ಜಪಾನ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಎತ್ತರ ಜಿಗಿತದ ಫೈನಲ್ ಅನ್ನು ಕ್ರೀಡಾಪಟು ಮನೋಭಾವದ ಮಾನವೀಯತೆಗೆ ಸಾಕ್ಷಿಯಾಗಿತ್ತು. ಫೈನಲ್‌ನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬೇರಿ ಮತ್ತು ಕತಾರ್‌ನ ಮುತಾಜ್ ಎಸ್ಸಾ ಬಾರ್ಶಿಮ್ ಮುಖಾಮುಖಿಯಾದರು.
ವಿಶೇಷವೆಂದರೆ, ಫೈನಲ್‌ನಲ್ಲಿ ಇಬ್ಬರೂ ಒಂದೇ ಮಟ್ಟದಲ್ಲಿ 2.37 ಮೀಟರ್ ಜಿಗಿದರು. ಅದೂ ಮೂರು ಅವಕಾಶ ಪಡೆದರೂ ಸಹ ಜಿಗಿತದ ಎತ್ತರ ಒಂದೇ ಸಮನಾಗಿತ್ತು. ಇಬ್ಬರೂ 2.37 ಮೀಟರ್‌ಗಿಂತ ಹೆಚ್ಚಿನದನ್ನು ತಲುಪಲು ಸಾಧ್ಯವಾಗಲಿಲ್ಲ. ನಂತರ, ಇಬ್ಬರಿಗೂ ತಲಾ ಒಂದೊಂದು ಅವಕಾಶವನ್ನು ನೀಡಲಾಯಿತು, ಆದರೆ ಕಾಲಿಗೆ ಗಾಯಗೊಂಡ ತಂಬೇರಿ ಕೊನೆಯ ಅವಕಾಶದಿಂದ ಹಿಂದೆ ಸರಿದರು.
ಇದನ್ನು ಓದಿ: ಟೋಕಿಯೋ ಒಲಿಂಪಿಕ್ಸ್ : ಪುರುಷರ ಹಾಕಿ – ಸೋತರೂ ಸಮಬಲ ಆಟ ಪ್ರದರ್ಶಿಸಿದ ಭಾರತ
ಇಟಾಲಿಯನ್ ಕ್ರೀಡಾಪಟುವಿನ ನಿರ್ಗಮನ ಆಗುತ್ತಿದ್ದಂತೆಯೇ ಬಾರ್ಶಿಮ್ ನಾನು ಸಹ ಹಿಂತೆಗೆದುಕೊಂಡರೆ ಏನಾಗುತ್ತದೆ ಎಂದು ಅಧಿಕಾರಿಯನ್ನು ಕೇಳಿದರು. ಹತ್ತಿರ ನಿಂತಿದ್ದ ಅಧಿಕಾರಿ ಮತ್ತು ಜಿಯಾನ್ ಮಾರ್ಕೊ ತಂಬೇರಿ ಒಂದು ಕ್ಷಣ ದಿಗ್ಭ್ರಮೆಗೊಂಡರು. ಅಧಿಕಾರಿಯು ನಿಯಮ ಪುಸ್ತಕವನ್ನು ಪರಿಶೀಲಿಸಿದ ಬಳಿಕ, ಹೀಗೆ ಆದಲ್ಲಿ ನಾವು ನಿಮ್ಮಿಬ್ಬರಿಗೂ ಚಿನ್ನವನ್ನು ನೀಡಬೇಕಾಗುತ್ತದೆ.
ಬಾರ್ಶಿಮ್ ಎದುರಾಳಿ ಇಲ್ಲದೆ ಚಿನ್ನದ ಹತ್ತಿರಕ್ಕೆ ಬಂದ ಕ್ಷಣ ಮತ್ತು ಭವಿಷ್ಯದ ಹಂಬಲ ಮತ್ತು ಉತ್ಸಾಹವನ್ನು ಪೂರೈಸಬಹುದಾದ ಕ್ಷಣ ಅದಾಗಿತ್ತು. ನಮ್ಮಿಬ್ಬರ ನಡುವೆ ಚಿನ್ನವನ್ನು ಹಂಚಬಹುದೇ ಎಂದು ಬಾರ್ಶಿಮ್ ಒಲಿಂಪಿಕ್ಸ್ ಅಧಿಕಾರಿಯನ್ನು ಕೇಳಿದರು.
ಬಾರ್ಶಿಮ್ ಅವರು ಚಿನ್ನವನ್ನು ಹಂಚಿಕೊಳ್ಳಬಹುದೆಂದು ಅಧಿಕೃತ ಉತ್ತರವನ್ನು ಸ್ವೀಕರಿಸಿದ ನಂತರ ತಾನು ಕೆಳಗಿಳಿಯುತ್ತಿದ್ದೇನೆ ಎಂದು ಘೋಷಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಅವರು ಒಲಂಪಿಕ್ ಚಿನ್ನ ಹಾಗೂ ಮಾನವೀಯ ಗುಣ ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳ ಹೃದಯ ಗೆದ್ದಿದೆ.
ನಂತರ ಇಡೀ ಜಗತ್ತಿಗೆ ಕಣ್ಣು ಕೋರೈಸುವ ದೃಶ್ಯ ನೋಡುವ ಸಂತಸ ಎದುರಾದವು. ತಂಬೇರಿ ಓಡಿ ಬಂದು ಬಾರ್ಶಿಮ್ ನನ್ನು ಅಪ್ಪಿಕೊಂಡು ಕಿರುಚುತ್ತಾನೆ. ಸುತ್ತಲೂ ಸಂತೋಷದ ಕಣ್ಣೀರು ಮಾತ್ರ. ಪುರುಷರ ಎತ್ತರ ಜಿಗಿತದ ಸಾಧನೆಯಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡು ಕತಾರ್ ಮತ್ತು ಇಟಲಿಯ ಧ್ವಜಗಳನ್ನು ಒಟ್ಟಿಗೆ ಹಾರಿಸಲಾಯಿತು. ಆಚರಣೆಯ ಶಬ್ದಗಳನ್ನು ಘೋಷಿಸಲಾಯಿತು. ಪ್ರೇಮದ ಮಹಾನ್ ಸಾಂಕೇತಿಕತೆಗೆ ಕ್ರೀಡಾ ಜಗತ್ತು ಸಾಕ್ಷಿಯಾಯಿತು. ಬಣ್ಣ, ಧರ್ಮ ಮತ್ತು ರಾಷ್ಟ್ರಗಳನ್ನು ಅಪ್ರಸ್ತುತಗೊಳಿಸುವ ಮಾನವೀಯತೆ…. ಇತ್ತ ಸೋತು ಗೆದ್ದ ತಂಬೇರಿ ಕುಣಿದು ಕುಪ್ಪಳಿಸಿದರು. ಅತ್ತ ಪದಕವನ್ನು ಹಂಚಿಕೊಂಡು ಬಾರ್ಶಿಮ್ ಇಡೀ ವಿಶ್ವದ ಅಭಿಮಾನಿಗಳನ್ನು ಗೆದ್ದರು.
ಜಗತ್ತನ್ನು ಸಂತೋಷದ ಕಣ್ಣೀರಿನ ಎತ್ತರಕ್ಕೆ ತಂದಿರುವ ಹಂಚಿಕೆಯ ಮಾನವ ಮುಖವಾಗಿ ಈ ಕ್ಷಣವನ್ನು ಕ್ರೀಡಾ ಜಗತ್ತು ಗುರುತಿಸುತ್ತದೆ. ಈ ವಿಜಯದ ಸಮಯದಲ್ಲಿ ಒಲಿಂಪಿಕ್ಸ್‌ಗೆ ಈ ದೃಶ್ಯವಲ್ಲದೆ ಇನ್ನೇನು ಕೊಡಬೇಕು?
ವರದಿ : ಜಗದೀಶ್ ಸೂರ್ಯ