ರಾಯಚೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಂದು ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಹಾಕಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿ ಫೋಷಕರು, ಸಂಬಂಧಿಕರು ವಸತಿ ಕಾಲೇಜಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಸೂಗೂರಿನ ಸರ್ ಎಂ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನ, ಮಹಿಳಾ ವಿದ್ಯಾರ್ಥಿನಿ ವಸತಿ ನಿಲಯದ ಕೊಠಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದ್ದು, ಈ ಸಾವಿನ ಹಿಂದೆ ಕಾಲೇಜು ಪ್ರಾಚಾರ್ಯರ ಕೈವಾಡ ಇದೆ. ಕಾಲೇಜಿನ ಪ್ರಾಂಶುಪಾಲ ರಮೇಶ್ ಎಂಬಾತನೆ ಕೊಲೆ ಮಾಡಿ ತನ್ನ ವಿರುದ್ಧ ಆರೋಪ ಬರದಂತೆ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ : ಆಳಂದ: ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ
ಪ್ರಾಚಾರ್ಯರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪ ಕೇಳಿ ಬರುತ್ತಿದ್ದು, ಅವರ ಮೇಲೆ ದೂರು ಕೂಡ ನೀಡಲಾಗಿದೆ. ಮೃತ ವಿದ್ಯಾರ್ಥಿನಿ ಈ ಸಂಸ್ಥೆಯಲ್ಲಿ ಪಿ.ಯು.ಸಿ ಪ್ರಥಮ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದಳು. ಅಲ್ಲಿನ ಸಂಸ್ಥೆಯ ಮಹಿಳಾ ವಸತಿ ನಿಲಯದಲ್ಲಿ ವಾಸವಿದ್ದಳು ಎಂದು ತಿಳಿದು ಬಂದಿದೆ.
ಪ್ರಾಚಾರ್ಯರು ವಿದ್ಯಾರ್ಥಿನಿಗೆ ಆಗಾಗ್ಗೆ ಲೈಂಗಿಕ ಪೀಡಿಸುತ್ತಿದ್ದ, ಅಲ್ಲದೇ ಅವಾಚ್ಯ ಶಬ್ದಗಳಿಂದ ವೈಯಕ್ತಿವಾಗಿ ಹಾಗೂ ಜಾತಿ ನಿಂದನೆ ಮಾಡಿದ್ದಾನೆ. 2023 ಫೆಬ್ರವರಿ 3 ರಂದು ಪ್ರಾಚಾರ್ಯ ವಿದ್ಯಾರ್ಥಿನಿಯನ್ನು ತನ್ನ ಕೊಠಡಿಗೆ ಕರೆದು, ಅತ್ಯಾಚಾರ ಮಾಡಿ, ಸಮವಸ್ತ್ರದಿಂದ ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯ ಚಿಕ್ಕಪ್ಪ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದೆವರೆಸಿದ್ದಾರೆ.