ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಇಂದು (ಬುಧವಾರ) ಭೇಟಿ ಮಾಡಿ, ತಮ್ಮ ವಿರುದ್ಧ ಬಿಜೆಪಿ ಸಂಸದರು ಮಾಡಿರುವ ಅವಹೇಳಕಾರಿ ಹೇಳಿಕೆಗಳನ್ನು ದಾಖಲೆಯಿಂದ ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.
ಅದೇ ವೇಳೆ ಸದನದಲ್ಲಿ ಕಲಾಪ ಸುಗಮವಾಗಿ ನಡೆಸುವುದಕ್ಕೆ ಅನುವು ಮಾಡಿಕೊಡುವಂತೆ ಸ್ಪೀಕರ್ ಅವರನ್ನು ರಾಹುಲ್ ಒತ್ತಾಯಿಸಿದ್ದಾರೆ. ‘ಅದಾನಿ ಪುಕರಣದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಆದರೆ ಇಂತಹ ಆರೋಪಗಳಿಂದ ನಾನು ವಿಚಲಿತನಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
‘ಇಂದು ನಾನು ಸ್ಪೀಕರ್ ಅವರನ್ನು ಭೇಟಿಯಾಗಿದ್ದೇನೆ. ನನ್ನ ವಿರುದ್ಧ ಬಿಜೆಪಿ ಮಾಡಿರುವ ಅವಹೇಳನಕಾರಿ ಹೇಳಿಕ ತೆಗೆದು ಹಾಕುವಂತೆ ಮನವಿ ಮಾಡಿದ್ದೇವೆ. ಅದನ್ನು ಪರಿಶೀಲಿಸುವುದಾಗಿ ಸ್ಪೀಕರ್ ತಿಳಿಸಿದ್ದಾರೆ. ಬಿಜೆಪಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಆದರೆ ಸದನದ ಸುಗಮ ಕಲಾಪವನ್ನು ನಾವು ಬಯಸುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಅದಾನಿ ವಿವಾದ | ಸಂಸತ್ತಿನ ಹೊರಗಡೆ ಕಾಂಗ್ರೆಸ್ ಪ್ರತಿಭಟನೆ
‘ಬಿಜೆಪಿ ಏನೇ ಪ್ರಚೋದನೆ ಮಾಡಿದರೂ ಸದನದ ಸುಗಮ ಕಲಾಪಕ್ಕೆ ನಾವು ಯತ್ನಿಸಲಿದ್ದೇವೆ. ಹೇಗಾದರೂ ಕಲಾಪ ನಡೆಯಬೇಕು ಎಂಬುದು ನಮ್ಮ ಇರಾದೆಯಾಗಿದೆ. ಸದನದಲ್ಲಿ ಚರ್ಚೆ ನಡೆಯಬೇಕು. ಡಿಸೆಂಬರ್ 13ರಂದು ಸಂವಿಧಾನದ ಬಗ್ಗೆ ಚರ್ಚೆಯಾಗಬೇಕು’ ಎಂದು ಅವರು ಅವರು ಹೇಳಿದ್ದಾರೆ.
‘ಯಾವುದೇ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ನನ್ನ ವಿರುದ್ಧ ಆರೋಪಗಳನ್ನು ಮಾಡಬಹುದು. ಆದರೆ ಸಂವಿಧಾನದ ಕುರಿತು ಚರ್ಚೆ ನಡೆಯಲೇಬೇಕು’ ಎಂದು ರಾಹುಲ್ ಪುನರುಚ್ಚರಿಸಿದ್ದಾರೆ.
‘ಇದು ತುಂಬಾ ಸರಳವಾಗಿದೆ. ಬಿಜೆಪಿ ಅದಾನಿ ವಿಷಯದ ಬಗ್ಗೆ ಚರ್ಚೆ ಬಯಸುವುದಿಲ್ಲ, ಅದಾನಿ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಆದರೆ ನಾವು ಬಿಟ್ಟುಕೊಡುವುದಿಲ್ಲ’ ಎಂದು ಹೇಳಿದ್ದಾರೆ.
ಈ ಮೊದಲು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ವಿಶಿಕಾಂತ್ ದುಬೆ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ದಾಖಲೆಯಿಂದ ತೆಗೆದು ಹಾಕುವಂತೆ ಸ್ಪೀಕರ್‌ಗೆ ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಪತ್ರ ಬರೆದಿದ್ದರು.
ಇದನ್ನೂ ನೋಡಿ : ವಿಎಚ್‌ಪಿ ಕಾರ್ಯಕ್ರಮದಲ್ಲಿ ಜಸ್ಟೀಸ್ ಭಾಗಿ | ಜಸ್ಟೀಸ್ ಯಾದವ್ ಮತ್ತು ವಿವಾದಾತ್ಮಕ ಹೇಳಿಕೆಗಳು Janashakthi Media