ಬೆಂಗಳೂರು: ‘ರಾಜರಾಜೇಶ್ವರಿ ನಗರದಲ್ಲಿ ಉಂಟಾಗುತ್ತಿರುವ ಅಶಾಂತಿಗೆ ಅಂತ್ಯ ಹಾಡಿ, ಕ್ಷೇತ್ರವನ್ನು ಎಲ್ಲ ರಂಗದಲ್ಲೂ ಅಭಿವೃದ್ಧಿ ಮಾಡಲು ನಿಮ್ಮ ಸಹೋದರಿ ಕುಸುಮಾ ಅವರಿಗೆ ಮತ ನೀಡಬೇಕು’ ಎಂದು ಮಾಜಿ ಸಚಿವೆ, ಚಿತ್ರ ನಟಿ ಉಮಾಶ್ರೀ ಯವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ರಾಜರಾಜೇಶ್ವರ ನಗರದ ಉಪಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಉಮಾಶ್ರೀಯವರು ಮಾತನಾಡುತ್ತಾ ಮಹಿಳೆಯರು ಚುನಾವಣೆಗೆ ನಿಲ್ಲುವ ಮೂಲಕ ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಆರಂಭಿಸಿದ್ದಾರೆ. ಈಗಾಗಲೇ ಅನೇಕ ಮಹಿಳಾ ಶಾಸಕರಿದ್ದಾರೆ. ಆ ಸಾಲಿಗೆ ಕುಸುಮಾರವನ್ನು ಸೇರಿಸುವ ಜವಬ್ದಾರಿ ನಿಮ್ಮ ಮೇಲಿದೆ. ಈ ಕೆಲಸವನ್ನು ನೀವು ನಿಷ್ಠೆಯಿಂದ ಮಾಡುವಿರೆಂದು ನಾನು ನಂಬಿರುವೆ ಎಂದು ಉಮಾಶ್ರಿ ತಿಳಿಸಿದರು.
ಪ್ರಚಾರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ನನ್ನ ಹಾಗೂ ನಿಮ್ಮ ಸೋದರಿ ಕುಸುಮಾ ಅವರಿಗೆ ಆಶೀರ್ವಾದ ಮಾಡಿ ಎಂದು ಕೇಳಲು ಪಕ್ಷದ ನಾಯಕರು ಇಂದು ನಿಮ್ಮ ಮುಂದೆ ಬಂದಿದ್ದೇವೆ. ನೀವೆಲ್ಲರೂ ವಿದ್ಯಾವಂತರು, ಬುದ್ಧಿವಂತರಿದ್ದೀರಿ. ಈ ಚುನಾವಣೆ ಯಾಕೆ ಬಂತು ಅಂತಾ ಒಮ್ಮೆ ಆಲೋಚನೆ ಮಾಡಿ. ಐದು ವರ್ಷ ಕೆಲಸ ಮಾಡಲು ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿರಿ. ಆದರೆ ಅವರು ಮಾಡಿದ್ದಾದರೂ ಏನು? ನಿಮ್ಮ ಮತವನ್ನು, ನಿಮ್ಮ ವಿಶ್ವಾಸವನ್ನು, ನಂಬಿಕೆಯನ್ನೇ ಅವರು ಮಾರಿಕೊಂಡಿದ್ದಾರೆ. ಅಲ್ಲದೆ ನಮ್ಮ ಪಕ್ಷದ ಎಲ್ಲಾ ಸೌಕರ್ಯಗಳನ್ನು ಬಳಸಿಕೊಂಡು ಪಕ್ಷಕ್ಕೂ ಕೂಡ ಮೋಸ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಟಿಕೆಟ್ ಕೊಟ್ಟು, ಬೆಳೆಸಿ ನಾವು ಕೂಡ ತಪ್ಪು ಮಾಡಿದ್ದೇವೆ. ನಮ್ಮದು ಮಹಾಪರಾಧ. ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇವೆ. ನೀವು ನಮಗೆ ಮತ ನೀಡುತ್ತೀರಿ ಅಂತ ನನಗೆ ವಿಶ್ವಾಸ ಇದೆ. ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಕಾರ್ಯಕರ್ತರ ರಕ್ಷಣೆಗೆ ನಾವು ಸದಾ ಬದ್ಧರಾಗಿದ್ದೇವೆ. ಕಾರ್ಯಕರ್ತರ ರಕ್ಷಣೆ ವಿಚಾರದಲ್ಲಿ ರಾಜಿ ಇಲ್ಲ ಎಂದು ಡಿಕೆಶಿ ಸ್ಪಷ್ಟ ಪಡಿಸಿದರು.
ಪ್ರಚಾರದಲ್ಲಿ ಅಭ್ಯರ್ಥಿ ಕುಸುಮಾ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ಬೆಂಗಳೂರು ಆನೇಕಲ್ ಶಾಸಕ ಶಿವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲೆ ಅಧ್ಯಕ್ಷ ರಾಜಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.