ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ ಆಯ್ಕೆ

ಬೆಂಗಳೂರು : ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಬೆಂಗಳೂರಿನ ಪದ್ಮನಾಭಗರ ಕ್ಷೇತ್ರದ ಶಾಸಕ ಆರ್. ಆಶೋಕ ಅವರನ್ನು ಆಯ್ಕೆ ಮಾಡಲಾಗಿದೆ.

ಇಲ್ಲಿನ ಐಟಿಸಿ ಗಾರ್ಡೆನಿಯಾ ಹೋಟೆಲ್‌ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.ಆ ಮೂಲಕ ಬರೋಬ್ಬರಿ 6 ತಿಂಗಳ ಬಳಿಕ ವಿರೋಧ ಪಕ್ಷದ ನಾಯಕನ್ನು ಬಿಜೆಪಿ ಆಯ್ಕೆ ಮಾಡಿದೆ.

ವಿರೋಧ ಪಕ್ಷದ ನಾಯಕನ ಆಯ್ಕೆಗೆ ಹೈಕಮಾಂಡ್‌ನಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ದಿಷ್ಯಂತ್‌ ಕುಮಾರ್ ಗೌರವ್‌ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಆಗಮಿಸಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌ ಯಡಿಯೂರಪ್ಪ ಇದ್ದರು.

ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಎರಡೂ ವಿಚಾರವಾಗಿ ರಾಜ್ಯ ಬಿಜೆಪಿ ಕಳೆದ ಕೆಲವು ದಿನಗಳಿಂದ ತೀವ್ರ ವಾಗ್ದಾಳಿ ಎದುರಿಸಿದ್ದು, ಇತ್ತೀಚೆಗಷ್ಟೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದ ಬೆನ್ನಿಗೇ ಇದೀಗ ವಿಪಕ್ಷ ನಾಯಕರ ಆಯ್ಕೆಯನ್ನೂ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಮತ್ತೊಂದೆಡೆ ವಿಪಕ್ಷ ನಾಯಕರ ಆಯ್ಕೆ ಕುರಿತ ಸಭೆಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಹೊರಗೆ ಹೋಗಿದ್ದಾರೆ. ಯಾರು ವಿಪಕ್ಷ ನಾಯಕ ಆಗಲಿದ್ದಾರೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಅವರು ಅಸಮಾನಧಾನಗೊಂಡು ಸಭೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಲ್ಲಿ ವಿಪಕ್ಷ ನಾಯಕರ ವಿಚಾರವಗಿ ಭಿನ್ನಮತ ಉಂಟಾಗಿದೆ ಎಂದೂ ಹೇಳಲಾಗುತ್ತಿದೆ.

ಆರ್ ಆಶೋಕ ರಾಜಕೀಯ ಹಾದಿ : ಆರ್‌.ಅಶೋಕ ( ಜಾಲಹಳ್ಳಿ ರಾಮಯ್ಯ ಅಶೋಕ) 1957ರ ಜುಲೈ 1ರಂದು ಬೆಂಗಳೂರಿನ ಜಾಲಹಳ್ಳಿಯಲ್ಲಿ ಜನಿಸಿದರು. ತಮ್ಮ 10ನೇ ವಯಸ್ಸಿಗೇ ಆರ್‌ಎಸ್‌ಎಸ್‌ ಸೇರಿದ ಅವರು ವಿ.ವಿ.ಪುರಂ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದರು. 1975-77ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗವಹಿಸಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಎಲ್‌.ಕೆ.ಅಡ್ವಾಣಿ ಮುಂತಾದವರ ಜತೆ ಒಂದು ತಿಂಗಳು ಜೈಲು ವಾಸ ಅನುಭವಿಸಿದರು.

1995 ರಲ್ಲಿ ಬಿಜೆಪಿಯ ನಗರ ಅಧ್ಯಕ್ಷರಾಗಿ ಸರ್ಕಾರ ವಿರುದ್ಧ ಹೋರಾಟ ನಡೆಸಿದರು. 1997 ರಲ್ಲಿ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ವಿಧಾನಸಭೆಗೆ ಆಯ್ಕೆ ಆದರು. ಆ ಬಳಿಕ 1999 ಮತ್ತು 2004 ರ ವಿಧಾನಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸಿದರು. ಕ್ಷೇತ್ರ ಪುನರ್‌ವಿಂಗಡನೆಯ ಬಳಿಕ ಪದ್ಮನಾಭ ನಗರ ಕ್ಷೇತ್ರ ರೂಪುಗೊಂಡಿತು. ಈ ಕ್ಷೇತ್ರದಲ್ಲಿ 2008, 2013, 2018 ಮತ್ತು 2023 ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದರು. ಒಟ್ಟು 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2006-2007 ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

2008-10 ರಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಾರಿಗೆ ಮತ್ತು ಆಹಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2010-13 ಸಾರಿಗೆ ಮತ್ತು ಗೃಹ ಖಾತೆಯನ್ನು ಹೊಂದಿದ್ದರು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ, ಉಪಮುಖ್ಯಮಂತ್ರಿ ಆಗಿದ್ದರು.

2019 ರ ಯಡಿಯೂರಪ್ಪ ಮತ್ತು 2021 ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2023 ರಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *