ಸಿಂಧನೂರು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಜಾರಿಗೆ ತಂದಿದೆ. ‘ಹೋರಾಟ, ತ್ಯಾಗ-ಬಲಿದಾನದ ಮೂಲಕ ಪಡೆದ 29 ಕಾಯ್ದೆಗಳನ್ನು ಬದಲಿಸಿದೆ ಈ ಕಾಯ್ದೆಗಳನ್ನು ವಾಪಸ್ ಪಡೆಯಲು ಆಗ್ರಹಿಸಿ ಜೆಸಿಟಿಯು ಹಮ್ಮಿಕೊಂಡಿರುವ ರಾಷ್ಟ್ರವ್ಯಾಪ್ತಿ ಮುಷ್ಕರವನ್ನು ಯಶಸ್ವಿಗೊಳಿಸಬೇಕು’ ಎಂದ ಎಐಸಿಸಿಟಿಯುನ ಕ್ಲಿಫ್ಟನ್ ಡಿ.ರೊಜಾರಿಯೋ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು ಹಾಗೂ ಉದ್ಯೋಗ ಖಾತ್ರಿ ಯೋಜನೆ ತಿದ್ದುಪಡಿ ವಿರೋಧಿಸಿ ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರದ ಭಾಗವಾಗಿ ನಗರದ ಎಪಿಎಂಸಿ ರೈತ ಭವನದಲ್ಲಿ ಎಐಸಿಸಿಟಿಯು ಮತ್ತು ಆಯರ್ಲಾ ವತಿಯಿಂದ ಶನಿವಾರ ನಡೆದ ಜಿಲ್ಲಾಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು.
ಇದನ್ನೂ ಓದಿ : ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 25 ಐಟಿಎಂಎಸ್ ಕ್ಯಾಮರಾ ಆಳವಡಿಕೆ
ಕಾರ್ಮಿಕರು ತಮ್ಮ ವೇತನ, ಕೆಲಸದ ಪರಿಸ್ಥಿತಿ ಹಾಗೂ ಉದ್ಯೋಗ ಭದ್ರತೆಯನ್ನು ರಕ್ಷಿಸಿಕೊಳ್ಳಲು ಇರುವ ಮೂಲಭೂತ ಸಾಧನ ಮುಷ್ಕರದ ಹಕ್ಕಾಗಿದ್ದು, ಇದನ್ನು ಕಾರ್ಮಿಕ ಸಂಹಿತೆಯು ದುರ್ಬಲಗೊಳಿಸುತ್ತದೆ. ‘ಈ ಹಿಂದೆ ಇದ್ದ 8 ಗಂಟೆ ಕೆಲಸದ ಅವಧಿಯನ್ನು ಹೊಸ ಸಂಹಿತೆಗಳ ಮೂಲಕ 12 ಗಂಟೆಯವರೆಗೆ ವಿಸ್ತರಿಸಲಾಗಿದೆ. ಆ ಮೂಲಕ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತದೆ’ ಎಂದು ಆಪಾದಿಸಿದರು.
ಎಐಸಿಸಿಟಿಯು ರಾಜ್ಯ ಘಟಕದ ಸಹಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ,‘ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಫೆ.12ರಂದು ನಡೆಯುವ ರಾಷ್ಟ್ರೀಯ ಮುಷ್ಕರದಲ್ಲಿ ಭಾಗವಹಿಸಿ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.
ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಬಾಷುಮಿಯಾ, ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಎಂ.ಬಸವರಾಜ, ಎಐಸಿಸಿಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗೀರದಾರ, ಮುಖಂಡ ವಿಜಯ್ ದೊರೈರಾಜು, ಸಿಐಟಿಯು ಅಕ್ಬರ್‌ಪಾಷಾ, ಶ್ರಮಜೀವಿ ಹಮಾಲರ ಸಂಘದ ಮಾಬುಸಾಬ್ ಬೆಳ್ಳಟ್ಟಿ, ಕೃಷಿ ಕೂಲಿ ಕಾರ್ಮಿಕರಾದ ಯಲ್ಲಮ್ಮ ಅರಳಹಳ್ಳಿ, ಮಹಾದೇವಿ, ಆಯರ್ಲಾದ ಬಸವರಾಜ ಬೆಳಗುರ್ಕಿ, ಆರ್.ಎಚ್.ಕಲಮಂಗಿ, ಜಿಲ್ಲಾ ಪಂಚಾಯಿತಿ ನೌಕರರ ಸಂಘದ ಬಸವರಾಜ ಗಲಗಿನ್ ಉಪಸ್ಥಿತರಿದ್ದರು.
ಭಗತ್ ಸಿಂಗ್ ಆಟೊ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ನಿರೂಪಿಸಿದರು.
ರ‍್ಯಾಲಿ: ಸಮಾವೇಶಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಕೃಷಿ ಸೇರಿದಂತೆ ವಿವಿಧ ಕಾರ್ಮಿಕರ ರ‍್ಯಾಲಿಯು ಗಾಂಧಿ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ರಸ್ತೆ, ಬಾಬು ಜಗಜೀವನ್‌ರಾಂ ವೃತ್ತದ ಮೂಲಕ ಎಪಿಎಂಸಿಯ ರೈತ ಭವನದವರೆಗೆ ನಡೆಯಿತು.
ಇದನ್ನೂ ನೋಡಿ : “ರೈತ–ಕಾರ್ಮಿಕ–ಕೂಲಿಕಾರರ ಮುಷ್ಕರ | ಕೆಲಸ ಸ್ಥಗಿತ, ಬೀದಿಗಿಳಿಯಲಿದ್ದಾರೆ ದುಡಿಯುವ ಜನ” | Janashakthi Media
