ನವದೆಹಲಿ : ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ ಚಪ್ಪಲಿ ಅಂಗಡಿ ಈಗ ಆಕರ್ಷಣೀಯ ಕೇಂದ್ರವಾಗಿದೆ. ಅಂಗಡಿ ಮಾಲೀಕನಿಗೆ ಗೌರವಾದರಗಳು ಹರಿದು ಬರುತ್ತಿದ್ದರೆ, ರಾಹುಲ್ ಹೊಲಿದ ಚಪ್ಪಲಿಗೆ ಭಾರೀ ಡಿಮ್ಯಾಂಡ್ ಬರುತ್ತಿದೆ.
ರಾಹುಲ್ ಗಾಂಧಿ ಇತ್ತೀಚೆಗೆ ಉತ್ತರ ಪ್ರದೇಶದ ಸುಲ್ತಾನ್ ಪುರದಲ್ಲಿರುವ ರಸ್ತೆಬದಿ ಚಪ್ಪಲಿ ಹೊಲಿಯುವ ಅಂಗಡಿಗೆ ಭೇಟಿ ನೀಡಿದ್ದರು. ಮಾತುಕತೆ ವೇಳೆ ರಾಹುಲ್ ಚಪ್ಪಲಿಯೊಂದಕ್ಕೆ ಹೊಲಿಗೆ ಹಾಕಿದ್ದರು.
ಅಂಗಡಿ ಸುತ್ತಮುತ್ತ ಓಡಾಡುತ್ತಿದ್ದವರು ಕಾರು, ಬೈಕ್ ನಿಲ್ಲಿಸಿ ಮಾತನಾಡಿಸುತ್ತಾರೆ. ನಮಸ್ಕಾರ ರಾಮ್ ಜೀ ಅಂತಾರೆ. ಮೊದಲು ಹೇಗೆಗೋ ಮಾತನಾಡುತ್ತಿದ್ದವರು ಈಗ ಗೌರವ ಕೊಟ್ಟು ಮಾತನಾಡಿಸುತ್ತಿದ್ದಾರೆ ಎಂದು ಸುಲ್ತಾನ್ ಪುರದಲ್ಲಿರುವ ಚಪ್ಪಲಿ ಅಂಗಡಿ ಮಾಲೀಕ ರಾಮ್ ಚೆಟ್ ಹೇಳಿದ್ದಾರೆ.
ಅಂಗಡಿ ಬಳಿ ಚಪ್ಪಲಿ ಹೊಲಿಸಿಕೊಳ್ಳುವುದು ಮುಂತಾದ ಕೆಲಸಕ್ಕೆ ಮಾತ್ರ ಬರುತ್ತಿದ್ದರು. ಆದರೆ ರಾಹುಲ್ ಗಾಂಧಿ ನನ್ನ ಅಂಗಡಿ ಬಂದ ಮೇಲೆ ನೋಡುವವರ ದೃಷ್ಟಿಯೇ ಬದಲಾಗಿದೆ. ಎಲ್ಲರೂ ಬಂದು ಮಾತನಾಡಿಸಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ವಯನಾಡ್ ದುರಂತದ ಅಗೋಚರ ಮುಖಗಳು, ಮುಖಂಡರು
ರಾಹುಲ್ ಗಾಂಧಿ ಹೊಲಿಗೆ ಹಾಕಿದ ಚಪ್ಪಲಿ ಕೊಡುವಂತೆ ಎಲ್ಲರೂ ಕೇಳುತ್ತಿದ್ದಾರೆ. ಅದರಲ್ಲೂ ಕೆಲವರು ಫೋನ್ ಮಾಡಿ ಹಣ ಕೊಡುವುದಾಗಿ ಹೇಳುತ್ತಿದ್ದಾರೆ. ಆರಂಭದಲ್ಲಿ 5 ಲಕ್ಷ ಕೊಡುತ್ತೇನೆ ಅಂದಿದ್ದರು. ಆದರೆ ಈಗ 10 ಲಕ್ಷ ಬೇಕಾದರೂ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಬ್ಯಾಗ್ ತುಂಬಾ ದುಡ್ಡು ತಗೊಂಡು ಬಂದು ಕೊಡ್ತೀವಿ ಅಂತ ಹೇಳುತ್ತಿದ್ದಾರೆ ಎಂದು ರಾಮ್ ವಿವರಿಸಿದರು.
ರಾಹುಲ್ ಗಾಂಧಿ ಹೊಲಿಗೆ ಹಾಕಿದ ಚಪ್ಪಲಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಆದರೆ ಎಷ್ಟೇ ದುಡ್ಡು ಕೊಟ್ಟರೂ ನಾನು ಯಾರಿಗೂ ಆ ಚಪ್ಪಲಿ ಕೊಡುವುದಿಲ್ಲ. ಈ ಅಂಗಡಿಗೆ ಈಗ ರಾಹುಲ್ ಗಾಂಧಿ ಅವರು ಕೂಡ ಪಾಲುದಾರರು ಎಂದು ರಾಮ್ ಹೇಳಿದ್ದಾರೆ.
ರಾಹುಲ್ ಗಾಂಧಿ ಅಂಗಡಿಗೆ ಭೇಟಿ ನೀಡಿದಾಗ ಏನು ಮಾತನಾಡಿದರು? ಏನು ಕೇಳಿದರು ಅಂತ ಮಾಧ್ಯಮಗಳ ಪ್ರಶ್ನೆಗೆ ಚಪ್ಪಲಿಗೆ ಹೇಗೆ ಹೊಲಿಯುತ್ತೀರಾ? ಎಂದು ಕೇಳಿದರು. ನಾನು ತೋರಿಸಿಕೊಟ್ಟೆ. ಅವರು ಹಾಗೆ ಮಾಡಿದರು ಎಂದು ರಾಮ್ ನೆನಪಿಸಿಕಂಡರು
ಅಂಗಡಿ ತೆರೆದು ವರ್ಷಗಳೇ ಆಗಿವೆ. ಆದರೆ ಯಾರೂ ಬಂದು ನನ್ನ ಸಮಸ್ಯೆ ಕೇಳಿರಲಿಲ್ಲ. ರಾಹುಲ್ ಗಾಂಧಿ ಬಂದು ಹೋದ ಮೇಲೆ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಪದೇಪದೇ ಅಂಗಡಿ ಸುತ್ತಮುತ್ತ ಓಡಾಡುತ್ತಿರುತ್ತಾರೆ. ಅಲ್ಲದೇ ಆಗಾಗ ಬಂದು ಏನಾದರೂ ಸಮಸ್ಯೆ ಇದೆಯಾ ಎಂದು ಪ್ರಶ್ನಿಸುತ್ತಾರೆ. ಹಿಂದೆ ಎಂದೂ ಅವರು ಈ ರೀತಿ ಕೇಳಿರಲಿಲ್ಲ ಎಂದು ಅವರು ವಿವರಿಸಿದರು.