ಮೀನು ಮುಟ್ಟಿದ್ದಕ್ಕೆ ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರ ಧರ್ಮಸ್ಥಳಕ್ಕೆ ಮೀನು ತಿಂದು ಹೋಗಿ ದರ್ಶನ ಪಡೆದಿದ್ದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸಿದ್ದರಾಮಯ್ಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎಂದು ಬಿಜೆಪಿ ಹುಯಿಲೆಬ್ಬಿಸಿತ್ತು. ಮಾಂಸಹಾರ ತಿಂದು ದೇವಸ್ಥಾನಕ್ಕೆ ಹೋಗುವುದು ಸರಿಯೋ ತಪ್ಪೋ ಎಂಬೆಲ್ಲಾ ಪರ ಹಾಗೂ ವಿರೋಧವಾದ ಚರ್ಚೆಗಳು ನಡೆದಿದ್ದವು. ಚರ್ಚೆ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಆದರೆ ಇದೀಗ ಮತ್ತೊಂದು ಬಾರಿ ಇಂತಹದೊಂದು ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣವಾಗಿದ್ದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನಡೆ. ಮೀನು ಮುಟ್ಟಿದ್ದಕ್ಕೆ ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ ವರ್ತೆನೆಯ ಕುರಿತಾಗಿ ಪರ- ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಾಗಿ ನಡೆಯುತ್ತಿದೆ.

ಗುರುವಾರ ಉಡುಪಿ ಜಿಲ್ಲೆಗೆ ಪ್ರವಾಸ ಮಾಡಿದ್ದ ರಾಹುಲ್ ಗಾಂಧಿ ಮೀನುಗಾರ ಸಮುದಾಯದ ಜೊತೆ ಸಂವಾದ ನಡೆಸಿದ್ದರು. ಅವರ ಸಮಸ್ಯೆಗಳನ್ನು ಆಲಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಮೀನುಗಾರ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು. ಇದನ್ನು ಸ್ವೀಕರಿಸಿದ ರಾಹುಲ್ ಮಹಿಳೆಯ ಜೊತೆಗೆ ಫೋಟೋ ತೆಗೆಸಿಕೊಂಡರು. ಕಾರ್ಯಕ್ರಮದ ಬಳಿಕ ಸಮೀಪದಲ್ಲೇ ಇದ್ದ ದೇವಸ್ಥಾನಕ್ಕೆ ತೆರಳಿದ ಅವರು ದೇವಸ್ಥಾನದ ಒಳಗಡೆ ಹೋಗಲು ನಿರಾಕರಿಸಿದರು ಅವರಿಗೆ ಸ್ಥಳೀಯರು ದೇವಸ್ಥಾನದ ಒಳಗಡೆ ಬರುವಂತೆ ಮನವಿ ಮಾಡಿದರೂ, ಮೀನು ಮುಟ್ಟಿದ್ದೇನೆ, ಆ ಕಾರಣಕ್ಕಾಗಿ ಒಳಗಡೆ ಬರುವುದಿಲ್ಲ ಎಂದು ಹೇಳಿದರು. ಬಳಿಕ ದೇವಸ್ಥಾನದ ಅರ್ಚಕರು ಹೊರಗಡೆ ಬಂದು ರಾಹುಲ್ ಗಾಂಧಿ ಅವರನ್ನು ಗೌರವಿಸಿದರು. ಈ ವಿಚಾರ ಸದ್ಯ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ರಾಹುಲ್ ಗಾಂಧಿ ನಡೆಯನ್ನು ಕೆಲವರು ಸಮರ್ಥಿಸಿಕೊಂಡರೆ ಮತ್ತೆ ಕೆಲವರು ಇದನ್ನು ವಿರೋಧಿಸಿದ್ದಾರೆ.

ಇದನ್ನೂ ಓದಿ : ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ಸಂಬಂಧ ಹಿನ್ನಲೆ ದಿಲ್ಲಿಯ ಅಧಿಕೃತ ನಿವಾಸ ಖಾಲಿ ಮಾಡಿದ ರಾಹುಲ್‌ ಗಾಂಧಿ

ರಾಹುಲ್ ಒಳಹೋಗಲು ನಿರಾಕರಿಸಿದ ದೇವಸ್ಥಾನ ಯಾವುದು? ದೇವಸ್ಥಾನದ ಹಿನ್ನಲೆ ಏನು?
ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಮೀನು ಹಿಡಿಯುವ ಮೊಗವೀರರದ್ದು. ಮೊಗವೀರರು ಒಳ್ಳೆ ಮೀನುಗಾರಿಕೆ, ಮೀನಿನ ಉತ್ತಮ ವ್ಯಾಪಾರ, ಮೀನಿನ ದೋಣಿಗಳ ಸಂಪತ್ತಿಗಾಗಿ ಹೊತ್ತುಕೊಂಡ ಹರಕೆಗಳು ಫಲಿಸಿದರೆ ಇಲ್ಲಿ ಬಂದು ಹರಕೆ ತೀರಿಸುತ್ತಾರೆ.

ಮೊಗವೀರರು ದೇವಸ್ಥಾನ ಪ್ರವೇಶಿಸಬಾರದು ಎಂಬ ಸಾಮಾಜಿಕ ಬಹಿಷ್ಕಾರವನ್ನು ಪ್ರತಿಭಟಿಸಿಯೇ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನವನ್ನು 1957 ರಲ್ಲಿ ಸ್ಥಾಪಿಸಿದರು. ಬಾರ್ಕೂರು ದೇವಳದಲ್ಲಿ ಪ್ರವೇಶವಿಲ್ಲದ ಕಾರಣ, ತಣ್ಣನೆಯ ಧಾರ್ಮಿಕ ಬಂಡಾಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಮೊಗವೀರರಿಗೆ ಅನುಕೂಲವಾಗುವಂತೆ ಮೊಗವೀರರು ಉಚ್ಚಿಲದಲ್ಲಿ ಸುಮಾರು 18 ಎಕರೆ ಭೂಮಿಯನ್ನು ಖರೀದಿಸಿ ಭವ್ಯವಾದ ದೇವಸ್ಥಾನ ನಿರ್ಮಿಸಿದರು. ಇಂತಹ ಬಂಡಾಯದ, ಕ್ರಾಂತಿಯ ಐತಿಹಾಸಿಕ, ಮೀನು ಹಿಡಿವವರ ಅಧಿದೇವತೆ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ “ಮೀನು ಹಿಡಿದೆನೆಂದು” ಪ್ರವೇಶಿಸದಿರುವ ರಾಹುಲ್ ಗಾಂಧಿ ನಿರ್ಧಾರ ಅಪಾಯಕಾರಿ ಮೂಢತನ.

Donate Janashakthi Media

Leave a Reply

Your email address will not be published. Required fields are marked *