ಬೆಂಗಳೂರು : ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪದ ಅರ್ಜಿಗಳ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರರಾವ್ ಹಿಂದೆ ಸರಿದಿದ್ದಾರೆ. ಇವರ ಈ ನಡೆ ಈಗ ವ್ಯಾಪಕ ಚರ್ಚೆಗೊಳಗಾಗಿದೆ.
ರಾಘವೇಶ್ವರ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣ ಕೈಬಿಟ್ಟಿರುವ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಗಳ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾ.ಸುಧೀಂದ್ರರಾವ್ ತಿಳಿಸಿದ್ದಾರೆ.
ವಾದ ಆಲಿಸಲು ಸಮಯಾವಕಾಶ ತುಂಬಾ ಕಡಿಮೆ ಇರುವ ಹಿನ್ನೆಲೆಯಲ್ಲಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ನ್ಯಾ. ಎನ್. ಕೆ ಸುಧೀಂದ್ರರಾವ್ ಸ್ಪಷ್ಟಪಡಿಸಿದ್ದಾರೆ.
ರಾಘವೇಶ್ವರ್ ಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಈವರೆಗೆ 16 ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ರಾಘವೇಶ್ವರ ಅವರನ್ನು ಆರೋಪ ಮುಕ್ತಗೊಳಿಸಿ 2016ರ ಮಾರ್ಚ್ 21ರಂದು ಸೆಷನ್ಸ್ ಕೋರ್ಟ್ ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರಕರಣದ ಸಂತ್ರಸ್ತೆ ಹಾಗೂ ಪ್ರಾಸಿಕ್ಯೂಷನ್ ಸಲ್ಲಿಸಿರುವ ಮೇಲ್ಮನವಿಗಳನ್ನು ನ್ಯಾ. ಎನ್. ಕೆ. ಸುಧೀಂದ್ರರಾವ್ ಅವರಿದ್ದ ಪೀಠ ವಿಚಾರಣೆ ನಡೆಸುತ್ತಿತ್ತು.
ಒಬ್ಬ ನ್ಯಾಯಾದೀಶ ಪ್ರಕರಣದಿಂದ ಹಿಂದೆ ಸರೆಯುವ ಅವಕಾಶ ಇದೆ. ಆದರೆ ಸರಿಯಾದ ಕಾರಣ ನೀಡದೆ ಹಿಂದೆ ಸರಿಯುವುದು ಸರಿಯಾದ ಕಾರಣವಲ್ಲ. ಒತ್ತಡಗಳು ಬಂದಿರಬಹುದು, ಆದರೆ ಅವಗಳನ್ನು ಮೀರಿ ನಿಲ್ಲುವ ದೈರ್ಯ ನ್ಯಾಯಾದೀಶನಿಗೆ ಇರಬೇಕು ಎಂದು ಹೇಳುತ್ತಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಎಚ್.ಎನ್ ನಾಗಮೋಹನ ದಾಸ್.
ವಿಚಾರಣೆಯಿಂದ ಹಿಂದೆ ಸರಿಯುವ ನ್ಯಾಯಮೂರ್ತಿ ಸುಧೀಂದ್ರರಾವ್ ಅವರ ನಿರ್ಧಾರದಿಂದ ಪ್ರಕರಣವನ್ನು ಪುನಃ ಮತ್ತೊಂದು ಪೀಠ ಪ್ರಾಥಮಿಕ ಹಂತದಿಂದ ವಿಚಾರಣೆ ನಡೆಸಬೇಕಿದೆ. ನ್ಯಾಯಮೂರ್ತಿಗಳು ಈ ರೀತಿಯ ನಿರ್ಧಾರ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ. ಜಸ್ಟೀಸ್ ಅವರಿಗೆ ಬೆದರಿಕೆ ಹಾಕಿದ್ದರಾ? ಒತ್ತಡಕ್ಕೆ ಒಳಗಾಗಿದ್ದರಾ? ಎಂಬ ಪ್ರಶ್ನೆಗಳು ಕೂಡ ಕೇಳಿ ಬರುತ್ತಿವೆ.