ನಿರುದ್ಯೋಗದ ಬಗ್ಗೆ ರಾಹುಲ್‌ ಹೇಳಿಕೆಗಳು ಹತಾಶೆಯ ಪ್ರತೀಕ; ಕೈ ವಿರುದ್ದ ಕಮಲ ಟೀಕಾಪ್ರಹಾರ

ನವದೆಹಲಿ : ಇಂಗ್ಲೆಂಡ್‍ನಲ್ಲಿ ರಾಹುಲ್‍ಗಾಂಧಿ ನೀಡಿರುವ ಪ್ರತಿಯೊಂದು ಹೇಳಿಕೆಯನ್ನು ದುರ್ಬೀನ್ನು ಹಾಕಿ ವಿಶ್ಲೇಷಣೆ ಮಾಡುವ ಮೂಲಕ ಬಿಜೆಪಿ ನಾಯಕರು ಮತ್ತಷ್ಟು ಟೀಕಾಪ್ರಹಾರ ಮುಂದುವರೆಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿನ ನಿರುದ್ಯೋಗ ಕುರಿತು ರಾಹುಲ್‍ಗಾಂಧಿ ನೀಡಿರುವ ಹೇಳಿಕೆಯನ್ನು ಹತಾಶೆಯ ಪ್ರತೀಕ ಎಂದು ಬಿಜೆಪಿ ಹಿರಿಯ ನಾಯಕ ಅಮಿತ್ ಮಾಳವೀಯ ವಾಗ್ದಾಳಿ ನಡೆಸಿದ್ದಾರೆ. ಚಾಥೋಮ್‍ ಹೌಸ್‍ನಲ್ಲಿನ ಸಂವಾದದಲ್ಲಿ ಮಾತನಾಡಿದ ರಾಹುಲ್‍ಗಾಂಧಿ, ತಾವು ಬಳ್ಳಾರಿಯಲ್ಲಿ ಪಾದಯಾತ್ರೆ ನಡೆಸುವಾಗ ಗಮನಿಸಿದ ಅಂಶವನ್ನು ಸಂವಾದದಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕದ ಬಳ್ಳಾರಿ ಜಿಲ್ಲೆ ಜಿನ್ಸ್ ಉತ್ಪಾದನಾ ವಲಯವಾಗಿತ್ತು. ಐದು ಲಕ್ಷ ಜನ ಉದ್ಯೋಗ ಪಡೆದಿದ್ದರು. ಈಗ ಅಲ್ಲಿ ನಾಲ್ಕುವರೆ ಲಕ್ಷ ಜನ ನಿರುದ್ಯೋಗಿಗಳಾಗಿದ್ದಾರೆ. 40 ಸಾವಿರ ಮಂದಿ ಮಾತ್ರ ಉದ್ಯೋಗಿಗಳಾಗಿ ಉಳಿದಿದ್ದಾರೆ. ದೇಶದ ಯಾವುದೇ ಯಾವುದೇ ಜಿಲ್ಲೆಗೆ ಹೋದರೂ ಈ ರೀತಿಯ ನಿರುದ್ಯೋಗ ಕಂಡು ಬರುತ್ತಿದೆ. ಬಳ್ಳಾರಿ, ಮೊರಾದಬಾದ್ ಸೇರಿದಂತೆ ಅನೇಕ ಪ್ರಾಂತ್ಯದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಕೌಶಲ್ಯ ಆಧಾರಿತ ಕ್ಷೇತ್ರಗಳು ಸೋರಗುತ್ತಿವೆ. ದೇಶದ ಬ್ಯಾಂಕಿಂಗ್ ಕ್ಷೇತ್ರ ಸಣ್ಣಪುಟ್ಟ ಉದ್ಯಮ ಮತ್ತು ವ್ಯಾಪಾರಿ ವಲಯವನ್ನು ಕಡೆಗಣಿಸಿದೆ, ಕೆಲವೇ ಕೆಲವು ಶ್ರೀಮಂತರಿಗೆ ಆದ್ಯತೆ ನೀಡುತ್ತಿದೆ, ಬೃಹತ್ ಉದ್ಯಮಗಳತ್ತ ಮಾತ್ರ ಗಮನ ಕೇಂದ್ರಿಕರಿಸಿದೆ ಎಂದು ಆರೋಪಿಸಿದರು.

ರಾಹುಲ್‍ಗಾಂಧಿ ಅವರು ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡು ವಾಗ್ದಾಳಿ ನಡೆಸಿರುವ ಅಮಿತ್ ಮಾಳವೀಯ, ಜನ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿಲ್ಲ ಎಂಬ ಹತಾಸೆಯಿಂದ ಕಾಂಗ್ರೆಸ್ ನಾಯಕ ಮಾತನಾಡುತ್ತಿದ್ದಾರೆ ಟೀಕಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಜನಸಂಖ್ಯೆ ಇರುವುದೇ 4.1 ಲಕ್ಷ. ಅಲ್ಲಿನ ಜಿನ್ಸ್ ಉದ್ಯಮದಲ್ಲಿ ಐದು ಲಕ್ಷ ಜನ ಕೆಲಸ ಮಾಡಲು ಹೇಗೆ ಸಾಧ್ಯ. ನಾಲ್ಕುವರೆ ಲಕ್ಷ ಮಂದಿ ನಿರುದ್ಯೋಗಿಗಳಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರ ಸರ್ಕಾರದ ಅವಯಲ್ಲಿ ಕೈಗಾರಿಕೆಗಳು ನೀರಿಲ್ಲದೆ ಪರದಾಡುತ್ತಿದ್ದವು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಸಮಸ್ಯೆಯನ್ನು ಬಗೆ ಹರಿಸಿದೆ ಎಂದು ಹೇಳಿದ್ದಾರೆ.

ವಿದೇಶಿ ನೀತಿ ಕುರಿತು ರಾಹುಲ್‍ಗಾಂಧಿ ಮಾತನಾಡಿರುವ ವಿಡಿಯೋದ ಆಯ್ದ ತುಣುಕುಗಳನ್ನು ಹಂಚಿಕೊಂಡಿರುವ ಅಮಿತ್ ಮಾಳವೀಯ, ನಮ್ಮ ಈಗಿನ ವಿದೇಶಾಂಗ ನೀತಿ ದುರಾಷ್ಟವಶಾತ್ ಸ್ವಹಿತಾಸಕ್ತಿಗೆ ಸಿಲುಕಿದೆ ಎಂದು ರಾಹುಲ್ ಹೇಳಿದ್ದಾರೆ. ಸ್ವಹಿತಾಸಕ್ತಿಯನ್ನು ತನ್ನ ಕೇಂದ್ರವಾಗಿಟ್ಟುಕೊಂಡಿರುವ ವಿದೇಶಾಂಗ ನೀತಿಯ ದುರದೃಷ್ಟವೇ? ಮೋದಿ ಸರ್ಕಾರ ಭಾರತಕ್ಕೆ ಮೊದಲ ಸ್ಥಾನ ನೀಡಿದೆ, ಆದರೆ ರಾಹುಲ್ ಗಾಂಧಿ ಯಾರ ಹಿತಾಸಕ್ತಿಯನ್ನು ಭಾರತಕ್ಕಿಂತ ಮುಂದಿಡಲು ಬಯಸುತ್ತಾರೆ? ಇದು ದೇಶದ ಬಗೆಗಿನ ಅವರ ಬದ್ಧತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ. ಮುಂದುವರಿದು, ಭಾರತದ ವಿದೇಶಾಂಗ ನೀತಿ, ರಾಹುಲ್ ಗಾಂಧಿಯವರ ಪ್ರಕಾರ, ಗ್ರಾಮದಿಂದ ನಗರಕ್ಕೆ ಪರಿವರ್ತನೆಯಾಗುವುದನ್ನು ಪ್ರತಿಬಿಂಬಿಸಬೇಕು? ಇದು ಕುತಂತ್ರದ ಭಾಗ ಎಂದು ಕಿಡಿಕಾರಿದ್ದಾರೆ.

ರಾಹುಲ್‍ಗಾಂಧಿ ಹೇಳಿಕೆ ಆಧರಿಸಿ ಅಮಿತ್ ಮಾಳವೀಯ, ರವಿಶಂಕರ್ ಪ್ರಸಾದ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಅನುರಾಗ್‍ಸಿಂಗ್‍ ಠಾಕೂರ್ ಸೇರಿದಂತೆ ಅನೇಕರು ವಾಗ್ದಾಳಿ ನಡೆಸಿದ್ದಾರೆ. ರಾಹುಲ್‍ಗಾಂಧಿ ಇಂಗ್ಲೆಂಡ್‍ನಲ್ಲಿ ಮಾತನಾಡಿರುವ ಕುರಿತು ಭಾರತೀಯ ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡಿಲ್ಲ. ಆದರೆ ಬಿಜೆಪಿಯ ನಾಯಕರು ಪ್ರತಿಯೊಂದು ವಿಡಿಯೋ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಟೀಕಿಸುವ ಮೂಲಕ ರಾಹುಲ್ ಏನು ಮಾತನಾಡಿದ್ದಾರೆ ಎಂಬುದನ್ನು ಜನರಿಗೆ ತಲುಪಿಸುತ್ತಿದ್ದಾರೆ. ಕೆಲವು ಭಾರಿ ತಮಗೆ ಅನುಕೂಲವಾಗುವಷ್ಟು ಮಾತ್ರ ವಿಡಿಯೋ ಎಡಿಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರ್ಯಾರು ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಿಲ್ಲ. ಆದರೆ ಬಿಜೆಪಿಯವರ ಪ್ರಚಾರದಿಂದ ವ್ಯಾಪಕ ಪ್ರಚಾರ ಸಿಗುತ್ತಿದೆ ಎಂದು ಕಾಂಗ್ರೆಸ್‌ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *