ಬರ್ಮಿಂಗ್ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತೀಯ ಆಟಗಾರರ ಪದಕ ಬೇಟೆ ಮುಂದುವರೆದಿದೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಪಿ ವಿ ಸಿಂಧು ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.
ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಕೆನಡಾದ ಮಿಶೆಲ್ ಲಿ ಅವರನ್ನು 21-15, 21-13 ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಪಿ ವಿ ಸಿಂಧು ಚಿನ್ನದ ಪದಕ ತಮ್ಮದಾಗಿಸಿಕೊಂಡರು.
2014ರಲ್ಲಿ ಕಂಚಿನ ಪದಕ ಗೆದ್ದಿದ್ದ ಪಿವಿ ಸಿಂಧು 2018ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ 2022ರಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಭಾರತ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಈ ವರೆಗೆ 19 ಚಿನ್ನದ ಪದಕದೊಂದಿಗೆ, 15 ಬೆಳ್ಳಿ, 22 ಕಂಚಿನ ಪದಕ ಸೇರಿದಂತೆ ಒಟ್ಟು 56 ಪದಗಳನ್ನು ಗೆದ್ದಿದೆ. ಇದರೊಂದಿಗೆ ಪದಕದ ಗೆದ್ದ ದೇಶಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಒಟ್ಟು 176 ಪದಕಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 168 ಮತ್ತು ಕೆನಡಾ 92 ಪದಕ ಗೆಲ್ಲುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ.