ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅಕ್ಟೋಬರ್ 03ರಂದು ನಡೆದ ರೈತರ ಹತ್ಯೆಯು ಯೋಜಿತ ಪಿತೂರಿ ಎಂದು ತನಿಖಾ ವರದಿ ಬಿಡುಗಡೆಗೊಳಿಸಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಸ್‌ಐಟಿ ವರದಿ ಬಿಡುಗಡೆಯಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಇದರ ಕುರಿತು ಚರ್ಚೆಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ನೋಟಿಸ್ ನೀಡಿದ್ದು, ಸಚಿವರ ಪುತ್ರನ ವಿರುದ್ಧವೂ ಹೊಸ ಆರೋಪ ದಾಖಲಿಸುವಂತೆ ಒತ್ತಾಯಿಸಿವೆ.
ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯ ನಂತರ ಪ್ರಧಾನಿ ನರೇಂದ್ರ ಮೋದಿ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಂಡಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆ ಪೂರ್ವ ನಿಯೋಜಿತ ಸಂಚು: ಎಸ್‌ಐಟಿ
“ಲಖೀಂಪುರದಲ್ಲಿ ನಡೆದ ರೈತರ ಹತ್ಯೆ ಪೂರ್ವನಿಯೋಜಿತ ಪಿತೂರಿಯಾಗಿದೆ ಹಾಗೂ ನಿರ್ಲಕ್ಷ್ಯದ ಕೃತ್ಯವಲ್ಲ ಎಂದು ಎಸ್‌ಐಟಿ ವರದಿ ಎತ್ತಿ ತೋರಿಸಿದೆ” ಎಂದು ಕಾಂಗ್ರೆಸ್ ಸಂಸದರು ಇಂದು ಬೆಳಿಗ್ಗೆ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
“ಸರಕಾರವು ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯವನ್ನು ನೀಡಬೇಕೆಂದು” ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ನೆನ್ನೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಚಿವ ಅಜಯ್ ಮಿಶ್ರಾ ತಮ್ಮ ಮಗನ ವಿರುದ್ಧ ಸ್ಪಷ್ಟವಾದ ಸಾಕ್ಷ್ಯಗಳ ಹೊರತಾಗಿಯೂ ಸಚಿವ ಸ್ಥಾನದಲ್ಲಿ ಮುಂದುವರೆಸಿದ್ದಾರೆ. ಅವರ ಪಾತ್ರದ ಬಗ್ಗೆಯೂ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.