-ವಸಂತರಾಜ ಎನ್.ಕೆ
ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ (ಮೇ8-9) ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈಗಲೂ ಈ ಸಂಭ್ರಮಾಚರಣೆ ಏಕೆ? ಫ್ಯಾಸಿಸಂ ನ್ನು ಏಕೆ ವಿರೋಧಿಸಬೇಕು ? ಫ್ಯಾಸಿಸಂ ವಿರುದ್ಧ ವಿಜಯದಲ್ಲಿ ವಿವಿಧ ದೇಶಗಳ ಸರಕಾರಗಳ, ರಾಜಕೀಯ ಶಕ್ತಿಗಳ ಪಾತ್ರವೇನಿತ್ತು ? ಎರಡನೆಯ ಮಹಾಯುದ್ಧ ಏಕೆ ಫ್ಯಾಸಿಸಂ ಜತೆಗೆ ತಳುಕು ಹಾಕಿಕೊಂಡಿದೆ? ಫ್ಯಾಸಿಸಂ ವಿರುದ್ಧ ವಿಜಯದಲ್ಲಿ ಮಿತ್ರಕೂಟದ ಸೈನ್ಯಗಳ ಪಾತ್ರವೇನಿತ್ತು? ಯುರೋಪಿಯನ್ ಜನತಾ ಪ್ರತಿರೋಧ ಗೆರಿಲ್ಲಾ ಸೈನ್ಯದ ಪಾತ್ರವೇನಿತ್ತು? ಆಗಿನ ಫ್ಯಾಸಿಸಂ ವಿರುದ್ಧ ಮಿತ್ರಕೂಟದ ಪಾಶ್ಚಿಮಾತ್ಯ ದೇಶಗಳು ಮತ್ತು ಮಾಜಿ ಸೋವಿಯೆಟ್ ದೇಶಗಳು ಬೇರೆ ಬೇರೆ ದಿನದಂದು ಬೇರೆ ಬೇರೆ ರೀತಿಯಲ್ಲಿ ಬೇರೆಯಾಗಿ ಏಕೆ ಆಚರಿಸುತ್ತಾರೆ? ಈ ಕುರಿತು ಏಳುವ ಈ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು -ಈ ಲೇಖನ ಸರಣಿಯ ಉದ್ದೇಶ. ಈ ಸರಣಿಯ ಭಾಗ-1ರಲ್ಲಿ ಮೊದಲ 3 ಪ್ರಶ್ನೆಗಳನ್ನು ಉತ್ತರಿಸಸಲಾಗಿದೆ. ಈ ಭಾಗ-2ರಲ್ಲಿ ಮುಂದಿನ 3 ಪ್ರಶ್ನೆಗಳಿಗೆ ಉತ್ತರ ಕೊಡಲಾಗಿದೆ. ಫ್ಯಾಸಿಸಂ
4. ಫ್ಯಾಸಿಸಂ ಹುಟ್ಟು ಹೇಗಾಯಿತು ಮತ್ತು ಅದನ್ನು ಮೊದಲಿನಿಂದಲೂ ವಿರೋಧಿಸಿದ ರಾಜಕೀಯ ಶಕ್ತಿಗಳು ಯಾವುವು?
ಫ್ಯಾಸಿಸಂ ಹುಟ್ಟಿದ ಜರ್ಮನಿ, ಇಟಲಿ, ಸ್ಪೈನ್ ಗಳಲ್ಲಿ ಎರಡನೇ ಮಹಾಯುದ್ಧದ ಮೊದಲೇ ಅದರ ವಿರುದ್ಧ ಹೋರಾಟ ಆರಂಭವಾಗಿತ್ತು. ಈ ಹೋರಾಟವನ್ನು ಈ ದೇಶಗಳಲ್ಲಿ ಪ್ರಮುಖ ರಾಜಕೀಯ ಶಕ್ತಿಗಳಾಗಿದ್ದ ಸೋಶಲಿಸ್ಟ್, ಕಮ್ಯುನಿಸ್ಟ್ ಮತ್ತು ಇತರ ಎಡ ಶಕ್ತಿಗಳು ನಡೆಸಿದ್ದವು. ಫ್ಯಾಸಿಸಂ ಅಧಿಕಾರಕ್ಕೆ ಬರುವ ಮೊದಲೇ ಫ್ಯಾಸಿಸ್ಟ್ ಶಕ್ತಿಗಳೊಂದಿಗೆ ಇವು ಬೀದಿ ಕಾಳಗದಲ್ಲಿ ತೊಡಗಿದ್ದವು. ಫ್ಯಾಸಿಸ್ಟ್ ಪಕ್ಷಗಳು ಇಟಲಿಯಲ್ಲಿ 1922ರಲ್ಲಿ, ಜರ್ಮನಿಯಲ್ಲಿ 1933ರಲ್ಲಿ, ಸ್ಪೈನಿನಲ್ಲಿ 1938ರಲ್ಲಿ ಅಧಿಕಾರಕ್ಕೆ ಬಂದವು.
ಸ್ಪೈನಿನ ಅಂತರ್ಯುದ್ಧದಲ್ಲಿ ಫ್ಯಾಸಿಸ್ಟರಿಂದ ಹತರಾದ ಜನಪ್ರಿಯ ರಂಗದ ಹೋರಾಟಗಾರರು
ಸ್ಪೈನಿನಲ್ಲಿ ಪ್ರಜಾಪ್ರಭುತ್ವವಾದಿಗಳು, ಕಮ್ಯುನಿಸ್ಟ್, ಸೋಶಲಿಸ್ಟ್ ಮತ್ತಿತರ ಪ್ರಗತಿಪರ ಶಕ್ತಿಗಳ ಬೆಂಬಲದಿಂದ 1936ರಲ್ಲಿ ಅಧಿಕಾರಕ್ಕೆ ಬಂದ ‘ಜನಪ್ರಿಯ ರಂಗ’ ದ ವಿರುದ್ಧ ಫ್ಯಾಸಿಸ್ಟರು ಅಂತರ್ಯುದ್ಧದಲ್ಲಿ ತೊಡಗಿದ್ದರು. ಜಗತ್ತಿನ ಹಲವು ಪ್ರಜಾಪ್ರಭುತ್ವವಾದಿಗಳು, ಸೋಶಲಿಸ್ಟರು, ಕಮ್ಯುನಿಸ್ಟರು ಈ ಅಂತರ್ಯುದ್ಧದಲ್ಲಿ ಭಾಗವಹಿಸಿದ್ದರು. ಜರ್ಮನಿ, ಇಟಲಿ, ಸ್ಪೈನ್ ಗಳಲ್ಲಿ ಪ್ರಬಲವಾಗಿ ಬೆಳೆಯುತ್ತಿದ್ದು ಪ್ರಮುಖ ರಾಜಕೀಯ ಶಕ್ತಿಗಳಾದ ಕಮ್ಯುನಿಸ್ಟರ, ಸೋಶಲಿಸ್ಟರು, ಪ್ರಜಾಪ್ರಭುತ್ವವಾದಿಗಳ ಜನಬೆಂಬಲ, ಬಲಕ್ಕೆ ಬೆದರಿ, ಅಲ್ಲಿನ ಬಂಡವಾಳಶಾಹಿ ಆಳುವ ವರ್ಗಗಳು ಫ್ಯಾಸಿಸ್ಟ್ ಶಕ್ತಿಗಳ ಮೊರೆ ಹೊಕ್ಕವು. ಪ್ರಬಲ ಯುರೋಪಿಯನ್ ಶಕ್ತಿ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್ ನ ಆಳುವ ವರ್ಗಗಳು ಇದೇ ಕಾರಣಕ್ಕಾಗಿ ಫ್ಯಾಸಿಸಂ ವಿರುದ್ಧದ ಹೋರಾಟಗಳಿಗೆ ಬೆಂಬಲ ಕೊಡಲಿಲ್ಲ. ಉದಾಹರಣೆಗೆ ಸ್ಮೈನಿನ ಅಂತರ್ಯುದ್ಧದಲ್ಲಿ ಜರ್ಮನಿ, ಇಟಲಿ ಅಲ್ಲಿನ ಫ್ಯಾಸಿಸ್ಟರಿಗೆ ಮಿಲಿಟರಿ ಬೆಂಬಲ ಕೊಟ್ಟರೆ, “ಜನಪ್ರಿಯ ರಂಗ”ಕ್ಕೆ ಸಹಾಯಾರ್ಥವಾಗಿ ಬ್ರಿಟನ್, ಫ್ರಾನ್ಸ್ ತಮ್ಮ ಕಿರು ಬೆರಳನ್ನು ಎತ್ತಿಲ್ಲ.
ಜರ್ಮನ್ ಪಾರ್ಲಿಮೆಂಟ್ ಭವನ ರೈಸ್ ತಾಗ್ ನಲ್ಲಿ ಬೆಂಕಿ
ಪ್ರಜಾಪ್ರಭುತ್ವದ ವೈಫಲ್ಯವೇ ಸಮಸ್ಯೆಗಳಿಗೆ ಮೂಲವೆಂಬ ತಿಳುವಳಿಕೆ, ವರ್ಗ ತಿಕ್ಕಾಟಗಳನ್ನು ಅಡಗಿಸುವ ಉಗ್ರ ರಾಷ್ಟ್ರೀಯವಾದ, ಪ್ರಬಲ ಸೂಪರ್ ಮ್ಯಾನ್ ನಾಯಕನ ಸರ್ವಾಧಿಕಾರವೇ ಇದಕ್ಕೆ ಪರಿಹಾರ, ಸರ್ವಾಧಿಕಾರಿಯ ಬಂಟರಾದ ಬಂಡವಾಳಶಾಹಿ ಗುಂಪಿನ ಆರ್ಥಿಕ ಪ್ರಾಬಲ್ಯ, ಎಲ್ಲ ರಾಜಕೀಯ ವಿರೋಧಿಗಳ ಅದರಲ್ಲೂ ವಿಶೇಷವಾಗಿ ಸೋಶಲಿಸ್ಟರ, ಕಮ್ಯುನಿಸ್ಟರ ದ್ವೇಷ/ಹಿಂಸಾತ್ಮಕ ದಮನ, ರಾಷ್ಟ್ರದ ಗಡಿಗಳನ್ನು ವಿಸ್ತರಿಸಿ ಭೂತಕಾಲದ (ಉದಾ: ಇಟಲಿಯಲ್ಲಿ ಪ್ರಾಚೀನ ರೋಮ್) ಸಾಮ್ರಾಜ್ಯ ಮತ್ತೆ ಕಟ್ಟುವ ಹುಸಿ ಕನಸು, ಬಹುಸಂಖ್ಯಾತ (ಉದಾ: ಜರ್ಮನಿಯಲ್ಲಿ ಶುದ್ಧ ಆರ್ಯನ್) ಜನಾಂಗದ ಶ್ರೇಷ್ಟತೆ, ನಿರ್ದಿಷ್ಟ ಅಲ್ಪಸಂಖ್ಯಾತ ಜನಾಂಗ/ಧರ್ಮ/ಗುಂಪುಗಳೇ (ಉದಾ: ಜರ್ಮನಿಯಲ್ಲಿ ಜ್ಯೂ) ಹಲವು ಸಮಸ್ಯೆಗಳಿಗೆ ಮೂಲವಾದ್ದರಿಂದ ಅವರ ದ್ವೇಷ/ಹಿಂಸಾತ್ಮಕ ದಮನ – ಇವು ಫ್ಯಾಸಿಸಂ ನ ಸಾಮಾನ್ಯ ಗುಣಲಕ್ಷಣಗಳಾಗಿದ್ದವು. ಮೊದಲ ಮಹಾಯುದ್ಧದ ನಂತರ ಬ್ರಿಟನ್, ಫ್ರಾನ್ಸ್ ಮುಂತಾದ ಪ್ರಬಲ ರಾಷ್ಟ್ರಗಳು ಹೊರಿಸಿದ ಒಪ್ಪಂದಗಳ ರಾಷ್ಟ್ರೀಯವಾಗಿ ಅವಮಾನಕಾರಿ ಶರತ್ತುಗಳು, 1920ರ ದಶಕದ ಉತ್ತರಾರ್ಧ ಮತ್ತು 1930ರ ದಶಕದ ಆರಂಭದಲ್ಲಿ ಜಾಗತಿಕ ಮಹಾ ಬಿಕ್ಕಟ್ಟು – ಇವು ಜನಸಾಮಾನ್ಯರಿಗೆ ಉಂಟು ಮಾಡಿದ ಅಸಹನೀಯ ಜೀವನ ಪರಿಸ್ಥಿತಿ, ಇವುಗಳ ಪರಿಹಾರ ಮಾಡುವಲ್ಲಿ ಆಗಿನ ಸರಕಾರಗಳ ವೈಫಲ್ಯಗಳಿಂದ ಹತಾಶ ಜನತೆಯ ಕೆಲವು ವಿಭಾಗಗಳಲ್ಲಿ ಫ್ಯಾಸಿಸಂ ಗೆ ಬೆಂಬಲ ದೊರಕಿತು.
ನಾಜಿ ಪಡೆಗಳಿಂದ ಕಮ್ಯುನಿಸ್ಟರ ಸಾಮೂಹಿಕ ಬಂಧನ
ಇದನ್ನೂ ಓದಿ : ವಿಮೋಚನೆಗೆ 50 ವರ್ಷ : ಹಮಾರಾ ನಾಮ್, ತುಮಾರಾ ನಾಮ್, ವಿಯೇಟ್ನಾಂ ವಿಯೇಟ್ನಾಂ !
5. ಎರಡನೇ ಮಹಾಯುದ್ಧದ ಐದು ಹಂತಗಳು ಯಾವುವು ?
ಎರಡನೇ ಮಹಾಯುದ್ಧ ಎರಡು ಫ್ಯಾಸಿಸ್ಟ್ ಅಥವಾ ಅಕ್ಷ (ಆಕ್ಸಿಸ್) ಕೂಟ ಮತ್ತು ಫ್ಯಾಸಿಸ್ಟ್-ವಿರೋಧಿ ಅಥವಾ ಮಿತ್ರಕೂಟಗಳ ನಡುವೆ ನಡೆಯಿತು. ಈ ಕೂಟ ಮಹಾಯುದ್ಧ ಆರಂಭವಾಗುವಾಗ ಇರಲಿಲ್ಲ. ಫ್ಯಾಸಿಸ್ಟ್ ಅಥವಾ ಅಕ್ಷ (ಆಕ್ಸಿಸ್) ಕೂಟದಲ್ಲಿ ಪ್ರಮುಖವಾಗಿ ಜರ್ಮನಿ, ಇಟಲಿ, ಜಪಾನ್ ಹಾಗೂ ಫ್ಯಾಸಿಸ್ಟ್-ವಿರೋಧಿ ಅಥವಾ ಮಿತ್ರಕೂಟದಲ್ಲಿ ಪ್ರಮುಖವಾಗಿ ಬ್ರಿಟನ್, ಫ್ರಾನ್ಸ್, ಅಮೆರಿಕ, ಕೆನಡಾ, ಬೆಲ್ಜಿಯಂ, ಹಾಲೆಂಡ್ ಮತ್ತು ಹೆಚ್ಚಿನ ಪಶ್ಚಿಮ ಯುರೋಪಿನ ದೇಶಗಳು, ಅವುಗಳ ವಸಾಹತುಗಳು ಇದ್ದವು.
ಎರಡನೇ ಮಹಾಯುದ್ಧವನ್ನು ಐದು ಹಂತಗಳಾಗಿ ವಿಂಗಡಿಸಲಾಗುತ್ತದೆ. 1. ಹುಸಿ ಯುದ್ಧ (ಸೆಪ್ಟೆಂಬರ್ 1939- ಏಪ್ರಿಲ್ 1940), 2.ಮಿಂಚಿನ ದಾಳಿ (ಏಪ್ರಿಲ್ 1940- ಜೂನ್ 1940), 3.ಬ್ರಿಟಿಶ್ ಸಾಮ್ರಾಜ್ಯದ ಮೇಲೆ ದಾಳಿ (ಜುಲೈ 1940-ಜೂನ್ 1941), 4.ಸೋವಿಯೆಟ್ ಮೇಲೆ ದಾಳಿ, ತೀಕ್ಷ್ಣ ಪ್ರತಿರೋಧ ಮತ್ತು ನಾಜಿ ಹಿನ್ನಡೆ (1941 –1943), 5.ಫ್ಯಾಸಿಸ್ಟ್ ಕೂಟದ ಪತನ (1944-45). ಈ ಐದು ಹಂತಗಳಲ್ಲಿ ವಿವಿಧ ಫ್ಯಾಸಿಸ್ಟ್-ವಿರೋಧಿ ಶಕ್ತಿಗಳ ಪಾತ್ರ ವಿಭಿನ್ನವಾಗಿತ್ತು. ಹಿಟ್ಲರ್ ಯುದ್ಧ ಆರಂಭಿಸಿ ಪೋಲೆಂಡನ್ನು ಕ್ಷಿಪ್ರಗತಿಯಲ್ಲಿ ವಶಪಡಿಸಿಕೊಂಡ. ಬ್ರಿಟನ್, ಫ್ರಾನ್ಸ್ ಗಳು ಜರ್ಮನಿಯ ಮೇಲೆ ಯುದ್ಧ ಸಾರಿದವು. ಆದರೆ ಈ ಮೊದಲ ಹಂತದಲ್ಲಿ ಮುಂಬರುವ ಯುದ್ಧಕ್ಕೆ ತಯಾರಿ, ಎದುರಾಳಿಗಳ ವಿರುದ್ಧ ಪ್ರಚಾರ ಬಿಟ್ಟರೆ ಮಿಲಿಟರಿ ನಡೆಗಳಿರಲಿಲ್ಲ. ಹಾಗಾಗಿಯೇ ಇದನ್ನು ‘ಹುಸಿಯುದ್ಧ’ದ ಹಂತವೆಂದು ಕರೆಯಲಾಗುತ್ತದೆ.
ಮಿಂಚಿನ ದಾಳಿ (ಬ್ಲಿಟ್ಝ್ ಕ್ರಿಗ್) 1940
ಎರಡನೇ ಹಂತದಲ್ಲಿ ನಾಜಿಗಳು ಪಶ್ಚಿಮದತ್ತ ‘ಮಿಂಚಿನ ದಾಳಿ’ ನಡೆಸಿ ಹೆಚ್ಚಿನ ಮಿಲಿಟರಿ ಪ್ರತಿರೋಧವಿಲ್ಲದೆ ಎರಡೇ ತಿಂಗಳಲ್ಲಿ ಫ್ರಾನ್ಸ್, ಹಾಲಂಡ್, ಬೆಲ್ಜಿಯಂ, ಡೆನ್ಮಾರ್ಕ್, ನಾರ್ವೇ ವಶಪಡಿಸಿಕೊಂಡರು. ಇಟಲಿ ನಾಜಿ (ಅಕ್ಷ) ಕೂಟದ ಭಾಗವಾಗಿ ಯುದ್ಧ ಪ್ರವೇಶಿಸಿತು. ಮೂರನೇ ಹಂತದಲ್ಲಿ ಇಡೀ ಪಶ್ಚಿಮ ಯುರೋಪ್ ಫ್ಯಾಸಿಸ್ಟ್ ಬೂಟುಗಾಲಿನಡಿ ಇದ್ದು, ಈಗ ಒಂಟಿಯಾಗಿದ್ದ ಬ್ರಿಟನ್ ಮತ್ತು ಅದರ ಆಫ್ರಿಕನ್ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿತು. ಉತ್ತರ ಆಪ್ರಿಕಾದಿಂದ ಬ್ರಿಟಿಷ್ ಪಡೆಗಳನ್ನು ಹೊರದಬ್ಬಿತು. ಬ್ರಿಟಿಷ್ ಸೇನಾಪಡೆಗಳು 76 ದಿನಗಳ ಕಾಲ ಲಂಡನಿನ ಮತ್ತು ಇತರ ಕೆಲವು ನಗರಗಳ ಸತತ ಜರ್ಮನ್ ವಾಯುದಾಳಿಗೆ ಪ್ರತಿರೋಧವೊಡ್ಡಿದವು. ಆದರೆ ಶೀಘ್ರವೇ ಬ್ರಿಟನಿನ ಹಣ ಮತ್ತು ಶಸ್ತ್ರಾಸ್ತ್ರಗಳು ಖಾಲಿಯಾಗಿ ಅದು ಅಮೆರಿಕದಿಂದ ಹಣ ಮತ್ತು ಶಸ್ತ್ರಾಸ್ತ್ರಗಳ (ಯುದ್ಧದ ನಂತರ ಮರಳಿಸಬೇಕಾದ) ಸಾಲ ಮಾಡಬೇಕಾಯಿತು. ಇದೇ ಯುದ್ಧಾನಂತರದ ಬ್ರಿಟನಿನ ಅವನತಿಗೂ, ಅಮೆರಿಕದ ಉತ್ಕರ್ಷಕ್ಕೂ ಕಾರಣವಾಯಿತು.
ಆಪರೇಶನ್ ಬಾರ್ಬರೋಸಾ
ಮೂರನೇ ಹಂತದಲ್ಲಿ ಜೂನ್ 1941ರಲ್ಲಿ ಹಿಟ್ಲರ್ ಸೋವಿಯೆಟ್ ಒಕ್ಕೂಟದತ್ತ ಕಣ್ಣು ಹಾಯಿಸಿ ‘ಆಪರೇಶನ್ ಬಾರ್ಬರೋಸಾ’ ಹೆಸರಿನ ಭಾರೀ ದಾಳಿಯನ್ನು ಆರಂಭಿಸಿದ. ಆರಂಭದ ತೀವ್ರ ಮುನ್ನಡೆಯ ನಂತರ ಸ್ಟಾಲಿನ್ ಗ್ರಾಡಿನಲ್ಲಿ ನಾಜೀ ಪಡೆಗಳು ತೀಕ್ಷ್ಣ ಪ್ರತಿರೋಧ ಎದುರಿಸಿದವು. ಅಗಸ್ಟ್ 1942ರಿಂದ ಸ್ಟಾಲಿನ್ ಗ್ರಾಡ್ (ವೊಲ್ಗೊಗ್ರಾಡ್) ನ ಜನತೆ ಮತ್ತು ಸೋವಿಯೆಟ್ ಪಡೆಗಳು ಹೋರಾಡಿ ಫೆಬ್ರುವರಿ 1943ರ ವರೆಗೆ ಜರ್ಮನ್ ಮುನ್ನಡೆ ತಡೆದು ಹಿಮ್ಮೆಟ್ಟಿಸಿದವು. ಇದು ಎರಡನೇ ಮಹಾಯುದ್ಧದ ದಿಕ್ಕನ್ನೇ ಬದಲಿಸಿದ ಸಮರವಾಗಿತ್ತು. ಅದೇ ರೀತಿ ಸೆಪ್ಟೆಂಬರ್ 1941ರಿಂದ ಸುಮಾರು 30ಕ್ಕೂ ಹೆಚ್ಚು ತಿಂಗಳ ದೀರ್ಘ ಕಾಲ ನಾಜಿ ದಿಗ್ಬಂಧನ ಎದುರಿಸಿದ ಲೆನಿನ್ ಗ್ರಾಡ್ (ಸೈಂಟ್ ಪೀಟರ್ಸ್ ಬರ್ಗ್) ನ ಜನತೆ ಮತ್ತು ಸೋವಿಯೆಟ್ ಪಡೆಗಳು ಅವುಡುಗಚ್ಚಿ ಹೋರಾಡಿ ಜನವರಿ 1944ರಲ್ಲಿ ನಾಜಿ ಪಡೆಗಳನ್ನು ಹಿಮ್ಮೆಟ್ಟಿಸಿದವು.
ಫೆಬ್ರುವರಿ 1943ರಲ್ಲಿ ಸ್ಟಾಲಿನ್ ಗ್ರಾಡ್ ನಲ್ಲಿ ನಾಜಿ ಸೋಲಿನ ನಂತರ, ಫ್ಯಾಸಿಸ್ಟ್ ಕೂಟದ ಪತನದ ಅಂತಿಮ ಹಂತ ಆರಂಭವಾಗುತ್ತದೆ. ಕುರ್ಸ್ಕ್ ನಿಂದ ಆರಂಭಿಸಿ ಸೋವಿಯೆಟ್ ಪಡೆಗಳು ಹಿಮ್ಮೆಟ್ಟುತ್ತಿದ್ದ ಜರ್ಮನ್ ಪಡೆಗಳನ್ನು ಅಟ್ಟಿಸುತ್ತಾ ಹಿಂಬಾಲಿಸಿದವು. ಜರ್ಮನಿ ವಶಪಪಡಿಸಿಕೊಂಡಿದ್ದ ಪೂರ್ವ ಯುರೋಪಿನ ದೇಶಗಳನ್ನು ವಿಮೋಚನೆ ಮಾಡಿ ಅಲ್ಲಿನ ರಾಷ್ಟ್ರೀಯ ವಿಮೋಚನಾ ಸೈನ್ಯದ ನಾಯಕತ್ವ ವಹಿಸಿದ್ದ (ಹೆಚ್ಚಾಗಿ ಕಮ್ಯುನಿಸ್ಟ್) ರಾಜಕೀಯ ಶಕ್ತಿಗಳಿಗೆ ಹಸ್ತಾಂತರ ಮಾಡಿದವು. ನವೆಂಬರ್ 1944ರಲ್ಲಿ ಜರ್ಮನ್ ಪೂರ್ವ ಭಾಗ ತಲುಪಿ ಅದನ್ನು ವಶಪಡಿಸಿಕೊಂಡು ಎಪ್ರಿಲ್ 1945ರಲ್ಲಿ ಬರ್ಲಿನ್ ಹತ್ತಿರ ಬರುತ್ತಿದ್ದಂತೆ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ.
ಸ್ಟಾಲಿನ್ ಗ್ರಾಡ್ ಸಮರ
ಇತ್ತ ಜಪಾನ್ ಪಲ್ ಹಾರ್ಬರ್ ಮೇಲೆ ಬಾಂಬ್ ದಾಳಿ ಮಾಡಿದ ನಂತರ ಅಮೆರಿಕ ಮಹಾಯುದ್ಧ ಪ್ರವೇಶಿಸುತ್ತದೆ. ಈ ನಡುವೆ ಜನವರಿ 1942ರಲ್ಲಿ ಫ್ಯಾಸಿಸ್ಟ್ ಕೂಟವನ್ನು ಸೋಲಿಸಲು ನಾಲ್ಕು ಶಕ್ತಿ ರಾಷ್ಟ್ರಗಳ ಕೂಟ ಜಂಟಿಯಾಗಿ ಹೋರಾಡಿ ಎಲ್ಲ ರಂಗಗಳಲ್ಲಿ ನಾಜಿ ಪಡೆ ಶರಣಾಗತಿ ಆಗುವವರೆಗೆ ಪ್ರತ್ಯೇಕ ಕದನ ನಿಲುಗಡೆ ಅಥವಾ ಶಾಂತಿ ಒಪ್ಪಂದ ಮಾಡಿಕೊಳ್ಳಬಾರದು ಎಂಬ ‘ಅಟ್ಲಾಂಟಿಕ್ ಚಾರ್ಟರ್’ ಗೆ ಸಹಿ ಹಾಕಿದವು. ಅಮೆರಿಕನ್ ಪಡೆಗಳು ಉತ್ತರ ಆಫ್ರಿಕಾದ ಮೊರೊಕ್ಕೊ ಅಲ್ಜೀರಿಯಾ ಗಳ ಆಕ್ರಮಣ ಮಾಡಿದವು. ಮಿತ್ರಕೂಟದ ಪಡೆಗಳು ಜುಲೈ 1943ರಲ್ಲಿ ಇಟಲಿಯ ಮೇಲೆ ಆಕ್ರಮಣ ಮಾಡಿ, ಗೆರಿಲ್ಲಾಗಳ ಜತೆ ಸೇರಿ ಮುಸೊಲಿನಿ ಸರಕಾರ ಉರುಳಿಸಿ ಅವನನ್ನು ಬಂಧಿಸಲಾಗುತ್ತದೆ. ಆದರೆ ಜರ್ಮನ್ ಪಡೆಗಳು ಇಟಲಿಯನ್ನು ಮತ್ತೆ ವಶಪಡಿಸಿಕೊಂಡು ಮುಸೊಲಿನಿಯನ್ನು ಬಿಡುಗಡೆ ಮಾಡುತ್ತವೆ. ರಾಷ್ಟ್ರೀಯ ಪ್ರತಿರೋಧದ ಪಡೆಗಳು ಹೋರಾಟದಲ್ಲಿ ತೊಡಗಿದ್ದಂತೆ ಇಟಲಿ ಜರ್ಮನ್ ಪಡೆಗಳ ನಿಯಂತ್ರಣದಲ್ಲಿದ್ದು, ಎಪ್ರಿಲ್ 26, 1945ರಲ್ಲಷ್ಟೇ ಪೂರ್ಣವಾಗಿ ವಿಮೋಚನೆ ಹೊಂದುತ್ತದೆ.
ಜೂನ್ 1944ರಲ್ಲಿ ಅಮೆರಿಕ, ಬ್ರಿಟಿಶ್, ಕೆನಡಾ ಮುಂತಾದ ಮಿತ್ರಕೂಟದ ಪಡೆಗಳು ಫ್ರಾನ್ಸಿನ ಅಟ್ಲಾಂಟಿಕ್ ಕರಾವಳಿಯ ನಾರ್ಮಂಡಿ ಎಂಬ ಪಟ್ಟಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗುಟ್ಟಾಗಿ ಇಳಿಯುತ್ತವೆ. ಬ್ರಿಟಿಷ್-ಅಮೆರಿಕನ್ ಪಡೆಗಳು ಪಶ್ಚಿಮ ಯುರೋಪಿನ ದೇಶಗಳನ್ನು ಜರ್ಮನ್ ವಶದಿಂದ ವಿಮೋಚನೆ ಮಾಡುವ ಕೆಲಸ ಆರಂಭಿಸುತ್ತವೆ. ಅಗಸ್ಟ್ 25, 1944ರಂದು ಪ್ಯಾರೀಸ್ ನ ವಿಮೋಚನೆಯಾಗುತ್ತದೆ. ಬೆಲ್ಜಿಯಂ ಫೆಬ್ರುವರಿ 1945ರಲ್ಲಿ ಮತ್ತು ಹಾಲಂಡ್ ಎಪ್ರಿಲ್ 1945ರಲ್ಲಿ ವಿಮೋಚನೆ ಹೊಂದುತ್ತವೆ. ಏಪ್ರಿಲ್ ನಲ್ಲಿ ಪಶ್ಚಿಮದಿಂದ ಮಿತ್ರಕೂಟದ ಪಡೆಗಳು ಮತ್ತು ಪೂರ್ವದಿಂದ ಸೋವಿಯೆಟ್ ಕೆಂಪು ಸೈನ್ಯ ಜರ್ಮನಿಯನ್ನು ಪೂರ್ಣವಾಗಿ ವಶಪಡಿಸಿಕೊಂಡು ಮೇ9 ರಂದು ಜರ್ಮನಿ ಶರಣಾಗತವಾಗುತ್ತದೆ.
ಜಪಾನ್ ಮತ್ತು ಚೀನಾ 1937ರಿಂದಲೇ ಯುದ್ಧದಲ್ಲಿ ತೊಡಗಿದ್ದು, 1941ರಿಂದ ಇದು ಎರಡನೇ ಮಹಾಯುದ್ಧದ ಭಾಗವಾಗುತ್ತದೆ. ಜಪಾನ್ ಫ್ಯಾಸಿಸ್ಟ್ ಅಕ್ಷ ಕೂಟದ ಮತ್ತು ಚೀನಾ ಫ್ಯಾಸಿಸ್ಟ್-ವಿರೋಧಿ ಮಿತ್ರಕೂಟದ ಭಾಗವಾಗುತ್ತದೆ. 1941ರಿಂದ ಆರಂಭಿಸಿ ಫ್ರೆಂಚ್ ಇಂಡೋ-ಚೀನಾ, ಫಿಲಿಪ್ಪೀನ್ಸ್, ಇಂಡೋನೇಶ್ಯಾಗಳನ್ನು ಜಪಾನ್ ವಶಪಡಿಸಿಕೊಳ್ಳುತ್ತದೆ. 1942ರಿಂದ ಅಮೆರಿಕ ಮತ್ತು ಮಿತ್ರಕೂಟದ ಜಂಟಿ ಪಡೆಗಳು ಒಂದೊಂದಾಗಿ ಈ ದೇಶಗಳನ್ನು ಜಪಾನ್ ವಶದಿಂದ ಬಿಡುಗಡೆ ಮಾಡುತ್ತವೆ. ಯು.ಎಸ್ ಜಪಾನಿನ ಮೇಲೆ ಸಹ ಎಪ್ರಿಲ್ 1945ರಲ್ಲಿ ಆಕ್ರಮಣ ಮಾಡುತ್ತದೆ. ಅಗಸ್ಟ್ ನಲ್ಲಿ ಸೋವಿಯೆಟ್ ಪಡೆಗಳು ಸಹ ಜಪಾನ್ ವಿರುದ್ಧ ಯುದ್ಧದಲ್ಲಿ ಸೇರುತ್ತವೆ. ಜಪಾನ್ ಪಡೆಗಳು ಇನ್ನೇನು ಪೂರ್ಣ ಸೋತು ಶರಣಾಗತರಾಗುತ್ತವೆ ಎನ್ನುವಷ್ಟರಲ್ಲೇ ಅಗಸ್ಟ್ 6 ಮತ್ತು 9ರಂದು ಹಿರೋಶಿಮಾ ನಾಗಾಸಾಕಿಗಳ ಮೇಲೆ ಅಮೆರಿಕ ಅಣು ಬಾಂಬ್ ದಾಳಿ ಮಾಡುತ್ತದೆ. ಅಗಸ್ಟ್ 15ರಂದು ಜಪಾನ್ ಶರಣಾಗತವಾಗುವುದರೊಂದಿಗೆ ಎರಡನೇ ಮಹಾಯುದ್ಧ ಏಶ್ಯಾದಲ್ಲೂ ಕೊನೆಗೊಳ್ಳುತ್ತದೆ.
6. ಫ್ಯಾಸಿಸಂ ವಿರುದ್ಧ ಸಮರ ಮತ್ತು ಅದರ ವಿಜಯದಲ್ಲಿ ಸೋವಿಯೆಟ್ ಸೈನ್ಯ, ಸರಕಾರ ಮತ್ತು ಜನತೆಯ ಪಾತ್ರವೇನಿತ್ತು?
ಎರಡನೇ ಮಹಾಯುದ್ಧದ ಈ ಐದು ಹಂತಗಳ ಸ್ಥೂಲ ನಿರೂಪಣೆ ಮತ್ತು ಹಿಂದೆ ವಿವಿಧ ದೇಶಗಳ ಸೈನಿಕರ ಮತ್ತು ನಾಗರೀಕರ ಸಾವು-ನೋವುಗಳ ಸಂಖ್ಯೆಯೇ ಈ ಯುದ್ಧದಲ್ಲಿ ತೊಡಗಿದ್ದ ಶಕ್ತಿಗಳ ಪಾತ್ರದ ಬಗ್ಗೆ ಭಾಗಶಃ ತಿಳಿಸುತ್ತವೆ. ಇವುಗಳಿಂದ ಸೋವಿಯೆಟ್ ಕೆಂಪು ಸೈನ್ಯ, ಸರಕಾರ ಮತ್ತು ಜನತೆಯ ಪಾತ್ರ ಅತಿ ದೊಡ್ಡದು ಎಂದು ತಿಳಿಯುತ್ತದೆ. ಈ ಭೀಕರ ಯುದ್ಧದಲ್ಲಿ ಸತ್ತ ಸೈನಿಕರಲ್ಲೂ ನಾಗರಿಕರಲ್ಲೂ ಹೆಚ್ಚು ಕಡಿಮೆ ಅರ್ಧದಷ್ಟು ಸೋವಿಯೆಟ್ ಪ್ರಜೆಗಳು. 1939ರ ಸೋವಿಯೆಟ್ ಜನಸಂಖ್ಯೆಯ 13% ರಷ್ಟು ಜನ ಯುದ್ಧಕ್ಕೆ ಬಲಿಯಾದರು. ಅದು ಮಾತ್ರವಲ್ಲ ಪ್ರಬಲ ಮಿಲಿಟರಿ ಶಕ್ತಿ ಫ್ರಾನ್ಸ್ ನಿಂದ ಆರಂಭಿಸಿ ಪಶ್ಚಿಮ ಯುರೋಪಿನ ಎಲ್ಲ ದೇಶಗಳು ಹೆಚ್ಚಿನ ಪ್ರತಿರೋಧ ತೋರದೆ ಸೋತವು.
ಹಿಟ್ಲರನ ಕಮ್ಯುನಿಸ್ಟ್-ದ್ವೇಷದಿಂದಾಗಿ ಸೋವಿಯೆಟ್ ಒಕ್ಕೂಟದ ಮೇಲೆ ಮೊದಲು ಆಕ್ರಮಣ ಮಾಡಬಹುದು ಎಂಬ ಅಂದಾಜಿನಿಂದ ಅವರು ಅಗತ್ಯ ತಯಾರಿ ನಡೆಸಿರಲಿಲ್ಲ. ಈ ದೇಶಗಳ ಆಳುವ ವರ್ಗಗಳಿಗೆ ಫ್ಯಾಸಿಸಂ ಬಗ್ಗೆ ತೀವ್ರ ವಿರೋಧವೂ ಇರಲಿಲ್ಲ. ನಾಜಿ ಜರ್ಮನಿಯನ್ನು ಸೋವಿಯೆಟ್ ಒಕ್ಕೂಟ ಮತ್ತು ಎಲ್ಲೆಡೆ ಕಮ್ಯುನಿಸ್ಟರನ್ನು ಮಟ್ಟ ಹಾಕಲು ಬಳಸಬಹುದು ಎಂಬುದೂ ಅವರ ನಿರೀಕ್ಷೆಯಾಗಿತ್ತು. ಇದು ಹಿಟ್ಲರನನ್ನು ಸೋವಿಯೆಟ್ ಒಕ್ಕೂಟದ ಮೇಲೆ ಪೂರ್ಣ ಬಲದಿಂದ ಆಕ್ರಮಣ ಮಾಡಲು ಹುರಿದುಂಬಿಸಿತು. 1941-43 ಅವಧಿಯಲ್ಲಿ ಸೋವಿಯೆಟ್ ಒಕ್ಕೂಟದ ತೀಕ್ಷ್ನ ಪ್ರತಿರೋಧವಿಲ್ಲದಿದ್ದರೆ ಹಿಟ್ಲರನ ಜಾಗತಿಕ ವಿಜಯದ ಕನಸು ನಿಜವಾಗುತ್ತಿತ್ತು. 1942ರಿಂದಲೇ ಪಶ್ಚಿಮದಿಂದ ಬ್ರಿಟಿಶ್-ಅಮೆರಿಕನ್ ಪಡೆಗಳು ಆಕ್ರಮಣ ಆರಂಭಿಸಬೇಕು ಎಂದು ಸೋವಿಯೆಟ್ ನಾಯಕತ್ವ ಕೇಳಿಕೊಂಡರೂ ಅದನ್ನು ಮಾಡಿರಲಿಲ್ಲ. ಸೋವಿಯೆಟ್ ಕೆಂಪು ಸೈನ್ಯ ಜರ್ಮನಿ ಪಡೆಗಳನ್ನು ಅಟ್ಟಿಸಿಕೊಂಡು ಬಂದು ಜರ್ಮನಿ ಮತ್ತು ಪಶ್ಚಿಮ ಯುರೋಪನ್ನು ವಿಮೋಚನೆ ಮಾಡುವುದು ಖಚಿತವಾಗುತ್ತಿದ್ದಂತೆ ಜೂನ್ 1944ರಲ್ಲಷ್ಟೇ ಮಿತ್ರಕೂಟ ಪಶ್ಚಿಮದಿಂದ ಗಂಭಿರ ದಾಳಿ ಆರಂಭಿಸಿತು.
ಇದನ್ನೂ ನೋಡಿ : ಆರೋಗ್ಯ ಹಕ್ಕು – ಸರಣಿ ಕಾರ್ಯಕ್ರಮ| ಅಲ್ಮಾ-ಅಟಾ ಘೋಷಣೆ ಏನು? ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ ಸಂಚಿಕೆ 03