ವಯನಾಡಿನಲ್ಲಿ ಸಂಭವಿಸಿದ ದುರಂತದಲ್ಲಿ ಸಂತ್ರಸ್ತರನ್ನು ನೋಡಿದಾಗ ತಂದೆಯನ್ನು ಕಳೆದುಕೊಂಡಾಗ ಆದಷ್ಟು ನೋವಾಯಿತು ಎಂದು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಗುರುವಾರ ಭೂಕುಸಿತದಿಂದ ಅಕ್ಷರಶಃ ಸ್ಮಶಾನವಾಗಿರುವ ವಯನಾಡಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ನಂತರ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೇರಳ ಮಾತ್ರವಲ್ಲ, ದೇಶದಲ್ಲೇ ದೊಡ್ಡ ದುರಂತವಾಗಿದೆ. ನನ್ನ ತಂದೆಯನ್ನು ಕಳೆದುಕೊಂಡಾಗ ಅದಷ್ಟು ನೋವಾಯಿತು. ಆದರೆ ಇವರು ಕೇವಲ ತಂದೆಯನ್ನು ಮಾತ್ರವಲ್ಲ ಕುಟುಂಬದ ಹಲವು ಸದಸ್ಯರನ್ನೇ ಕಳೆದುಕೊಂಡಿದ್ದಾರೆ ಎಂದು ಅವರು ನುಡಿದರು.
ದುರಂತದಲ್ಲಿ ಎಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ಎಷ್ಟೋ ಜನರು ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವುದು ನೋಡಿ ನೋವಾಯಿತು. ನಾವು ಬದುಕುಳಿದವರಿಗೆ ಏನು ಪರಿಹಾರ ಸಿಗಬೇಕೋ ಅದನ್ನು ಆದಷ್ಟು ಬೇಗ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಸಾಕಷ್ಟು ಕೆಲಸಗಳು ಆಗಬೇಕಿದೆ. ಆದರೆ ಸಾಕಷ್ಟು ಶ್ರಮ ವಹಿಸುತ್ತಿರುವ ಆಡಳಿತ ವ್ಯವಸ್ಥೆ, ವೈದ್ಯರು, ನರ್ಸ್, ಸ್ವಯಂ ಸೇವಕರಿಗೆ ಧನ್ಯವಾದಗಳು. ಇಡೀ ದೇಶವೇ ವಯನಾಡಿನ ಪರಿಸ್ಥಿತಿಯನ್ನು ಗಮನಿಸುತ್ತಿದೆ ಎಂದು ಅವರು ಹೇಳಿದರು.
ವಯನಾಡಿನಲ್ಲಿ ಭೂಕುಸಿತ ಸಂಭವಿಸುತ್ತಲೇ ಇದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 300ಕ್ಕೇರಿದೆ. ಭಾರೀ ಮಳೆಗೆ 200ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದು, 1000 ಅಧಿಕ ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಭೂಕುಸಿತ ಸಂಭವಿಸಿದ ಮೊದಲ ಗ್ರಾಮವನ್ನು ಇನ್ನೂ ರಕ್ಷಣಾ ಪಡೆಗಳು ತಲುಪಲು ಸಾಧ್ಯವಾಗಿಲ್ಲ ಅಂದರೆ ಪರಿಸ್ಥಿತಿಯ ಭೀಕರತೆ ಅರಿವಾಗುತ್ತದೆ.