ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನ ಪತ್ನಿ – ಸಹೋದರಿಯ ವಿಚಾರಣೆ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧಗಳಲ್ಲಿನ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಂಬಂಧ, ವಿಶೇಷ ತನಿಖಾ ತಂಡದವರು ಸಾಕ್ಷಿ ದೂರುದಾರನ ಪತ್ನಿ ಹಾಗೂ ಸಹೋದರಿಯನ್ನು ಅಕ್ಟೋಬರ್‌ 13ರಂದು ವಿಚಾರಣೆಗೆ ಒಳಪಡಿಸಿದ್ದಾರೆ.

‘ಸಾಕ್ಷಿ ದೂರುದಾರನ ಕುಟುಂಬಕ್ಕೆ ಹಣಕಾಸು ವರ್ಗಾವಣೆ ಆಗಿರುವ ಕುರಿತು ಮಾಹಿತಿ ಕಲೆ ಹಾಕಲು ಆತನ ಪತ್ನಿ, ಅಕ್ಕನನ್ನು ಎಸ್‌ಐಟಿ ಕಚೇರಿಗೆ ಕರೆಸಿ ವಿಚಾರಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಹಾಗೂ ಧರ್ಮಸ್ಥಳ ಹೊರ ಠಾಣೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಕೆಲ ಪೊಲೀಸ್‌ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಕೆಲ ಅಸಹಜ ಸಾವುಗಳ ಶವಗಳನ್ನು ವಿಲೇವಾರಿ ಮಾಡಿದಾಗ ಕರ್ತವ್ಯ ನಿರ್ವಹಿಸಿದ್ದವರಿಂದ ಮಾಹಿತಿ ಕಲೆ ಹಾಕಲಾಗಿದೆ’ ಎಂದು ತಿಳಿಸಿವೆ.

ಇದನ್ನೂ ಓದಿ: ಬೆಳೆ ಹಾನಿ: ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು – ರಾಜ್ಯ ರೈತ ಸಂಘ ಧರಣಿ

ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ ಎಸ್‌ಐಟಿ ಅಧಿಕಾರಿಗಳು ಸೋಮವಾರ ಭೇಟಿ ನೀಡಿದ್ದರು.

‘ಸಾಕ್ಷಿ ದೂರುದಾರ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿದ್ದಾಗ ಒಂದು ವಿಡಿಯೊ ಚಿತ್ರೀಕರಿಸಲಾಗಿತ್ತು. ಆ ವಿಡಿಯೊ ಚಿತ್ರೀಕರಿಸಿದ್ದು ಮಹೇಶ್‌ ಶೆಟ್ಟಿ ಅವರ ಮಗಳು. ಹಾಗಾಗಿ ಆಕೆಯ ಹೇಳಿಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಧರ್ಮಸ್ಥಳ ಗ್ರಾಮದಲ್ಲಿ ಹಿಂದೆ ನಡೆದಿದ್ದ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಮತ್ತು ಆತನ ಸೋದರಿ ಯಮುನಾ ಮತ್ತಿತರ ಕೊಲೆಗಳ ಮರು ತನಿಖೆಗೆ ಒತ್ತಾಯಿಸಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಮತ್ತು ಇತರರು ಈಚೆಗೆ ದೂರು ನೀಡಿದ್ದರು.

‘ಆ ದೂರಿನ ತನಿಖೆಯನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಕೈಗೆತ್ತಿಕೊಳ್ಳಲಾಗದು. ಈ ಬಗ್ಗೆ ದೂರುದಾರರಿಗೂ ತಿಳಿಸಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ಸ್ಪಷ್ಟಪಡಿಸಿವೆ.

‘ಐಐಎಸ್ಸಿ ತಜ್ಞರ ಸಹಾಯ ಯಾಚನೆ’

ಎಸ್‌ಐಟಿಯ ಒಂದು ತಂಡವು ಮೂಳೆಗಳ ಅವಶೇಷದ ಮೂಲ ಪತ್ತೆ ಕಾರ್ಯದಲ್ಲಿ ನಿರತವಾಗಿದೆ. ವಂಶವಾಹಿಗಳ ವಿಶ್ಲೇಷಣೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರನ್ನು ತಂಡವು ಸಂಪರ್ಕಿಸಿ ತನಿಖೆಗೆ ಸಹಾಯ ಯಾಚಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ನೋಡಿ: ವಾರದ ನೋಟ| ಸಿಜೆಐ ಗವಾಯಿಯವರ ಮೇಲೆ ದಾಳಿ ಹಿಂದಿನ ಸೂತ್ರಧಾರಿಗಳಾರು? ಶ್ರೀಪಾದ್‌ ಭಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *