ರಾಹುಲ್‌ ಪಪ್ಪು ಅಲ್ಲ, ಅವರೊಂದಿಗೆ ಲಕ್ಷಾಂತರ ಜನರು ನಡೆಯುತ್ತಿದ್ದಾರೆ : ಪ್ರಿಯಾಂಕಾ ಗಾಂಧಿ

ವದೆಹಲಿ: ರಾಹುಲ್ ಗಾಂಧಿ ಅವರು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್‍ನಲ್ಲಿ ಓದಿದ್ದಾರೆ. ಆದರೆ ಅವರನ್ನು ಪಪ್ಪು ಎಂದು ಕರೆಯುತ್ತಾರೆ. ಅವರು ಪಪ್ಪು ಅಲ್ಲ ಮತ್ತು ಅವರೊಂದಿಗೆ ಲಕ್ಷಾಂತರ ಜನರು ನಡೆಯುತ್ತಿದ್ದಾರೆ ಎಂದು ತಿಳಿದಾಗ, ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಸರ್ಕಾರದವರು ವಿಚಲಿತರಾದರು. ಒಬ್ಬ ವ್ಯಕ್ತಿಯನ್ನು ತಡೆಯಲಿ ಇಷ್ಟೆಲ್ಲ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಹೋದರನ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು    ರಾಹುಲ್ ಗಾಂಧಿಯನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದರು. ಕೈಗಾರಿಕೋದ್ಯಮಿ ಗೌತಮ್ ಅದಾನಿ ಕುರಿತು ಪ್ರಧಾನಿಯನ್ನು ಪ್ರಶ್ನಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿದೆ. ಈ ಕ್ರಮದ ಹಿಂದೆ ಇರುವವರಿಗೆ ಜನರು ತಕ್ಕ ಉತ್ತರ ನೀಡುತ್ತಾರೆ. ನನ್ನ ಕುಟುಂಬದ ರಕ್ತ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬೆಳೆಸಿದೆ, ಈ ದೇಶದ ಪ್ರಜಾಪ್ರಭುತ್ವಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಕಾಂಗ್ರೆಸ್‍ನ ಮಹಾನ್ ನಾಯಕರು ಈ ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದರು. ಸರ್ಕಾರದವರು ನಮ್ಮನ್ನು ಹೆದರಿಸಬಹುದು ಎಂದು ಅವರು ಭಾವಿಸಿದರೆ ಅದು ತಪ್ಪು, ನಾವು ಮಾತನಾಡುವುದನ್ನು ನಿಲ್ಲಿಸುವುದಿಲ್ಲ, ಭಯಪಡುವುದಿಲ್ಲ. ಈಗ ಸಮಯ ಬಂದಿದೆ. ಇನ್ನು ಮುಂದೆ ನಾನು ಮೌನವಾಗಿರುವುದಿಲ್ಲ ಎಂದು ಅವರು ಗುಡುಗಿದ್ದಾರೆ. 

ಯಾರೂ ನಿಮ್ಮನ್ನು ಅನರ್ಹಗೊಳಿಸುವುದಿಲ್ಲ ಏಕೆ ? :
ಹುತಾತ್ಮರಾದ ಪ್ರಧಾನಿಯ ಮಗ ದೇಶವನ್ನು ಅವಮಾನಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ, ಇದು ತನ್ನ ಪ್ರಾಣವನ್ನೇ ಕೊಟ್ಟ ಪ್ರಧಾನಿಗೆ ಮಾಡಿದ ಅವಮಾನ ಎಂದರು. ಹುತಾತ್ಮನ ಮಗನನ್ನು ದೇಶವಿರೋ ಎಂದು ಕರೆದಿದ್ದೀರಿ, ಮೀರ್ ಜಾಫರ್ ಅವರ ತಾಯಿಯನ್ನು ಸಂಸತ್ತಿನಲ್ಲಿ ಅವಮಾನಿಸಿದ್ದೀರಿ. ಸಂಸತ್ತಿನಲ್ಲಿ ಪ್ರಧಾನಿಯವರು ಈ ಕುಟುಂಬವು ನೆಹರು ಉಪನಾಮವನ್ನು ಏಕೆ ಬಳಸುವುದಿಲ್ಲ ಎಂದು ಕೇಳುತ್ತಾರೆ. ನೀವು ಮತ್ತು ನಿಮ್ಮ ಪರಿವಾರದವರು ಕಾಶ್ಮೀರಿ ಪಂಡಿತರ ಸಂಪ್ರದಾಯವನ್ನು ಅವಮಾನಿಸುತ್ತೀರಿ. ಆದರೆ ನಿಮ್ಮ ವಿರುದ್ಧ ಯಾವುದೇ ಕೇಸ್ ದಾಖಲಾಗುವುದಿಲ್ಲ. ನೀವು ಮೇಲಿನ ಪ್ರಕರಣಗಳು ಎರಡು ವರ್ಷಗಳ ಅವಧಿಗೆ ಮುಗಿಯುವುದಿಲ್ಲ, ಯಾರೂ ನಿಮ್ಮನ್ನು ಅನರ್ಹಗೊಳಿಸುವುದಿಲ್ಲ. ಏಕೆ? ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ದೇಶದ ಸಂಪತ್ತನ್ನು ಲೂಟಿ ಮಾಡಿ ಒಬ್ಬರಿಗೆ ನೀಡಲಾಗುತ್ತಿದೆ. ಈ ಸಂಪತ್ತು ಜನರಿಗೆ ಸೇರಿದ್ದು, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಜನರು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದಾಗ ಅಹಂಕಾರಿ ಸರ್ವಾಕಾರಿಗಳು ಪ್ರಶ್ನೆ ಕೇಳುವವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ. ಕೇಂದ್ರದ ಇಡೀ ಸಚಿವ ಸಂಪುಟ, ಸರ್ಕಾರ ಮತ್ತು ಸಂಸದರು ಒಬ್ಬ ವ್ಯಕ್ತಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅದಾನಿ ಯಾರು, ಅವರ ಹೆಸರು ತೆಗೆದ ತಕ್ಷಣ ಎಲ್ಲರೂ ಕೂಗಾಟ, ಗದ್ದಲ ಮಾಡಿ ಅದಾನಿ ಬೆಂಬಲಕ್ಕೆ ಬರುತ್ತಿರುವುದೇಕೆ ? ಎಂದು ಕೇಳಿದರು.

ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಜನರು ಇನ್ನೂ ಏಕೆ ನಿರುದ್ಯೋಗಿಗಳಾಗಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಲಕ್ಷಗಟ್ಟಲೆ ಜನ ಸೇರಿದ್ದರು. ದೇಶವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಾಡುವ ವ್ಯಕ್ತಿ ದೇಶವನ್ನು ಅವಮಾನಿಸಬಹುದೇ? ಎಂದು ತಮ್ಮ ಸಹೋದರನನ್ನು ಸಮರ್ಥಿಸಿಕೊಂಡರು.

ರಾಹುಲ್ ಗಾಂಧಿಯವರು ಬಡವರು, ಯುವಕರು ಮತ್ತು ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಬಯಸುತ್ತಾರೆ, ಅವರಿಗೆ ಸೇರಿದ್ದು ಅವರ ಕೈಗೆ ಹೋಗಬೇಕೇ ಹೊರತು ದೊಡ್ಡ ವ್ಯಕ್ತಿ ಮತ್ತು ಪ್ರಧಾನಿಯ ಸ್ನೇಹಿತನಿಗೆ ಅಲ್ಲ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ : ಮೋದಿ ಹೆಸರನ್ನು ಟೀಕಿಸಿದ ರಾಹುಲ್‌ ಗಾಂಧಿಗೆ 2 ವರ್ಷ ಜೈಲು; ತೀರ್ಪು ನೀಡಿದ ಕೋರ್ಟಿನಿಂದಲೇ ಜಾಮೀನು

ಈ ದೇಶದ ಪ್ರಧಾನಿ ಒಬ್ಬ ಹೇಡಿ, ನನ್ನನ್ನು ಜೈಲಿಗೆ ಹಾಕಲಿ : 
ಈ ದೇಶದ ಪ್ರಧಾನಿ ಒಬ್ಬ ಹೇಡಿ, ನನ್ನನ್ನು ಜೈಲಿಗೆ ಹಾಕಲಿ, ನಾನು ಹೇಳುವುದಂತೂ ಸತ್ಯ, ಈ ದೇಶದ ಪ್ರಧಾನಿ ಒಬ್ಬ ಹೇಡಿ, ಅವರು ಅಕಾರದ ಹಿಂದೆ ಅಡಗಿ ಕುಳಿತಿದ್ದಾರೆ, ದುರಹಂಕಾರಿ. ದುರಹಂಕಾರಿ ರಾಜನಿಗೆ ಜನರು ಉತ್ತರ ಕೊಡುವುದು ಈ ದೇಶದ ಸಂಪ್ರದಾಯದಲ್ಲಿದೆ. ದೇಶವು ಈಗ ದುರಹಂಕಾರಿ ರಾಜನನ್ನು ಗುರುತಿಸಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಾಗ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ಪ್ರಶ್ನಿಸುವವರಿಗೆ ಚುನಾವಣೆಗೆ ಸ್ಪರ್ಧಿಸದಂತೆ ಎಂಟು ವರ್ಷಗಳ ಕಾಲ ನಿರ್ಬಂಸಿದರೆ, ಅದು ದೇಶಕ್ಕಾಗಲೀ ಅಥವಾ ಅದರ ಪ್ರಜಾಪ್ರಭುತ್ವಕ್ಕಾಗಲೀ ಸರಿಯಲ್ಲ. ಈಗ ಸಮಯ ಬಂದಿದೆ, ಡರೋ ಮತ್ (ಹೆದರಬೇಡಿ). ಅವರನ್ನು ಎದುರಿಸಲು, ದೇಶದ ಏಕತೆಯನ್ನು ಖಚಿತಪಡಿಸಿಕೊಳ್ಳಲು ಮುಂದಡಿ ಇಡಿ ಎಂದು ಕರೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *