗಪ್ಪ ಎಂ, ರಮೇಶ್ ಭಜಂತ್ರಿ, ಮುದುಕನ ಗೌಡ, ಚಾಂದ್ ಪಾಷಾ, ಹನುಮಂತ ಕೆರಿಹೊಲ, ನಾಗರಾಜ್ ಕೋಠಾ, ಹನುಮಂತ ಚಲುವಾದಿ, ಬಿಸಿಯೂಟ ನೌಕರ ಸಂಘಟನೆಯ ಸುಮಂಗಲ, ಸುಜಾತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.