ಟೋಕಿಯೊ: ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸತತ ಗೆಲುವಿನೊಂದಿಗೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯದ 56 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಆಟಗಾರ್ತಿ ಸಿಂಧು ರೋಚಕ ಗೆಲುವು ಸಾಧಿಸಿದ್ದಾರೆ.
ಜಪಾನ್ ದೇಶದ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಪಿ ವಿ ಸಿಂಧು ಜಪಾನ್ ನ 4ನೇ ಶ್ರೇಯಾಂಕದ ಆಟಗಾರ್ತಿ ಅಕಾನೆ ಯಮಗುಚಿಯವರನ್ನು 21-13 ಹಾಗೂ 22-20 ಅಂತರದಿಂದ ಮಣಿಸಿದ್ದಾರೆ.
ಇದನ್ನು ಓದಿ: ಒಲಿಂಪಿಕ್ಸ್: ಐರ್ಲೆಂಡ್ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಜಯ
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿಯಾಗಿ ಆಡಿದ ಪಿ ವಿ ಸಿಂಧು ಮೊದಲ ಸೆಟ್ ನ್ನು ಸುಲಭದಲ್ಲಿ ಜಯಿಸಿದರು. ಎರಡನೇ ಸೆಟ್ ನಲ್ಲಿ ಅಕಾನೆ ಯಮಾಗುಚಿ ಭಾರೀ ಸ್ಪರ್ಧೆ ಒಡ್ಡಿದರು. ಎರಡನೇ ಸೆಟ್ ನ್ನು ತೀವ್ರ ಸ್ಪರ್ಧೆಯನ್ನು ಒಡ್ಡಿ ಪಿ ವಿ ಸಿಂಧು ಗೆಲುವಿನ ನಗೆ ಬೀರಿದರು. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ.
ನಿನ್ನೆಯಷ್ಟೇ ಸಿಂಧು ಡೆನ್ಮಾರ್ಕ್ ನ ಮಿಯಾ ಬ್ಲಿಚ್ಫೆಲ್ಡ್ ರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. 4 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. ರಾಚನೋಕ್ ಇಂಟನಾನ್ ಮತ್ತು ತೈ ತ್ಸುಯಿಂಗ್ ನಡುವಿನ ಪಂದ್ಯದಲ್ಲಿ ವಿಜಯಿಯಾದವರ ಜೊತೆ ನಾಳೆ ಸಿಂಧು ಸೆಮಿಫೈನಲ್ ಆಡಲಿದ್ದಾರೆ.