ಮಾ.20 ರಂದು ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ರಾಹುಲ್‌ ಚಾಲನೆ

ಬೆಂಗಳೂರು :  ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಮಾರ್ಚ್ 20ರಂದು ಬೆಳಗಾವಿಗೆ ಆಗಮಿಸಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಈಗಾಗಲೇ ಮೊದಲ ಹಂತದಲ್ಲಿ ಜಂಟಿ ಪ್ರಜಾಧ್ವನಿ ಯಾತ್ರೆ ನಡೆಸಿದ್ದು, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ, ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿ.ಕೆ.ಶಿವಕುಮಾರ್, ಕರಾವಳಿ ಭಾಗದಲ್ಲಿ ಬಿ.ಕೆ.ಹರಿಪ್ರಸಾದ್ ಪ್ರಜಾಧ್ವನಿ ಯಾತ್ರೆ ನಡೆಸಿದ್ದಾರೆ.

ಮೂರನೇ ಹಂತದಲ್ಲಿ ಡಿ.ಕೆ.ಶಿವಕುಮಾರ್ ಉತ್ತರ ಭಾಗದಲ್ಲಿ, ಸಿದ್ದರಾಮಯ್ಯ ದಕ್ಷಿಣ ಭಾಗದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ನಾಯಕರ ಮೊರೆ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಅನೇಕ ಹಿರಿಯ ನಾಯಕರು ರಾಜ್ಯದಲ್ಲಿ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ : ನಿಗದಿತ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ; ಮೇ 10ರೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣ

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ರಾಜ್ಯದ ಎಂಟು ಜಿಲ್ಲೆಗಳ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 350 ಕಿಲೋ ಮೀಟರ್‌ ದೂರ ಕ್ರಮಿಸಿದೆ. ನಾಲ್ಕು ಬಹಿರಂಗ ಸಮಾವೇಶಗಳು ನಡೆದಿವೆ. ಅನಂತರ ಕಾಂಗ್ರೆಸ್ ಕಂದಾಯ ವಿಭಾಗದಲ್ಲಿ ತಲಾ ಒಂದರಂತೆ ಬೃಹತ್ ಸಮಾವೇಶಗಳನ್ನು ನಡೆಸಿದೆ.

ಬೆಂಗಳೂರಿನಲ್ಲಿ ಮಹಿಳಾ ನಾಯಕಿಯರ ಸಮಾವೇಶಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಭರವಸೆಯ ನಾಯಕಿ ಪ್ರಿಯಾಂಕ ಗಾಂಧಿ ವಾರ್ದಾ ಭಾಗವಹಿಸಿದ್ದರು. ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದನ್ನೂ ಹೊರತು ಪಡಿಸಿದರೆ ಇತ್ತೀಚಿನ ದಿನಗಳಲ್ಲಿ ಖರ್ಗೆ ಅವರು ರಾಜ್ಯದಲ್ಲಿ ಹೆಚ್ಚು ಪ್ರಚಾರ ನಡೆಸಿಲ್ಲ.

ಇದನ್ನೂ ಓದಿ : ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

ಭಾರತ್ ಜೋಡೋ ಯಾತ್ರೆ ಮುಗಿಸಿಕೊಂಡು ಹೋಗಿದ್ದ ರಾಹುಲ್‍ಗಾಂಧಿ ಮರಳಿ ಮಾರ್ಚ್ 20ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ರಾಹುಲ್‍ಗಾಂಧಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಈ ತಿಂಗಳಾಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ವಿಧಾನಸಭೆ ಚುನಾವಣೆಗೆ ವೇಳಾ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದೆ. ಈಗಾಗಲೇ ಅಬ್ಬರದ ಪ್ರಚಾರ, ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿಗಳು ಹಾಗೂ ಗ್ಯಾರಂಟಿ ಭರವಸೆಗಳಿಂದ ಮುಂಚೂಣಿ ಕಾಯ್ದುಕೊಂಡಿರುವ ಕಾಂಗ್ರೆಸ್ ರಾಹುಲ್‍ಗಾಂಧಿ ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಲಿದೆ ಎಂದು ಹೇಳಲಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *