ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ತೆರಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ವಾಹನವನ್ನು ಪೊಲೀಸರು ತಡೆಹಿಡಿದಿದ್ದಾರೆ. ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಇಂಫಾಲ್‌ಗೆ ಬಂದಿಳಿದರು ಹಾಗೂ ಚುರಚಂದಪುರ ಜಿಲ್ಲೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಅವರನ್ನು ತಡೆಯಲಾಗಿದೆ.
ಮಣಿಪುರಕ್ಕೆ ಇಂದು ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿ, ಸಂಕಷ್ಟಕ್ಕೆ ಒಳಗಾಗಿರುವ ಜನರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದರು. ಆದರೆ, ಇಂಫಾಲದಿಂದ 20 ಕಿ.ಮೀ ದೂರದಲ್ಲಿರುವ ಬಿಷ್ಟುಪುರದಲ್ಲಿ ಮಣಿಪುರ ಪೋಲಿಸರು ಅವರನ್ನು ತೆಡೆದಿದ್ದಾರೆ. ಹಿಂಸಾಚಾರ ಭೀತಿಯಿಂದಾಗಿ ಮುಂಜಾಗ್ರತಾ ಕ್ರಮದ ಭಾಗವಾಗಿ ರಾಹುಲ್ ಗಾಂಧಿ ಬೆಂಗಾವಲು ಪಡೆಯನ್ನು ತೆಡೆಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೈಕ್ ಮೆಕ್ಯಾನಿಕ್ ಜೊತೆ ಸ್ಪಾನರ್ ಹಿಡಿದ ರಾಹುಲ್ ಗಾಂಧಿ
ಬಿಷ್ಣುಪುರ್ ಜಿಲ್ಲೆಯ ಉಟ್ಲೌ ಗ್ರಾಮದ ಬಳಿ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ರಾಹುಲ್ ಬೆಂಗಾವಲು ವಾಹನಗಳಿಗೆ ಕಲ್ಲುಗಳನ್ನು ಎಸೆಯಲಾಗಿತ್ತು. ಹೀಗಾಗಿ ಮಾರ್ಗದಲ್ಲಿ ಹಿಂಸಾಚಾರ ಸೃಷ್ಟಿಯಾಗುವ ಆತಂಕದಿಂದ ಅವರನ್ನು ತಡೆಹಿಡಿಯಲಾಯಿತು ಎಂದು ತಿಳಿಸಿದ್ದಾರೆ. ಮತ್ತೆ ಹಿಂಸಾಚಾರ ಭುಗಿಲೇಳುವ ಆತಂಕದಲ್ಲಿದ್ದೇವೆ. ಹೀಗಾಗಿ ರಾಹುಲ್ ಗಾಂಧಿಯವರ ಬೆಂಗಾವಲು ವಾಹನವನ್ನು ತಡೆದು,ಬಿಷ್ಣುಪುರದಲ್ಲಿಯೇ ತಂಗುವಂತೆ ಮನವಿ ಮಾಡಿಕೊಳ್ಳಲಾಯಿತು ಎಂದು ಹೇಳಿದ್ದಾರೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು, ರಾಹುಲ್ ಗಾಂಧಿಗೆ ಕೈ ಬೀಸಲು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರು. ಆದರೆ , ನಮ್ಮನ್ನೇಕೆ ತಡೆದಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ಸಂಬಂಧ ಹಿನ್ನಲೆ ದಿಲ್ಲಿಯ ಅಧಿಕೃತ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ
ಸಂಕಷ್ಟಕ್ಕೊಳಗಾದವರು ಭೇಟಿಗೆ ಪೊಲೀಸರು ನಮಗೇಕೆ ಅವಕಾಶ ನೀಡುತ್ತಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ ಸಂತ್ರಸ್ತರನ್ನು ಭೇಟಿ ಮಾಡವುದಕ್ಕೆ ರಾಹುಲ್ ಗಾಂಧಿ ಸ್ಥಳಕ್ಕೆ ತೆರಳಿದ್ದಾರೆ. ನಾವು ಸುಮಾರು 20-25 ಕಿಮೀ ಸಂಚರಿಸಿದ್ದೆವು. ಆದರೆ, ಎಲ್ಲಿಯೂ ರಸ್ತೆ ತಡೆ ಇರಲಿಲ್ಲ. ರಾಹುಲ್ ಗಾಂಧಿ ಕಾರಿನೊಳಗೆ ಕುಳಿತಿದ್ದಾರೆ. ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದು ಯಾರು ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ತಿಳಿಸಿದ್ದಾರೆ.
ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ ಹಿಂಸಾಚಾರ ನಡೆಯುತ್ತಿದೆ. ಇದುವರೆಗೆ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.