ನವದೆಹಲಿ: ವಿಧಾನಸಭಾ ಚುನಾವಣೆಗಳು ನಡೆಯಲಿರುವ ಉತ್ತರ ಪ್ರದೇಶದ ಯುವ ಜನತೆಗಾಗಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಕಾಂಗ್ರೆಸ್ ಪಕ್ಷ ಮಾತ್ರ ರಾಜ್ಯದ ಯುವಜನತೆಗೆ ಹೊಸ ಮುನ್ನೋಟ ನೀಡಬಲ್ಲದು ಎಂದು ಪ್ರತಿಪಾದಿಸಿದ್ದಾರೆ.
ಭಾರ್ತಿ ವಿಧಾನ್ ಶೀರ್ಷಿಕೆಯ ಯುವ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ ಮಾತನಾಡಿ ಈ ಮುನ್ನೋಟ ದಾಖಲೆಗಳು ಪೊಳ್ಳು ಮಾತುಗಳಲ್ಲ. ಆದರೆ, ಯುವಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಇದನ್ನು ಸಿದ್ಧಪಡಿಸಲಾಗಿದೆ ಎಂದರು.
ನಾವು ಯುವಕರ ಬಲದೊಂದಿಗೆ ನೂತನ ಉತ್ತರ ಪ್ರದೇಶವನ್ನು ನಿರ್ಮಿಸಬಯಸುತ್ತೇವೆ. ನಾವು ದ್ವೇಷ ಹರಡುವುದಿಲ್ಲ. ನಾವು ಜನರನ್ನು ಒಗ್ಗೂಡಿಸುತ್ತೇವೆ ಎಂದು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ನುಡಿದರು.
ಈ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ ರಾಜ್ಯದ ಬಹುದೊಡ್ಡ ಸಮಸ್ಯೆ ಎಂದರೆ ಉದ್ಯೋಗ ನೇಮಕಾತಿ. ಯುವಕರು ಉದ್ಯೋಗ ಸಿಗದೆ ಹತಾಶರಾಗಿದ್ದಾರೆ. ನಮ್ಮ ಪಕ್ಷವು ಅಭಿವೃದ್ಧಿಗೆ ಒತ್ತು ನೀಡಲಿದೆಯೇ ಹೊರತು ಜಾತಿ ಅಥವಾ ಕೋಮುವಾದ ಆಧರಿಸಿ ನಡೆಯುತ್ತಿರುವ ನಕಾರಾತ್ಮಕ ಪ್ರಚಾರಕ್ಕೆ ಕಿವಿಗೊಡುವುದಿಲ್ಲ ಎಂದು ಪ್ರಿಯಾಂಕಾ ಪ್ರತಿಪಾದಿಸಿದರು.
ಪಕ್ಷವು ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ಕೊಟ್ಟಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಶೇ.40ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿದೆ ಎಂದರು.
ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂದು ಸುಳಿವು ನೀಡಿದ ಪ್ರಿಯಾಂಕಾ ಗಾಂಧಿ
ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂಬುದಾಗಿ ಪ್ರಿಯಾಂಕಾ ಗಾಂಧಿ ಸುಳಿವು ನೀಡಿದ್ದಾರೆ.
ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೇರೆ ಮುಖ ಕಾಣಿಸುತ್ತಿದೆಯೇ, ಎಲ್ಲೆಡೆ ನೀವು ನನ್ನ ಮುಖವನ್ನು ನೋಡುತ್ತಿದ್ದೀರಿ ಎಂದು ಹೇಳುವ ಮೂಲಕ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರೋಕ್ಷವಾಗಿ ಸುಳಿವು ನೀಡಿರುವುದಾಗಿ ವರದಿ ತಿಳಿಸಿದೆ.
ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಈ ಬಗ್ಗೆ ನಾವು ಈವರೆಗೂ ಏನನ್ನೂ ನಿರ್ಧರಿಸಿಲ್ಲ ಎಂದು ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ನಂತರ ಒಂದು ವೇಳೆ ಪರಿಸ್ಥಿತಿಗೆ ಅನುಗುಣವಾಗಿ ಸಣ್ಣ ಪಕ್ಷಗಳ ಬೆಂಬಲದ ಬಗ್ಗೆ ಕಾಂಗ್ರೆಸ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.
403 ಸದಸ್ಯಬಲದ ಉತ್ತರ ಪ್ರದೇಶ ವಿಧಾನಸಭೆಗೆ ಫೆ.10ರಿಂದ ಮಾರ್ಚ್ 7ರ ವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾ.10ರಂದು ಮತಗಳ ಎಣಿಕೆ ನಡೆಯಲಿದೆ.