ನವದೆಹಲಿ: ಮೊಸರು, ಬ್ರೆಡ್ ಮತ್ತು ಪನೀರ್‌ನಂತಹ ದಿನಬಳಕೆ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ದರಗಳ ಹೆಚ್ಚಳವನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಸತ್ ಆವರಣದಲ್ಲಿ ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ದ್ರಾವಿಡ ಮುನ್ನೇತ್ರ ಕಳಗಂ, ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜುಲೈ 18 ರಿಂದ ಮೊಸರು ಮತ್ತು ಪನೀರ್ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿಯನ್ನು ಶೂನ್ಯದಿಂದ ಶೇಕಡಾ 5ಕ್ಕೆ ಏರಿಸಲಾಗಿದೆ. ಹಣದುಬ್ಬರ ಮತ್ತು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ದೇಶದ ಜನತೆಯ ಮೇಲೆ ಪ್ರಹಾರ ನಡೆಸುತ್ತಿರುವ ಕೇಂದ್ರ ಸರ್ಕಾರ ತೆರಿಗೆ ಹಾಕುವ ಮೂಲಕ ಸುಲಿಗೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಹುಲ್ ಗಾಂಧಿ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡುತ್ತ, ಕೇಂದ್ರ ಸರ್ಕಾರ ದನಿಕರ ಕೊಳ್ಳುಬಾಕ ಸಂಸ್ಕೃತಿಯ ಸರ್ಕಾರವಾಗಿದೆ. ಈ ದೇಶದ ಬಗ್ಗೆ ಬಡವರ ಬಗ್ಗೆ ಕಾಲಜಿಯಿಲ್ಲ ಎಂದು ಪ್ರದಾನಿ ನರೇಂದ್ರ ಮೋದಿ ವಿರುದ್ದ ತಿವ್ರ ವಾಗ್ದಾಳಿ ನಡೆಸಿದರು.
ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಸೇರಿದಂತೆ ಕಾಂಗ್ರೆಸ್ ಸಂಸದರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಸೋಮವಾರ(ಜುಲೈ 18) ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಹಣದುಬ್ಬರ ಮತ್ತು ಜಿಎಸ್‌ಟಿ ದರಗಳ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಪ್ರಯತ್ನಿಸುತ್ತಿವೆ. ಸಂಸತ್ತು ಈ ವಿಷಯದ ಬಗ್ಗೆ ಅಸ್ತವ್ಯಸ್ತತೆಗೆ ಸಾಕ್ಷಿಯಾಗಿತ್ತು. ಪ್ರತಿಭಟನಾ ನಿರತ ವಿರೋಧ ಪಕ್ಷದ ಸಂಸದರು ಮತ್ತೆ ʻಗಬ್ಬರ್ ಸಿಂಗ್ ಟ್ಯಾಕ್ಸ್ʼ ಎಂಬ ಬ್ಯಾನರ್ ಮತ್ತು ಫಲಕಗಳನ್ನು ಹಿಡಿದುಕೊಂಡಿದ್ದರು.