ರಾಯಚೂರು: ಚಂದನವನದ ಗಂಧದಗುಡಿ, ದೊಡ್ಮನೆಯ ಕಣ್ಮಣಿ ಪುನೀತ್ ರಾಜಕುಮಾರ್ ಅವರು ಅಗಲಿ ಅಕ್ಟೋಬರ್‌ಗೆ ಎರಡು ವರ್ಷಗಳು ಕಳೆಯುತ್ತವೆ. ಆದರೆ, ಅವರ ಮೇಲಿನ ಅಭಿಮಾನ ಪ್ರೀತಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಾಯಚೂರು ಜಿಲ್ಲೆಯಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ತಮ್ಮ ಭತ್ತದ ಗದ್ದೆಯಲ್ಲಿ ಬೆಳೆದ ಭತ್ತದ ಬೆಳೆಯಲ್ಲಿ ಅಪ್ಪುವಿನ ಚಿತ್ರ. ಅಪ್ಪು
ಇದನ್ನೂ ಓದಿ:ಮೊದಲ ವರ್ಷದ ಸ್ಮರಣೆ; ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ರಾಜ್ ಕುಟುಂಬ
ಅಪ್ಪುವಿನ ಅಪ್ಪಟ ಅಭಿಮಾನಿ ರೈತ ಹಾಗೂ ಕಲಾವಿದರಾದ ಸತ್ಯನಾರಾಯಣ ಅವರು ವಿಭಿನ್ನ ಕಲೆಯ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದ್ದಾರೆ. ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತನಾಗಿರುವ ಅಭಿಮಾನಿ ಸತ್ಯನಾರಾಯಣ ಅವರು ತಮ್ಮ ಭತ್ತದ ಗದ್ದೆಯಲ್ಲಿ ಅಪ್ಪುವಿನ ಚಿತ್ರವನ್ನು ಬಿಡಿಸುವ ಮೂಲಕ ಮುನ್ನೆಲೆಗೆ ಬಂದಿದ್ದಾರೆ.
ಸತ್ಯನಾರಾಯಣ ಅವರು ತಮ್ಮ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪುವಿನ ಚಿತ್ರ ಬಿಡಿಸುವ ಮೂಲಕ ಅಪ್ಪು ಅಭಿಮಾನಿಗಳ ಕಣ್ಣಂಚಲ್ಲಿ ನೀರು ತರಿಸಿದ್ದಾರೆ. ಸತ್ಯನಾರಾಯಣ ಅವರ ಅಪ್ಪು ಮೇಲಿನ ಅಭಿಮಾನಕ್ಕೆ ನೋಡುಗರು ಕಣ್ತುಂಬಿಕೊಂಡಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಮಳೆಯ ಅಭಾವ ಹೆಚ್ಚಾಗಿದೆ. ರೈತರು ಬೆಳೆ ಬೆಳೆಯಲು ಕಷ್ಟದ ಅವಧಿ ಇದಾಗಿದೆ. ಹೀಗಿರುವಾಗ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು ಮೂರು ಲಕ್ಷ ರೂ. ಖರ್ಚು ಮಾಡಿ, ನಿತ್ಯ ನಿಗಾವಹಿಸಿ 90 ದಿನದ ಬೆಳೆಯಲ್ಲಿ ಈ ಕಲಾಚಿತ್ರವನ್ನು ಸತ್ಯನಾರಾಯಣ ಮೂಡಿಸಿದ್ದಾರೆ.
ಇದನ್ನೂ ಓದಿ:ಇಂದು ಪುನೀತ್ ರಾಜ್ಕುಮಾರ್ ಸ್ಮರಣೆ : ಮಾಸದ ಅಪ್ಪು ನೆನಪು
ತೆಲಂಗಾಣ, ಗುಜರಾತ್‌ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯುವ ಪದ್ಧತಿಯಲ್ಲಿ ಬೆಳೆದು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಭಾವಚಿತ್ರದ ಕೆಳಗೆ ʼಕರ್ನಾಟಕ ರತ್ನʼ ಅನ್ನೋ ಅಕ್ಷರಗಳನ್ನೂ ಬೆಳೆಯಲ್ಲಿ ಬರೆದಿದ್ದಾರೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ಉತ್ತಮ ಬೆಳೆ ಬೆಳೆಯುವ ಮೂಲಕ ಅಪ್ಪುಗೆ ದ್ವಿತೀಯ ಪುಣ್ಯಸ್ಮರಣೆಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ ಸತ್ಯನಾರಾಯಣ.
ಸತ್ಯನಾರಾಯಣ ಅವರು ಅಪ್ಪು ಮೇಲಿಟ್ಟಿರುವ ಅಭಿಮಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಡೀ ಗ್ರಾಮವೇ ಅವರ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದೆ. ಚಪ್ಪಲಿ ಹಾಕದೆ ಬರಿಗಾಲಲ್ಲೇ ಉಳುಮೆ ಮಾಡಿರುವ ರೈತ ಗದ್ದೆಗೆ ಪೂಜೆ ಮಾಡುವ ಮೂಲಕ ಅಪ್ಪು ಮೇಲಿನ ಅಭಿಮಾನದ ಭಕ್ತಿ ತೋರಿದ್ದಾರೆ. ಸಾಮಾನ್ಯ ಕಣ್ಣಿಗೆ ಕಪ್ಪು, ಹಸಿರು ಬೆಳೆ ಮಾತ್ರ ಕಾಣುತ್ತಿದ್ದರು ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ಅಪ್ಪು ಚಿತ್ರ ಆಕರ್ಷಕವಾಗಿ ಮೂಡಿಬಂದಿದೆ. ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.