ಈ ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರದ ಶತಪ್ರಯತ್ನಗಳ ಹೊರತಾಗಿಯೂ ಈಗ ಈ ಬಗ್ಗೆ ತನಿಖೆ ನಡೆಸುವ ಫ್ರೆಂಚ್ ನಿರ್ಧಾರ ಇದರಲ್ಲಿ ಎದ್ದಿದ್ದ ಎಲ್ಲ ವಿಷಯಗಳಿಗೆ ಮರುಜೀವ ನೀಡಿದೆಯೆನ್ನುವುದು ವಿಪರ್ಯಾಸವೇ ಸರಿ. ಈ ಫ್ರೆಂಚ್ ನಿರ್ಧಾರದ ಪ್ರಕಟಣೆಯ ನಂತರ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಈ ಮೌನವೇ ಎಲ್ಲವನ್ನೂ ಹೇಳುತ್ತದೆ. ಎರಡು ಪ್ರಭುತ್ವಗಳ ನಡುವಿನ ಒಪ್ಪಂದದ ಒಂದು ಪಕ್ಷಕ್ಕೇ ತನಿಖೆ ನಡೆಸಲು ಮೇಲ್ನೋಟಕ್ಕೇ ಆಧಾರಗಳಿವೆ ಎಂದು ಕಂಡಿರುವಾಗ ಒಂದು ಸ್ವತಂತ್ರ, ಉನ್ನತ ಮಟ್ಟದ ತನಿಖೆಯನ್ನು ಮುಂದಕ್ಕೆ ಹಾಕುವುದು ಮೋದಿ ಸರ್ಕಾರಕ್ಕೆ ಎಂದಿನ ವರೆಗೆ ಸಾಧ್ಯ?
ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಭಾರತ ಸರ್ಕಾರ ಮಾಡಿಕೊಂಡ 7.87 ಬಿಲಿಯ ಡಾಲರ್ ಮೊತ್ತದ ಒಪ್ಪಂದದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಫ್ರಾನ್ಸ್ ನಿರ್ಧರಿಸಿದ್ದು, 2021 ಜೂನ್ 14 ರಂದು ಪ್ರಕ್ರಿಯೆ ಆರಂಭವಾಗಿದೆ. ಶಂಕಿತ ‘ಭ್ರಷ್ಟಾಚಾರ’, ‘ಪ್ರಭಾವ-ಬಳಕೆ’, ‘ಕಪ್ಪು ಹಣದ ಸ್ವಚ್ಛೀಕರಣ’, ‘ಸ್ವಜನ-ಪಕ್ಷಪಾತ ಮತ್ತು ಅನಗತ್ಯ ತೆರಿಗೆ ವಿನಾಯಿತಿಗಳು’ ಮುಂತಾದ ಅಂಶಗಳ ಬಗ್ಗೆ ತನಿಖೆ ನಡೆಯಲಿದೆ. ಇದರಿಂದಾಗಿ, ನರೇಂದ್ರ ಮೋದಿ ಸರ್ಕಾರ ಮುಚ್ಚಿಹಾಕಲು ಇನ್ನಿಲ್ಲದ ಪ್ರಯತ್ನ ಮಾಡಿದ್ದ ಒಂದು ದೊಡ್ಡ ಹಗರಣಕ್ಕೆ ಮರು ಜೀವ ಬಂದಂತಾಗಿದೆ. ನ್ಯಾಯಾಂಗ ತನಿಖೆಯನ್ನು ತೆರೆಯಲು ಬೆಂಬಲ ನೀಡುವ ‘ಫ್ರೆಂಚ್ ರಾಷ್ಟ್ರೀಯ ಹಣಕಾಸು ಫಿರ್ಯಾದಿ ಕಚೇರಿ’ (ಪಿಎನ್‌ಎಫ್)ಯ ನಿರ್ಧಾರವು ಫ್ರಾನ್ಸ್ ನ ಶೆರ್ಪಾ ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ನೀಡಿದ ದೂರನ್ನು ಆಧರಿಸಿದೆ. ಫ್ರಾನ್ಸ್ ನ ಸ್ವತಂತ್ರ ತನಿಖಾ ಆನ್‌ಲೈನ್ ಪತ್ರಿಕೆ ‘ಮೀಡಿಯಾಪಾರ್ಟ್’ ಪ್ರಕಟಿಸಿದ ‘ರಫೇಲ್ ಪೇಪರ್ಸ್’ ಶೀರ್ಷಿಕೆಯ ಸರಣಿ ತನಿಖಾ ವರದಿಗಳಿಂದಾಗಿ ಈ ನಿರ್ಧಾರ ಬಂದಿದೆ. ಪಿಎನ್‌ಎಫ್‌ನ ಹಾಲಿ ಮುಖ್ಯಸ್ಥ ಜೀನ್-ಫ್ರಾಂಕೊಯಿಸ್ ಬೊಹ್ನರ್ಟ್ ಅವರ ನಿರ್ಧಾರವು ಅವರ ಪೂರ್ವಾಧಿಕಾರಿ ಶ್ರೀಮತಿ ಎಲೇನ್ ಹೂಲೆಟ್ ಅವರ ನಿರ್ಧಾರಕ್ಕೆ ತದ್ವಿರುದ್ಧವಾಗಿರುವುದರಿಂದ ಇದು ಮಹತ್ವ ಪಡೆದುಕೊಂಡಿದೆ. ಶೆರ್ಪಾ ಸಲ್ಲಿಸಿದ್ದ ಮೂಲ ಅರ್ಜಿಯನ್ನು ವಜಾ ಮಾಡಬೇಡಿ ಎಂಬ ತಮ್ಮ ಸಿಬ್ಬಂದಿಯ ಸಲಹೆಯನ್ನು ಧಿಕ್ಕರಿಸಿ ಎಲೇನ್ ಆ ನಿರ್ಧಾರ ಕೈಗೊಂಡಿದ್ದರು. ಫ್ರಾನ್ಸ್ ನ ಹಿತಗಳ ರಕ್ಷಣೆಗೆಂದು ಹೇಳಿ ದೂರನ್ನು ವಜಾ ಮಾಡಲಾಗಿತ್ತು. ಮೀಡಿಯಾಪಾರ್ಟ್ನ ‘ರಫೇಲ್ ಪೇಪರ್ಸ್’ ತನಿಖೆಗಳು ಒದಗಿಸಿದ ವಿವರಗಳನ್ನು ಆಧರಿಸಿ ಸಮಕಾಲಿಕಗೊಳಿಸಿದ ಆರೋಪಗಳ ಬಗ್ಗೆ ಈ ನ್ಯಾಯಾಂಗ ತನಿಖೆ ನಡೆಯುತ್ತಿದೆ.
ಇದನ್ನು ಓದಿ: ರಫೇಲ್ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ
ಅನಿಲ್ ಅಂಬಾನಿ ಪಾತ್ರ
2016ರಲ್ಲಿ ಆಗಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೊಸ್ ಹಾಲ್ಲಂದೆ ಮತ್ತು ಪ್ರಧಾನಿ ಮೋದಿ ಎರಡು ದೇಶಗಳ ಸರ್ಕಾರದ ನಡುವಿನ ರಫೇಲ್ ಒಪ್ಪಂದವನ್ನು ಇತ್ಯರ್ಥಗೊಳಿಸಿದ್ದರು. ಇದರಲ್ಲಿ ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಪಾತ್ರದ ಮೇಲೆ ತನಿಖೆ ಗಮನ ಕೇಂದ್ರೀಕರಿಸಲಿದೆ ಎಂದು ಮೀಡಿಯಾಪಾರ್ಟ್ ಹೇಳಿದೆ. ಹಾಲ್ಲಂದೆ, ಈಗಿನ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ (ಹಾಲ್ಲಂದೆ ಸಂಪುಟದಲ್ಲಿ ಆರ್ಥಿಕತೆ ಮತ್ತು ಹಣಕಾಸು ಸಚಿವರಾಗಿದ್ದರು), ಹಾಗೂ ಆಗ ರಕ್ಷಣಾ ಸಚಿವರಾಗಿದ್ದ ಈಗಿನ ವಿದೇಶಾಂಗ ಸಚಿವ ಜೀನ್-ವೆಸ್ ಲೆ ಡ್ರಿಯಾನ್ ಅವರ ಕ್ರಮಗಳ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಕೂಡ ಈ ಅಪರಾಧ ತನಿಖೆ ಪರಿಶೀಲಿಸಲಿದೆ ಎಂದೂ ಪತ್ರಿಕೆ ಹೊರಗೆಡಹಿದೆ.
ರಫೇಲ್ ಸಮರ ವಿಮಾನ ತಯಾರಿಸುವ ಕಂಪೆನಿ ಡಸ್ಸಾಲ್ ಏವಿಯೇಶನ್ ಮತ್ತು ಅನಿಲ್ ಅಂಬಾನಿಯ ರಿಲಯನ್ಸ್ ಸಮೂಹದ ನಡುವೆ ಸಹಿ ಹಾಕಲಾದ ಪಾಲುದಾರಿಕೆ ಒಪ್ಪಂದವೇ ಕ್ರಿಮಿನಲ್ ದೂರು ಮತ್ತು ನ್ಯಾಯಾಂಗ ತನಿಖೆಯ ಪ್ರಮುಖ ಅಂಶವಾಗಿದೆ. ಈ ಒಪ್ಪಂದದ ಆಧಾರದಲ್ಲಿ ರಿಲಯನ್ಸ್ ಸಮೂಹ 2017ರಲ್ಲಿ ಡಸ್ಸಾಲ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (ಡಿಆರ್‌ಎಎಲ್) ಎಂಬ ಜಂಟಿ ಒಡೆತನದ ಕಂಪೆನಿಯನ್ನು ಹುಟ್ಟು ಹಾಕಿತ್ತು, ಅದು ನಾಗ್ಪುರ ಸಮೀಪ ಒಂದು ಕೈಗಾರಿಕಾ ಸ್ಥಾವರವನ್ನು ನಿರ್ಮಿಸಿತ್ತು. ರಾಜಕೀಯ ಉದ್ದೇಶ ಹೊರತುಪಡಿಸಿ ಪಾಲುದಾರಿಕೆಯಲ್ಲಿ ಡಸ್ಸಾಲ್‌ಗೆ ಇನ್ಯಾವುದೇ ರೀತಿಯ ಆಸಕ್ತಿ ಇರಲಿಲ್ಲ ಎನ್ನುವುದು ಮೀಡಿಯಾಪಾರ್ಟ್ ಗೆ ಲಭ್ಯವಾದ ಗೌಪ್ಯ ದಾಖಲೆಪತ್ರಗಳಿಂದ ತಿಳಿದು ಬಂದಿದೆ.
ರಿಲಯನ್ಸ್ ಕಂಪೆನಿಯು ಜಂಟಿ ಉದ್ಯಮಕ್ಕೆ ಯಾವುದೇ ರೀತಿ ಹೂಡಿಕೆ ಅಥವಾ ಮಹತ್ವದ ತಾಂತ್ರಿಕ ಪರಿಣತಿಯನ್ನು ತರಲಿಲ್ಲ. ತನ್ನ ಸಾಮರ್ಥ್ಯ ಬಳಸಿ ರಾಜಕೀಯ ಪ್ರಭಾವವನ್ನಷ್ಟೇ ಅದು ತಂದಿತ್ತು ಎಂದು ಪತ್ರಿಕೆ ಹೇಳಿದೆ. “ಭಾರತ ಸರ್ಕಾರದೊಂದಿಗೆ ಕಾರ್ಯಕ್ರಮಗಳು ಮತ್ತು ಸೇವೆಗಳ ಮಾರ್ಕೆಟಿಂಗ್”ನ ಗುರಿಯನ್ನು ಅನಿಲ್ ಅಂಬಾನಿ ಗುಂಪಿಗೆ ವಹಿಸುವ ಬಗ್ಗೆ ರಿಲಯನ್ಸ್ ಮತ್ತು ಡಸ್ಸಾಲ್ ನಡುವಿನ ಒಪ್ಪಂದದ ವಿವರ ತಾನು ಪಡೆದ ಒಂದು ದಸ್ತಾವೇಜಿನಲ್ಲಿದೆ ಎಂದು ಮೀಡಿಯಾಪಾರ್ಟ್ ತಿಳಿಸಿದೆ.
ಇದನ್ನು ಓದಿ: ರಫೇಲ್ ಹಗರಣ : ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ
ಮಧ್ಯವರ್ತಿಯ ವಿಚಾರ ಏನಾಯಿತು?
ಮೀಡಿಯಾಪಾರ್ಟ್ ಅಲ್ಲದೆ ಭಾರತದ ಪತ್ರಿಕೆಗಳು ಕೂಡ ಕಲೆ ಹಾಕಿದ ಮಾಹಿತಿಗಳು, ರಫೆಲ್ ವ್ಯವಹಾರವೂ ಸೇರಿದಂತೆ ಭಾರತದ ರಕ್ಷಣಾ ವ್ಯವಹಾರಗಳಲ್ಲಿ ಇನ್ನೊಬ್ಬ ಮಧ್ಯವರ್ತಿ ಸುಶೇನ್ ಗುಪ್ತಾ ಎಂಬಾತನ ಪಾತ್ರ ಇರುವುದನ್ನೂ ಬಹಿರಂಗಪಡಿಸಿವೆ. ಅನುಷ್ಠಾನ ನಿರ್ದೇಶನಾಲಯ (ಇ.ಡಿ.) 2019ರಲ್ಲಿ ಗುಪ್ತಾನನ್ನು “ಕಪ್ಪು ಹಣವನ್ನು ಸ್ವಚ್ಛಗೊಳಿಸುವ” ಆರೋಪದ ಮೇಲೆ ಬಂಧಿಸಿದ್ದು ಆತ ಈಗ ಜಾಮೀನು ಮೇಲೆ ಹೊರಗಿದ್ದಾನೆ.
ಗುಪ್ತಾ ಲಂಚ ಪಡೆದಿದ್ದಾನೆ ಎಂದು ಆತನ ವಿರುದ್ಧ ಇ.ಡಿ. ದಾಖಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ. ಆ ಹಣವನ್ನು ಆತ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರ್ಕಾರದ ನೌಕರರಿಗೆ ನೀಡಲು ಬಳಸಿದ್ದಾನೆ. ಆಗಸ್ಟಾ ವೆಸ್ಟ್ ಲ್ಯಾಂಡ್‌ನೊಂದಿಗಿನ 550 ಮಿಲಿಯ ಡಾಲರ್ ಮೊತ್ತದ ವ್ಯವಹಾರ ಹಾಗೂ ಇತರ ವ್ಯವಹಾರಗಳಲ್ಲಿ ಲಂಚ ನೀಡಲು ಗುಪ್ತಾ ಆ ಹಣ ಬಳಸಿದ್ದಾನೆ ಎನ್ನುವುದು ಆರೋಪ. ಈ ಹಗರಣವನ್ನು ‘ಚಾಪರ್‌ಗೇಟ್’ ಎನ್ನಲಾಗುತ್ತದೆ. ಆದರೆ, ಇತರ ರಕ್ಷಣಾ ವ್ಯವಹಾರಗಳಲ್ಲಿ ಪಡೆದ ಲಂಚವು ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ತನಿಖೆಗೆ ಸಂಬಂಧಪಡದಿರುವುದರಿಂದ ಇತರ ವ್ಯವಹಾರಗಳ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲಾಗುವುದೆಂದು 2019 ಮೇ 20ರಂದು ಗುಪ್ತಾ ವಿರುದ್ಧ ಸಲ್ಲಿಸಿದ ಚಾರ್ಜ್ಶೀಟ್‌ನಲ್ಲಿ ಅನುಷ್ಠಾನ ನಿರ್ದೇಶನಾಲಯ ಹೇಳಿತ್ತು.
ರಫೇಲ್ ವ್ಯವಹಾರದಲ್ಲಿ ಈ ನಿರ್ದಿಷ್ಟ ಮಧ್ಯವರ್ತಿಯ ಭಾಗವಹಿಸುವಿಕೆ ಬಗ್ಗೆ ಭಾರತದಲ್ಲಿ ಕೇಳಿ ಬಂದಿದ್ದು ಅದೇ ಕೊನೆಯ ಬಾರಿಗೆ. ಅದರ ನಂತರ ಆತನ ಬಗ್ಗೆ ಯಾವುದೇ ಸುದ್ದಿಯಿಲ್ಲ.
ಮಾರ್ಗಚ್ಯುತಿಯ ಅಂಶಗಳು
ಇದೆಲ್ಲ ಈಗಾಗಲೇ ‘ದಿ ಹಿಂದು’ ಪತ್ರಿಕೆಯಲ್ಲಿ 2019ರ ಜನವರಿ-ಏಪ್ರಿಲ್ ಮಧ್ಯೆ ಪ್ರಕಟವಾದ ಆರು ಭಾಗಗಳ ವರದಿಗಳನ್ನು ಹೋಲುತ್ತದೆ. ರಕ್ಷಣಾ ಖರೀದಿ ಪ್ರಕ್ರಿಯೆ (ಡಿಫೆನ್ಸ್ ಪ್ರೊಕ್ಯೂರ್‌ಮೆಂಟ್ ಪ್ರೊಸೀಜರ್ -ಡಿಪಿಪಿ 2013) ಯಲ್ಲಿ ಅಡಕವಾಗಿರುವ ಅಂಶಗಳಿಂದ ಮಾರ್ಗಚ್ಯುತಿ ಆಗಿದೆ ಎನ್ನುವುದು ‘ದಿ ಹಿಂದು’ ತನಿಖೆಯಲ್ಲಿ ಎದ್ದು ಕಂಡಿತ್ತು. ಅದೇ ಶಂಕಿತ ಭ್ರಷ್ಟಾಚಾರ, ಪ್ರಭಾವ-ಬಳಕೆ, ಕಪ್ಪು ಹಣದ ಸ್ವಚ್ಛೀಕರಣ ಮತ್ತಿತರ ಅಪರಾಧಗಳ ಬಗ್ಗೆ ಫ್ರೆಂಚ್ ತನಿಖೆಯನ್ನು ಸಾಧ್ಯಗೊಳಿಸಿದೆ.
ಇದನ್ನು ಓದಿ: ಇಡೀ ರಫೆಲ್ ವ್ಯವಹಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು – ಸಿಪಿಐ(ಎಂ ) ಆಗ್ರಹ
ಈ ಮಾರ್ಗಚ್ಯುತಿಗಳಲ್ಲಿ ಸಾರ್ವಜನಿಕ ವಲಯದ ಒಳಗೊಳ್ಳುವಿಕೆಯೊಂದಿಗೆ ಇದ್ದ ಒಂದು ಪ್ರಮುಖ ‘ಮೇಕ್ ಇನ್ ಇಂಡಿಯಾ’ ಅಂಶವನ್ನು ರದ್ದುಪಡಿಸುವ ಹಠಾತ್ ನಿರ್ಧಾರ; ಭಾರತೀಯ ಮಾತುಕತೆ ತಂಡದ, ಮೂವರು ತಜ್ಞರು, ಇವರೆಲ್ಲರೂ ಆಯಾಯ ಕ್ಷೇತ್ರದ ಪರಿಣತರು, ಭಿನ್ನಮತವನ್ನು ದಾಖಲಿಸಿದರೂ, ಅದರ ಹೊರತಾಗಿಯೂ ಪ್ರತಿ ರಫೇಲ್ ಜೆಟ್ ವಿಮಾನಕ್ಕೆ ಅತಿರಂಜಿತ ಬೆಲೆ ನಿಗದಿಪಡಿಸಿದ್ದು; ರಕ್ಷಣಾ ಸಚಿವಾಲಯ ಪ್ರತಿಭಟನೆ ದಾಖಲಿಸಿದರೂ ಪ್ರಧಾನ ಮಂತ್ರಿ ಕಾರ್ಯಾಲಯದ (ಪಿಎಂಒ) ಅಧಿಕಾರಿಗಳು ಸಮಾನಾಂತರ ಮಾತುಕತೆ ನಡೆಸಿದ್ದು; ಅಂತರ್-ಸರ್ಕಾರಿ ಒಪ್ಪಂದದಲ್ಲಿ ಮತ್ತು ಪೂರೈಕೆ ನಿಯಮಾವಳಿಗಳಲ್ಲಿ ಇರಬೇಕಾದ ಭ್ರಷ್ಟಾಚಾರ-ವಿರೋಧಿ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಕುರಿತಾದ ಸ್ಥಾಪಿತ ಉಪಬಂಧಗಳನ್ನು ತೆಗೆದು ಹಾಕಿದ್ದು; ಹಣಕಾಸು ವಿವೇಕವು ಬಯಸುವ ಮತ್ತು ಸರಕಾರದ ಹಣಕಾಸು ತಜ್ಞರು ಇರಬೇಕೆಂದು ಬಯಸಿದ ಸಾರ್ವಭೌಮ ಅಥವ ಸರಕಾರದ ಖಾತ್ರಿಗಳು ಅಥವ ಕನಿಷ್ಟ ಬ್ಯಾಂಕ್ ಖಾತ್ರಿಗಳಿಂದಲೂ ವಿನಾಯ್ತಿ ನೀಡಿದ್ದು; ಫ್ರೆಂಚ್ ಪೂರೈಕೆದಾರರಿಗೆ ಅನುಕೂಲವಾಗುವಂತೆ ಬಾಧ್ಯತೆಗಳು, ನಿರ್ವಹಣೆಗಳು, ವೇಳಾನುಕ್ರಮಣಿಕೆ ಮತ್ತು ಪಾರದರ್ಶಕತೆಗೆ ಸಂಬಂಧಪಟ್ಟ ಆಫ್ಸೆಟ್ ಉಪಬಂಧಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿರುವುದು-ಇವೆಲ್ಲವೂ ಸೇರಿವೆ.
ರಫೇಲ್ ವ್ಯವಹಾರದ ಬಗ್ಗೆ ಯಾವುದೇ ರೀತಿಯ ತನಿಖೆ ಆಗುವುದನ್ನು ತಡೆಯಲು ಮೋದಿ ಸರ್ಕಾರ ಸಂಕಲ್ಪಿಸಿದೆ. ಇದಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನು ಅದು ನಡೆಸಿದೆ. ರಫೇಲ್ ವ್ಯವಹಾರದ ತನಿಖೆ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ ಅರ್ಜಿಯೊಂದನ್ನು ಮೋದಿ ಸರ್ಕಾರ ವಿರೋಧಿಸಿತು, ಕೋರ್ಟ್ ಕೂಡ ಅದಕ್ಕೆ ಸಾಥ್ ನೀಡಿತು. ರಕ್ಷಣಾ ಸಚಿವಾಲಯದ ಒತ್ತಾಯದ ಮೇರೆಗೆ ಸಿಎಜಿ ವರದಿ ಕೂಡ 2016ರ ಒಪ್ಪಂದದಲ್ಲಿದ್ದ ವಿಮಾನಗಳ ಬೆಲೆಯನ್ನು ಪರಿಷ್ಕರಿಸಿತು. ಈ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕೆಂಬ ಪ್ರಬಲ ಒತ್ತಾಯವನ್ನೂ ಮೋದಿ ಸರ್ಕಾರ ಮೊಂಡುತನದಿಂದ ತಿರಸ್ಕರಿಸಿತು. ಈ ಹಗರಣವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರದ ಈ ಎಲ್ಲ ಶತಪ್ರಯತ್ನಗಳ ಹೊರತಾಗಿಯೂ ಫ್ರೆಂಚ್ ತನಿಖೆಯು ಈ ಎಲ್ಲ ವಿಷಯಗಳಿಗೆ ಮರುಜೀವ ನೀಡಿದೆಯೆನ್ನುವುದು ವಿಪರ್ಯಾಸವೇ ಸರಿ.
ತನಿಖೆ ನಡೆಸುವ ಫ್ರೆಂಚ್ ನಿರ್ಧಾರದ ಪ್ರಕಟಣೆಯ ನಂತರ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಈ ಮೌನವೇ ಎಲ್ಲವನ್ನೂ ಹೇಳುತ್ತದೆ. ಎರಡು ಪ್ರಭುತ್ವಗಳ ನಡುವಿನ ಒಪ್ಪಂದದ ಒಂದು ಪಕ್ಷಕ್ಕೇ ತನಿಖೆ ನಡೆಸಲು ಮೇಲ್ನೋಟಕ್ಕೇ ಆಧಾರಗಳಿವೆ ಎಂದು ಕಂಡಿರುವಾಗ ಒಂದು ಸ್ವತಂತ್ರ, ಉನ್ನತ ಮಟ್ಟದ ತನಿಖೆಯನ್ನು ಮುಂದಕ್ಕೆ ಹಾಕುವುದು ಮೋದಿ ಸರ್ಕಾರಕ್ಕೆ ಎಂದಿನ ವರೆಗೆ ಸಾಧ್ಯ?
ಅನು: ವಿಶ್ವ