ಕೇಂದ್ರದ ಕೋವಿಡ್ ನಿರ್ವಹಣೆ ವಿನಾಶಕಾರಿ: ಶ್ವೇತಪತ್ರ ಹೊರಡಿಸಿದ ರಾಹುಲ್ ಗಾಂಧಿ

ನವದೆಹಲಿ: ಕೇಂದ್ರದ ಬಿಜೆಪಿ ಸರಕಾರದ ಕೋವಿಡ್ ನಿರ್ವಹಣೆ ಕುರಿತು ಕಾಂಗ್ರೆಸ್‌ ಪಕ್ಷವು ಇಂದು ಶ್ವೇತ ಪತ್ರವನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಡುಗಡೆ ಮಾಡಿದ್ದು, ಕೇಂದ್ರ ಸರಕಾರವು ಕೋವಿಡ್‌ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕು ಹಾಗೂ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ʻಕೋವಿಡ್‌ ನ ಮೊದಲ ಅಲೆ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಕೇಂದ್ರ ಸರಕಾರದ ನಿರ್ವಹಣೆ ‘ವಿನಾಶಕಾರಿ‘ಯಾಗಿರುವುದು ಸ್ಪಷ್ಟವಾಗಿದೆ. ಇದು ಏಕೆ ವಿನಾಶಕಾರಿಯಾಗಿದೆ ಎಂಬುದಕ್ಕೆ ಕೆಲವು ಕಾರಣಗಳಿವೆ. ಸರ್ಕಾರ ಎಲ್ಲೆಲ್ಲಿ ಎಡವಿದೆ ಎಂಬುದರ ಬಗ್ಗೆ ಈ ಶ್ವೇತಪತ್ರದಲ್ಲಿ ತಿಳಿಸಲು ಪ್ರಯತ್ನಿಸಿದ್ದೇವೆ‘ ಎಂದು ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ಇದನ್ನು ಓದಿ: ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮೂರನೇ ಅಲೆ ಉತ್ತುಂಗ ಸ್ಥಿತಿಗೆ ತಲುಪುವ ಸಾಧ್ಯತೆ

ಕೋವಿಡ್ ನಿರ್ವಹಣೆಯಲ್ಲಿ ಸರಕಾರದಿಂದ ಆಗಿರುವ  ತಪ್ಪಗಳ ಕುರಿತು ಮಾಹಿತಿ ಮತ್ತು ಒಳನೋಟಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಸರ್ಕಾರದತ್ತ ಬೊಟ್ಟು ಮಾಡಿ ತೋರಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ದೇಶದೆಲ್ಲೆಡೆ ಮೂರನೇ ಅಲೆ ಎದುರಿಸಲು ಸಿದ್ಧರಾಗಬೇಕೆಂದು ಸಹ ನಾವು ಈ ಶ್ವೇತಪತ್ರದ ಮೂಲಕ ತಿಳಿಸಲಾಗುತ್ತಿದೆ‘ ಎಂದು ಹೇಳಿದರು.

ಈ ಶ್ವೇತಪತ್ರದಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ. ಮೊದಲನೆಯದಾಗಿ ಮೂರನೇ ಅಲೆಗೆ ತಡೆಗಟ್ಟಲು ಸಿದ್ದತೆಗಳು, ಎರಡನೆಯದಾಗಿ ಬಡವರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ಒದಗಿಸುವುದು. ಮೂರನೆಯದಾಗಿ ಕೊರೊನಾ ವಿಪತ್ತು ನಿಧಿ ಸ್ಥಾಪನೆ ಹಾಗೂ ನಾಲ್ಕನೆಯದಾಗಿ ಮೊದಲ ಹಾಗೂ ಎರಡನೇ ಅಲೆ ವೇಳೆಯಲ್ಲಿ ನಡೆದ ತಪ್ಪುಗಳನ್ನರಿತು ಇದು ಮುಂದೆ ಮರುಕಳಿಸದಂತೆ ಎಚ್ಚರವಹಿಸುವ ಬಗ್ಗೆ ಒಳಗೊಂಡಿದೆ.

ಇದನ್ನು ಓದಿ: ವ್ಯಾಕ್ಸಿನ್ ಎಂಬ ಉಸಿರು ನಿರಾಕರಿಸುತ್ತಿರುವ ಸರ್ಕಾರ!!

ದೇಶದಲ್ಲಿ ‌ಕೋವಿಡ್ ಅನ್ನು ಎದುರಿಸಲು ಇರುವ ಪ್ರಮುಖ ಅಸ್ತ ಲಸಿಕೆ ಎಂದು ಹೇಳಿದ ರಾಹುಲ್‌ ಗಾಂಧಿ ಅವರು, ‘ಜನರಲ್ಲಿ ಲಸಿಕೆ ಕುರಿತಾದ ಹಿಂಜರಿಕೆಯನ್ನು ಹೋಗಲಾಡಿಸಲು ಜಾಗೃತಿ ಮೂಡಿಸಬೇಕಿದೆ. ನಮ್ಮ ಇಡೀ ಗಮನ ಲಸಿಕೆ ನೀಡುವುದರತ್ತ ಇರಬೇಕಿದೆ. ಸಾಧ್ಯವಾದಷ್ಟು ಬೇಗನೇ ಶೇಕಡಾ 100 ರಷ್ಟು ಲಸಿಕೆ ಗುರಿಯನ್ನು ತಲುಪಬೇಕು‘ ಎಂದು ಒತ್ತಾಯಿಸಿದರು.

ಕೋವಿಡ್‌-19 ಲಸಿಕೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ‍ಪಕ್ಷಪಾತ ಮಾಡದೆ ಎಲ್ಲ ರಾಜ್ಯಗಳನ್ನು ಸಮನವಾಗಿ ಹಂಚಿಕೆ ಮಾಡಬೇಕು. ಬಿಜೆಪಿ ಅಥವಾ ವಿರೋಧಿ ರಾಜ್ಯಗಳೆಂದು ನೋಡಬಾರದು. ಇದು ರಾಜಕೀಯ ಯುದ್ಧವಲ್ಲ, ವೈರಸ್‌ನ ವಿರುದ್ಧದ ಯುದ್ಧ ಎಂಬುದನ್ನು ಪ್ರಧಾನಿ ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್‌ ಗಾಂಧಿ ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *