ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಆಗಲಿದ್ದಾರೆ ರಾಹುಲ್​ ದ್ರಾವಿಡ್​

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯಸ್ಥರಾಗಿ ಕರ್ನಾಟಕದ ಹಿರಿಯ ಆಟಗಾರ ರಾಹುಲ್‌ ದ್ರಾವಿಡ್‌ ನೇಮಕಗೊಳ್ಳಲಿದ್ದು, ಮುಖ್ಯ ಕೋಚ್‌ ಹುದ್ದೆ ಅಲಂಕರಿಸಲು ಅವರು ​ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನೆನ್ನೆ ನಡೆದ ಐಪಿಎಲ್‌ ಫೈನಲ್‌ ಪಂದ್ಯದ ಬಳಿಕ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದುಬೈನಲ್ಲಿ ಅಕ್ಟೋಬರ್​ 17 ರಿಂದ ನವೆಂಬರ್​ 14 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿದ ಬಳಿಕ ನವೆಂಬರ್‌ನಲ್ಲಿ ಭಾರತ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ನಡೆಯಲಿದ್ದು, ಕೋಚ್ ಆಗಿ ರಾಹುಲ್‌ ದ್ರಾವಿಡ್ ತಂಡವನ್ನು ಸೇರಿಕೊಳ್ಳಲಿರುವುದು ಬಹುತೇಕ ಖಚಿತವಾಗಿದೆ ಎಂದು ‘ಇಎಸ್‌ಪಿಎನ್‌ ಕ್ರಿಕ್ ಇನ್ಫೊ’ ವರದಿ ಮಾಡಿದೆ.

ಮಹತ್ವದ ಬೆಳವಣಿಗೆಯಲ್ಲಿ ಭಾರತ ಕ್ರಿಕೆಟ್ ಮಂಡಳಿ ಬಿಸಿಸಿಐ ರಾಹುಲ್ ದ್ರಾವಿಡ್‌ರನ್ನು ಕೋಚ್ ಸ್ಥಾನಕ್ಕೆ ಮನವೊಲಿಸುವಲ್ಲಿ ಸಫಲವಾಗಿದೆ. ಈ ಹಿಂದೆ ಈ ಸ್ಥಾನವನ್ನು ದ್ರಾವಿಡ್ ನಿರಾಕರಿಸಿದ್ದರ ಹೊರತಾಗಿಯೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರು ದುಬೈನಲ್ಲಿ ದ್ರಾವಿಡ್‌ರನ್ನು ಭೇಟಿಯಾಗಿದ್ದರು.

ಇದನ್ನು ಓದಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ಜಯ್ ಶಾ ಅಧ್ಯಕ್ಷ

ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಎರಡು ವರ್ಷಗಳ ಗುತ್ತಿಗೆ ನೀಡಲಾಗಿದೆ. ದ್ರಾವಿಡ್ 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಿದೆ. ಆದರೆ, ಈ 10 ಕೋಟಿ ರೂ. ಸಂಭಾವನೆ ಎರಡು ವರ್ಷಕ್ಕೆ ಅಥವಾ ಒಂದು ವರ್ಷಕ್ಕೆ ಎಂಬ ಬಗ್ಗೆ ಮಾಹಿತಿಯಿಲ್ಲ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಕೆಲವು ಆಸ್ಟ್ರೇಲಿಯಾದ ತರಬೇತುದಾರರು ಈ ಪಾತ್ರದಲ್ಲಿ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿತ್ತು. ಆದರೆ ಬಿಸಿಸಿಐ ಭಾರತದವರನ್ನು ಮೊದಲ ಆಯ್ಕೆ ಮಾಡಿಕೊಂಡಿದ್ದು, ಈ ಸ್ಥಾನಕ್ಕಾಗಿ ಭಾರತದವರೇ ಗುರುತಿಸಿದೆ. ಈ ಮೊದಲು ಇದೇ ಸ್ಥಾನಕ್ಕೆ ದ್ರಾವಿಡ್ ಅವರನ್ನು ಸಂಪರ್ಕಿಸಿದಾಗ ಅವರು ಈ ಹುದ್ದೆಯನ್ನು ತಿರಸ್ಕರಿಸಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ಮತ್ತೊಬ್ಬ ಕನ್ನಡಿಗ ಅನಿಲ್ ಕುಂಬ್ಳೆ ಹೆಸರು ಕೂಡ ಈ ಹಿಂದೆ ಕೇಳಿಬಂದಿತ್ತು.

ರಾಹುಲ್‌ ದ್ರಾವಿಡ್‌ ಭಾರತದ ಜನಪ್ರಿಯ ಬ್ಯಾಟ್ಸ್​ಮನ್​ ಆಗಿದ್ದು, ಹಾಲಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿರುದ್ದಾರೆ. ರಾಹುಲ್​ ದ್ರಾವಿಡ್​ರ ತರಬೇತಿ ವ್ಯವಸ್ಥೆಯಲ್ಲಿ ಭಾರತಕ್ಕೆ ರಿಷಭ್​ ಪಂತ್​, ಅವೇಶ್​ ಖಾನ್​, ಪೃಥ್ವಿ ಶಾ, ಹನುಮ ವಿಹಾರಿ, ಶುಬ್ಮಾನ್​ ಗಿಲ್​ರಂಥ ಆಟಗಾರರನ್ನು ನೀಡಿದೆ.

ಸದ್ಯದ ಕೋಚ್ ಆಗಿ ರವಿ ಶಾಸ್ತ್ರಿ ಅವರಿದ್ದಾರೆ. ಟಿ20 ವಿಶ್ವಕಪ್ ನಂತರ ಕೋಚ್ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆಯೇ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಒಪ್ಪಿಸಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *