ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಆರ್ ಸುನಂದಮ್ಮ ಆಯ್ಕೆ

ಬೆಂಗಳೂರು :ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಆರ್ ಸುನಂದಮ್ಮ ಆಯ್ಕೆಯಾಗಿದ್ದಾರೆ.

757ಮತ ಚಲಾವಣೆಯಾಗಿದ್ದು, ಡಾ. ಆರ್ ಸುನಂದಮ್ಮ 471 ಮತಗಳನ್ನು ಪಡೆದು 189ಮತಗಳಿಂದ ಗೆಲುವು ಸಾಧಿಸಿದ್ದಾರೆ. ನಿರ್ಮಲ ಯಲಿಗಾರ್ 282 ಮತಗಳನ್ನು ಪಡೆದುಪರಾಭವಗೊಂಡಿದ್ದಾರೆ. 4 ಮತಗಳು ಅಸಿಂಧುಗೊಂಡಿವೆ.

ರಾಜ್ಯದಾದ್ಯಂತ 1,600 ಮತದಾರರಿದ್ದಾರೆ. ಇವರಲ್ಲಿ ಬೆಂಗಳೂರು ಹೊರತುಪಡಿಸಿ, ಇತರೆ ಜಿಲ್ಲೆಗಳಿಂದ ಅಂಚೆ ಮೂಲಕ ಮತದಾನ ನಡೆದಿತ್ತು. ಬೆಂಗಳೂರಿನಲ್ಲಿ 700 ಮತದಾರರಿದ್ದು, ಇಂದು (ಡಿ 14) ಮತದಾನ ನಡೆದಿತ್ತು.

ಆರ್ ಸುನಂದಮ್ಮ ಪರಿಚಯ

ಸಂವೇದನಾಶೀಲ ಸ್ತ್ರೀವಾದಿ ಲೇಖಕಿ ಪ್ರೊ.ಆರ್.ಸುನಂದಮ್ಮ ಅವರು ಮೂಲತಃ ಕೋಲಾರ ಜಿಲ್ಲೆಯ ವೆಂಕಟಾಪುರದವರು. ಕತೆ, ಕಾವ್ಯ, ಕಾದಂಬರಿ, ಸಂಶೋಧನಾ ಮತ್ತು ವೈಚಾರಿಕ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 2003ರಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇರ್ಪಡೆಯಾದ ಅವರು, ಉಪನ್ಯಾಸಕಿಯಾಗಿ, ರೀಡರ್‌ ಆಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನಕದಾಸ ಅಧ್ಯಯನ ಪೀಠದ ಸಂಯೋಜಕರಾಗಿ, ಎರಡು ಅವಧಿಗೆ ಆರ್ಥಿಕ ಅಧಿಕಾರಿಗಳಾಗಿ, ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ದೇಶದ ಮೊಟ್ಟಮೊದಲ ಮಹಿಳಾ ವಸ್ತು ಸಂಗ್ರಹಾಲಯದ ಸ್ಥಾಪಕ ನಿರ್ದೇಶಕರಾಗಿ, ಮಹಿಳಾ ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಕುಲಸಚಿವರಾಗಿ ಅತ್ಯಂತ ಸಮರ್ಥವಾಗಿ ನಿಭಾಯಿಸಿ ಇದೀಗ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

ಬೋಧನೆ, ವಿಸ್ತರಣಾ ಚಟುವಟಿಕೆಗಳ ಜೊತೆ ಜೊತೆಯಲ್ಲಿಯೇ ಸಂಶೋಧನಾ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿರುವ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಯುಜಿಸಿ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಯೊಂದು ನೀಡಿರುವ “ಪ್ರಾಯೋಜಕತ್ವದಲ್ಲಿ ಒಟ್ಟು 11 ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಸಂಶೋಧನಾ ವರದಿಗಳನ್ನು ಸಲ್ಲಿಸಿದ್ದಾರೆ. ಮಹಿಳಾ ವಿವಿಯ ಮಹಿಳಾ ಅಧ್ಯಯನ ವಿಭಾಗದಲ್ಲಿ 16 ವಿದ್ಯಾರ್ಥಿನಿಯರಿಗೆ ಪಿಎಚ್‍.ಡಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.”

2001ರಲ್ಲಿಇವರ ‘ಪರಿವರ್ತನೆ’ ಕತೆಗೆ ಎಚ್.ಎಂ.ಟಿ. ಗಡಿಯಾರಗಳ ಉದಯೋನ್ಮುಖ ಲೇಖಕರ ಪ್ರಶಸ್ತಿ, 2005ರಲ್ಲಿ ‘ದ್ವಿತ್ವ’ ಕಾದಂಬರಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಪ್ರಶಸ್ತಿ, 2010ರಲ್ಲಿ ಅತ್ಯುತ್ತಮ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜಕರ ರಾಜ್ಯ ಪ್ರಶಸ್ತಿ, 2012ರಲ್ಲಿ ಇಂದಿರಾ ಗಾಂಧಿ ವಿಶಿಷ್ಟ ಸೇವಾ ಪ್ರಶಸ್ತಿ, 2017ರಲ್ಲಿ ಸಮಾಜ ಸೇವೆಗಾಗಿ ಸುವರ್ಣಮುಖಿ ಪ್ರಶಸ್ತಿ, 2015ರಲ್ಲಿ ದಲಿತ ಸಾಹಿತ್ಯ ಪರಿಷತ್‍ ‘ಸಾವಿತ್ರಿ ಬಾಯಿ ಫುಲೆ’ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

 

Donate Janashakthi Media

Leave a Reply

Your email address will not be published. Required fields are marked *