ರಫೇಲ್‌ ಹಗರಣ : ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ

ರಫೇಲ್ ಒಪ್ಪಂದದ ಕುರಿತು ಮಿಡಿಯಾಪಾರ್ಟ್ ಪ್ರಕಟಣೆಯಲ್ಲೇನಿದೆ? ಫ್ರಾನ್ಸ್ ಭ್ರಷ್ಟಾಚಾರ ವಿರೋಧಿ ಸಂಸ್ಥೆ ತನಿಖೆಯ ಉಲ್ಲೇಖಗಳೇನು? ಈ ವಿವಾದದ ಕುರಿತು ಡಸಾಲ್ಟ್ ಸ್ಪಷ್ಟನೆ ಏನು

ನವದೆಹಲಿ : ಭಾರತ – ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮತ್ತೆ ವಿವಾದ ಭುಗಿಲೆದ್ದಿದ್ದು, ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಫ್ರೆಂಚ್ ಫೈಟರ್ ಜೆಟ್ ರಫೇಲ್ ತಯಾರಿಕಾ ಸಂಸ್ಥೆ ಡಸಾಲ್ಟ್, 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಭಾರತವನ್ನು ಒಪ್ಪಿಸಲು ಭಾರತದ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯೂರೋ ಪಾವತಿಸಿದೆ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತನಿಖೆಯನ್ನು ಉಲ್ಲೇಖಿಸಿ ಪ್ಯಾರಿಸ್‍ ನಲ್ಲಿರುವ ತನಿಖಾ ಸುದ್ದಿ ವೆಬ್‍ ಸೈಟ್ ಮಿಡಿಯಾಪಾರ್ಟ್ ಆರೋಪಿಸಿದೆ. ಅಲ್ಲದೇ ಈ ಭಾರತೀಯ ಮಧ್ಯವರ್ತಿ ಬೇರೊಂದು ರಕ್ಷಣಾ ಒಪ್ಪಂದ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾನೆ ಎಂದು ಮಿಡಿಯಾಪಾರ್ಟ್ ಹೇಳಿದೆ. ಇನ್ನೇನು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ವಿವಾದಗಳು ತಣ್ಣಗಾದವು ಎಂದುಕೊಳ್ಳುತ್ತಿರುವಾಗಲೇ, ಹೊಸದೊಂದು ವಿವಾದ ಹುಟ್ಟಿಕೊಂಡಿರುವುದು ಭಾರೀ ಕುತೂಹಲ ಕೆರಳಿಸಿದೆ.

ಹಾಗಾದರೆ ರಫೇಲ್ ಒಪ್ಪಂದದ ಕುರಿತು ಮಿಡಿಯಾಪಾರ್ಟ್ ಪ್ರಕಟಣೆಯಲ್ಲೇನಿದೆ? ಫ್ರಾನ್ಸ್ ಭ್ರಷ್ಟಾಚಾರ ವಿರೋಧಿ ಸಂಸ್ಥೆ ತನಿಖೆಯ ಉಲ್ಲೇಖಗಳೇನು? ಈ ವಿವಾದದ ಕುರಿತು ಡಸಾಲ್ಟ್ ಸ್ಪಷ್ಟನೆ ಏನು ಎಂಬುದರತ್ತ ಗಮನಹರಿಸುವುದಾದರೆ.

ರಪೇಲ್‌ ಯುದ್ಧ ವಿಮಾನ ಒಪ್ಪಂದ : ಮನೋಹರ್‌ ಪರಿಕ್ಕರ್‌ ಮತ್ತು ಜೀನ್‌ ಯೆಸ್ವೆಲೆ ಡ್ರಿಯಾನ್‌ (ಜನವರಿ, 25, 2016)

ಭಾರತ – ಫ್ರಾನ್ಸ್ ನಡುವೆ ನಡೆದ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ವರದಿ ಮಾಡಿರುವ ಫ್ರಾನ್ಸ್‌ನ ಮಿಡಿಯಾಪಾರ್ಟ್, ತಾನು ನಡೆಸಿರುವ ತನಿಖೆಯ ಆಧಾರದಲ್ಲಿ ಡಸಾಲ್ಟ್ ಸಂಸ್ಥೆ ಒಪ್ಪಂದ ಕುದುರಿಸಲು ಭಾರತೀಯ ಮಧ್ಯವರ್ತಿಯೋರ್ವನಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ ಎಂದು ಆರೋಪಿಸಿದೆ. ಅಲ್ಲದೇ ಈ ಮಧ್ಯವರ್ತಿ ಬೇರೊಂದು ರಕ್ಷಣಾ ಒಪ್ಪಂದದಲ್ಲಿಯೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾನೆ ಎಂದು ಮಿಡಿಯಾಪಾರ್ಟ್ ಉಲ್ಲೇಖಿಸಿದೆ.

ಫ್ರಾನ್ಸ್‌ನ ಭ್ರಷ್ಟಾಚಾರ ವಿರೋಧಿ ಸಂಸ್ಥೆ(AFA)ಯ ತನಿಖೆಯ ಅಂಶಗಳನ್ನು ತಾನು ಉಲ್ಲೇಖಿಸಿರುವುದಾಗಿಯೂ ಮಿಡಿಯಾಪಾರ್ಟ್ ಸ್ಷಷ್ಟಪಡಿಸಿದೆ. AFA ಫ್ರೆಂಚ್‍ ಸರಕಾರಕ್ಕೆ ಉತ್ತರದಾಯಿಯಾಗಿರುವ ಸಂಸ್ಥೆ. ಇದನ್ನು ದೊಡ್ಡ ಕಂಪನಿಗಳು ಫ್ರೆಂಚ್‍ ಕಾಯ್ದೆಯಲ್ಲಿ ನಿರೂಪಿಸಲಾಗಿರುವ ಭ್ರಷ್ಟಾಚಾರ-ವಿರೋದಿ ವಿಧಾನಗಳ ಅನುಷ್ಠಾನ ನಡೆಯುತ್ತಿದೆಯೇ ಎಂದು ಪರೀಕ್ಷಿಸಲು 2017ರಲ್ಲಿ ರಚಿಸಲಾಯಿತು.

ಇದನ್ನೂ ಓದಿ : ಪಿಎಂ ಕೇರ್ಸ್ ಸುತ್ತ ಅನುಮಾನದ ಹುತ್ತ

ಇದು ಡಸಾಲ್ಟ್ ಕಂಪನಿಯ 2017ರ ಲೆಕ್ಕ ಪರಿಶೋಧನೆ ನಡೆಸುತ್ತಿದ್ದಾಗ 508,925 ಯುರೋ ಹಣದ ಮಾಹಿತಿ ಬಗ್ಗೆ ತನಿಖೆ ಮಾಡಿದಾಗ, ‘ಗ್ರಾಹಕರಿಗೆ ಉಡುಗೊರೆಗಳು’ ಎಂಬ ಉಲ್ಲೇಖ AFA ಗಮನ ಸೆಳೆದಿತ್ತು. ಏಕಂದರೆ ‘ಉಡುಗೊರೆ’ಯ ಬಾಬ್ತಿನಲ್ಲಿ ಇದು ಭಾರೀ ದೊಡ್ಡ ಮೊತ್ತ. ಈ ಬಗ್ಗೆ ಕೇಳಿದಾಗ ಡಸಾಲ್ಟ್  ಕಂಪನಿ ಮಾರ್ಚ್‍ 30, 2017 ದಿನಾಂಕ ದ ಒಂದು ‘ಪ್ರೊಫೋರ್ಮ ಇನ್‍ವಾಯ್ಸ್’ ತೋರಿಸಿತು. ಇದು ಭಾರತೀಯ ಕಂಪನಿ  ಡಿಫ್‍ ಸಿಸ್ ಸೊಲ್ಯುಶನ್ಸ್ ನೀಡಿದ್ದ ಇನ್‍ ವಾಯ್ಸ್. ಇದು ರಫೆಲ್‍ ಸಿ ಯ ಸಣ್ಣ ಕಾರು ಗಾತ್ರದ 50 ಮಾದರಿಗಳನ್ನು ತಯಾರಿಸಿ ಕೊಡುವುದಕ್ಕಾಗಿ ಕೊಟ್ಟ ಆರ್ಡರ್ ನ 50% ಹಣ ಎಂದು ಡಸಾಲ್ಟ್‍ ಕಂಪನಿ  ಹೇಳಿತು. ಅಂದರೆ ಇದು 1,017, 850 ಯುರೋ ಮೊತ್ತದ ಆರ್ಡರ್. ಆಗ AFA ಇನ್ಸ್ ಪೆಕ್ಟರುಗಳು ತನ್ನದೇ ವಿಮಾನದ ಮಾದರಿಗಳನ್ನು ತಲಾ 20,3357  ಯುರೋದಷ್ಟು ವೆಚ್ಚದಲ್ಲಿ  ತಯಾರಿಸಲು ಓಂದು ಭಾರತೀಯ ಕಂಪನಿಗೆ ಹೇಳಿದ್ದೇಕೆ ಮತ್ತು ಇದನ್ನು ‘ಗ್ರಾಹಕರಿಗೆ ಉಡುಗೊರೆ’ ಎಂದು ಉಲ್ಲೇಖಿಸಿದ್ದೇಕೆ ಎಂದು ಪ್ರಶ್ನಿಸಿತು ಎನ್ನಲಾಗಿದೆ.

ರಫೇಲ್ ಜೆಟ್‌ಗಳ 50 ಮಾದರಿಗಳ ತಯಾರಿಕೆಗಾಗಿ ಈ ಹಣವನ್ನು ಬಳಸಲಾಗಿದೆ, ಇಂತಹ ಮಾದರಿಗಳು ಇವೆ, ಅವನ್ನು ಈ ಭಾರತೀಯ ಕಂಪನಿ ಕಂಪನಿ ತನಗೆ ಪೂರೈಸಿದೆ ಎಂಬ ಬಗ್ಗೆ ಒಂದೇ ಒಂದು ದಸ್ತಾವೇಜನ್ನೂ  ಡಸಾಲ್ಟ್  AFAಗೆ ಒದಗಿಸಿಲ್ಲ ಎಂದು ಮಿಡಿಯಾಪಾರ್ಟ್ ಹೇಳಿದೆ.

ಭಾರತದಲ್ಲಿ ಡಸಾಲ್ಟ್ ಕಂಪನಿಯ  ಒಂದು ಸಬ್ ‍ಕಾಟ್ರಾಕ್ಟ್  ಕಂಪನಿಯಾಗಿರಬಹುದಾದ  ಡಿಫ್‍ ಸಿಸ್ ಸೊಲ್ಯುಶನ್ಸ್ ಗುಪ್ತಾ ಕುಟುಂಬದ ಒಡೆತನದ ಕಂಪನಿ. ಈ ಕುಟುಂಬದ ಮೂರು ತಲೆಮಾರುಗಳ ಸದಸ್ಯರು ವೈಮಾನಿಕ ಮತ್ತು ರಕ್ಷಣಾ ಉದ್ದಿಮೆಯಲ್ಲಿ ಮಧ್ಯವರ್ತಿಗಳಾಗಿದ್ದು, ಜನವರಿ 2019ರಲ್ಲಿ ಭಾರತದ ಮಾಧ್ಯಮದ ‘ಕೋಬ್ರಾಪೋಸ್ಟ್ ಮತ್ತು ಇಕನಾಮಿಕ್‍ ಟೈಮ್ಸ್ ಈ ಕುಟಂಬದ ಒಬ್ಬ ಸದಸ್ಯ ಸುಶೆನ್ ಗುಪ್ತ ಡಸಾಲ್ಟ್ ನ ಒಬ್ಬ ಏಜೆಂಟನಾಗಿ ರಫೆಲ್‍ ಕಾಂಟ್ರಾಕ್ಟ್ ಗೆ ಕೆಲಸ ಮಾಡಿದ್ದರು, ಭಾರತದ ರಕ್ಷಣಾ ಮಂತ್ರಾಲಯದಿಂದ ಗುಪ್ತ ದಸ್ತಾವೇಜುಗಳನ್ನು ಪಡೆದಿದ್ದರು ಎಂದು ಪ್ರಕಟಿಸಿದ್ದವು ಎಂಬುದನ್ನೂ  ಮಿಡಿಯಪೋಸ್ಟ್ ಉಲ್ಲೇಖಿಸಿದೆ.

 ಸಪ್ಟಂಬರ್ 2016ರಲ್ಲಿ ಫ್ರೆಂಚ್‍ ಮತ್ತು ಭಾರತೀಯ ರಕ್ಷಣಾ ಮಂತ್ರಿಗಳು ರಫೆಲ್‍ ವ್ಯವಹಾರಕ್ಕೆ ಸಹಿ ಹಾಕಿದ ಆರು ತಿಂಗಳ ನಂತರ  1ಮಿಲಿಯ ಯುರೋಗಳ ‘ಇನ್‍ ವಾಯ್ಸ್’ ಕಳಿಸಿದ್ದು ಈ ವ್ಯಕ್ತಿಯೇ. ಮಾರ್ಚ್‍ 2029ರಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ಈತನನ್ನು ಅಗಸ್ಟ ವೆಸ್ಟ್ ಲ್ಯಾಂಡ್‍ ಹೆಲಿಕಾಪ್ಟರ್ ಗಳ ಮಾರಾಟದ ‘ಚಾಪರ್ ಗೇಟ್ ಹಗರಣ’ದಲ್ಲಿ  ಬಂಧಿಸಲಾಯಿತು.  ಕಪ್ಪು ಹಣವನ್ನು ಬಿಳಿ ಮಾಡಿರುವ ಆರೋಪ ಇತನ ಮೇಲಿದ್ದು ಈಗ ಜಾಮೀನಿನ ಮೇಲೆ ಬಿಡುಗಡೆ ಪಡೆದಿದ್ದಾರೆ ಎಂದೂ ಮಿಡಿಯಪೋಸ್ಟ್ ವರದಿ ಹೇಳಿದೆ.

ಆದರೆ, ಅಂತಿಮವಾಗಿ, AFA ಡಸಾಲ್ಟ್ ಕಂಪನಿಯ  ಲೆಕ್ಕ ಪರಿಶೋಧನೆ ವರದಿಯನ್ನು ಅಂತಿಮಗೊಳಿಸಿದಾಗ ಅದರ ನಿರ್ದೇಶಕ ಚಾರ್ಲ್ಸ್ ಡುಕೈನ್ ಇದರ ಬಗ್ಗೆ ವಿಚಾರಣೇ ನಡೆಸಬೇಕು ಎಂದೇನೂ ಹೇಳಲಿಲ್ಲ, ಈ ಬಗ್ಗೆ ಉಲ್ಲೇಖವನ್ನು ಕೇವಲ ಎರಡು ಸಣ್ಣ  ಪರಿಚ್ಛೇದಗಳಿಗೆ ಇಳಿಸಲಾಗಿದೆಯಂತೆ. ಮೀಡಿಯಪಾರಟ್‍ ಈ ಬಗ್ಗೆ ಆತನನ್ನ ಕೇಳಿದಾಗ ಟಿಪ್ಪಣಿ ಮಾಡಲು ಅವರು ನಿರಾಕರಿಸಿದ್ದಾರಂತೆ. ಡಸಾಲ್ಟ್ ಕಂಪನಿಯ ವಕ್ತಾರರು ಕೂಡ  ತಮ್ಮ ಕಂಪನಿ ಈ ಬೆಳವಣಿಗೆಯ ಬಗ್ಗೆ ಟಿಪ್ಪಣಿ ಮಾಡುವುದಿಲ್ಲ ಎಂದು ಹೇಳಿದ್ದಾರಂತೆ.

Donate Janashakthi Media

Leave a Reply

Your email address will not be published. Required fields are marked *