ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ರಾಗಿ ಖರೀದಿಗೆ ಇಂಡೆಂಟ್ ಪಡೆಯಲು ನಗರದ ಎಪಿಎಂಸಿ ರೈತ ಭವನದ ಮುಂದೆ ನೂರಾರು ರೈತರು ಸಾಲುಗಟ್ಟಿ ನಿಂತಿದ್ದಾರೆ. ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮೂರನೇ ಬಾರಿಗೆ ರೈತರಿಂದ ರಾಗಿ ಖರೀದಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ನೂರಾರು ರೈತರು ತಮ್ಮ ದಿನನಿತ್ಯದ ಕೆಲಸಗಳನ್ನು ಬದಿಗೊತ್ತಿ ರೈತ ಭವನದ ಮುಂದೆ ಜಮಾಯಿಸಿದ್ದಾರೆ.
ನೂರಾರು ಜನ ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ, ಸರ್ವರ್ ಸಮಸ್ಯೆಯಿಂದ ವೆಬ್ ಸೈಟ್ ತೆರೆದುಕೊಳ್ಳಲಿಲ್ಲ. ಇಂದಾದರೂ ರಾಗಿ ಖರೀದಿಗೆ ನೋಂದಣಿ ಮಾಡಿಸೋಣ ಎಂದು ಸುಮಾರು 300ಕ್ಕೂ ಹೆಚ್ಚಿನ ರೈತರು ಊಟ, ನೀರು ಬಿಟ್ಟು ಬಂದಿದ್ದ ಮಹಿಳೆಯರು, ವೃದ್ದರು ಸರದಿಯಲ್ಲೇ ಕುಳಿತುಕೊಂಡಿದ್ದರು.
ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದರೆ ನಮ್ಮ ಸಮಸ್ಯೆಯಲ್ಲ. ಮುಖ್ಯ ಕಚೇರಿಯಲ್ಲೇ ಜಾಲತಾಣ ಲಾಕ್ ಆಗಿದೆ. ಇನ್ನೂ ಲಾಗಿನ್ ತೆರೆಯಲಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ಏಪ್ರಿಲ್ 19 ರಂದು 2 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಆದೇಶ ಹೊರಡಿಸಲಾಗಿತ್ತು. ರೈತರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ 485 ಕೋಟಿ ಮಂಜೂರಿ ಮಾಡಿ 1.14 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗಿತ್ತು. ಎರಡನೇ ಬಾರಿಗೆ ಏಪ್ರಿಲ 30 ರಂದು 3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಒಪ್ಪಿಗೆ ನೀಡಲಾಗಿತ್ತು. ರಾಗಿ ಬೆಳೆಗಾರರು ಹೆಚ್ಚಾಗಿರುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ ರೈತರಿಗೆ ಇಂದು ಮೂರನೇ ಬಾರಿಗೆ ಇಂಡೆಂಟ್ ನೀಡುತ್ತಿದ್ದು, ಈ ಬಾರಿ ತಾಲ್ಲೂಕಿನ 800 ರೈತರಿಗೆ ಇಂಡೆಂಟ್ ನೀಡುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ವರದಿ: ರಮೇಶ್ ಆರ್ಯ