ಜಗತ್ತಿನ ಅನೇಕ ದೇಶಗಳು ಅಮೆರಿಕದ ಬಂಡವಾಳಶಾಹಿ ಅಡಿಯಾಳಾಗಿ ಹಿಡಿತದಲ್ಲಿರುವ ಪ್ರಸಕ್ತ ಕಾಲಮಾನದಲ್ಲಿ ವಿಶ್ವದ ದೊಡ್ಡಣ್ಣನಂತೆ ವರ್ತಿಸುತ್ತಿರುವ ಅಮೆರಿಕ ದೇಶದ ವಿರುದ್ಧ ಸೆಟದು ನಿಂತ ದೇಶ ಕ್ಯೂಬಾ. ಲ್ಯಾಟಿನ್ ಅಮೆರಿಕದ ಪುಟ್ಟ ದ್ವೀಪ ರಾಷ್ಟ್ರ ಇದು. ಕ್ಯೂಬಾಕ್ಕೆ ಇಂತಹ ತಾಕತ್ತು ಬರಲು ಫಿಡೆಲ್ ಕ್ಯಾಸ್ಟ್ರೊ ಎಂಬ ಕ್ರಾಂತಿಕಾರಿ ನಾಯಕನೇ ಕಾರಣ.
ಕ್ಯೂಬಾದ ಬ್ರಿಯಾನ್ ಎಂಬ ಹಳ್ಳಿ ಇವರ ತವರೂರು. ಸ್ಪೇನ್‌ನಿಂದ ವಲಸೆ ಬಂದಿದ್ದ ತಂದೆ ಏಂಜೆಲ್ ಕ್ಯಾಸ್ಟ್ರೊ ಅವರ ಏಳು ಮಕ್ಕಳಲ್ಲಿ ಫಿಡಲ್ ಒಬ್ಬರು. ಸಿರಿವಂತ ರೈತ ಕುಟುಂಬ ಇವರದು. ಬಾಲ್ಯದಲ್ಲಿ ಅಪ್ಪನ ಜತೆ ಹೊಲದಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಜತೆಗೆ ಬೆರೆತು ಆಟವಾಡುತ್ತಲೇ ಅವರ ಕಷ್ಟ ಕಾರ್ಪಣ್ಯಗಳನ್ನು ಅರಿತರು.
ಫಿಡೆಲ್ ಕ್ಯಾಸ್ಟ್ರೋ ಸಾಂಟಿಯಾಗೊದ ಬೆಲೆನ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಹವಾನಾ ವಿವಿಯಲ್ಲಿ ಕಾನೂನು ಪದವಿ ಪಡೆದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ದೇಶದ ಕ್ರೂರ ರಾಜಕೀಯದಿಂದ ರೋಸಿ ಹೋದ ಕ್ಯಾಸ್ಟ್ರೊ ಅವರಿಗೆ ಮುಕ್ತಿಯ ಮಾರ್ಗ ಕಂಡಿದ್ದು ಎಡಪಂಥೀಯ ಚಿಂತನೆಗಳಲ್ಲಿ.
ಇದನ್ನು ಓದಿ: ಫಿಡೆಲ್ ಕ್ಯಾಸ್ಟ್ರೋ ಜನ್ಮದಿನ
ಎತ್ತರದ ನಿಲುವಿನ ಕ್ಯಾಸ್ಟ್ರೊ ಮೊದಲಿನಿಂದಲೂ ಮುಂಗೋಪಿ. ನಯ ನಾಜೂಕಂತೂ ಮೊದಲೇ ಗೊತ್ತಿಲ್ಲ. ಹೀಗೆಲ್ಲಾ ಸಹಪಾಠಿಗಳಿಂದ ಮೂದಲಿಕೆಗೆ ಒಳಗಾಗಿದ್ದ ಕ್ಯಾಸ್ಟ್ರೊ, ಮುಂದೆ ವಿದ್ಯಾರ್ಥಿ ನಾಯಕನಾಗಿ ಬೆಳೆದದ್ದು ಇತಿಹಾಸ. 1947ರಲ್ಲಿ ರಿಪಬ್ಲಿಕನ್ ಸರ್ವಾಧಿಕಾರಿ ರಾಫೆಲ್ ಲಿಯೊನಿಡಾಸ್ ಟ್ರುಜಿಲ್ಲೊರ ವಿರುದ್ಧ ಬಂಡಾಯದಲ್ಲಿ ಪಾಲ್ಗೊಂಡಿದ್ದರು. ತಮ್ಮ ಕಾನೂನು ಪದವಿ ಅಭ್ಯಾಸದ ಬಳಿಕ 1952ರಲ್ಲಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. ಆದರೆ ಆಡಳಿತಾರೂಢ ಬಟಿಸ್ಟಾ ಪಡೆ ಚುನಾವಣೆಯನ್ನೆ ರದ್ದು ಪಡಿಸಿದಾಗ ಫಿಡಲ್ ಸಶಸ್ತ್ರ ಪಡೆಯನ್ನು ಹುಟ್ಟು ಹಾಕಿ, ಯುದ್ದಕ್ಕೆ ಮುಂದಾದರು.
ಅಮೆರಿಕದ ಬೆಂಬಲಿತ ವಸಾಹತುಶಾಹಿ ವ್ಯವಸ್ಥೆ ಹಾಗೂ ಕ್ಯೂಬಾದ ಸರ್ವಾಧಿಕಾರಿಯಾಗಿದ್ದ ಪುಲ್‌ಜೆನ್ಸಿಯೋ ಬಟಿಸ್ಟಾ ಆಡಳಿತದ ವಿರುದ್ಧ ಸಮರ ಸಾರಿ ಕ್ಯೂಬಾದಲ್ಲಿ ಕಮ್ಯೂನಿಸ್ಟ್ ಸಿದ್ಧಾಂತ ಪ್ರಸರಿಸಿದ ಧೀಮಂತ ನಾಯಕ ಫಿಡೆಲ್ ಕ್ಯಾಸ್ಟ್ರೊ. ಸರ್ವಾಧಿಕಾರಿ ಬಟಿಸ್ಟಾ ಅವರಿಂದ ದೇಶವನ್ನು 1959ರಲ್ಲಿ ಮುಕ್ತಿಗೊಳಿಸಿ, ಸತತ 15 ವರ್ಷ ಜೈಲುವಾಸ ಅನುಭವಿಸಿದ್ದರು. 1953ರಲ್ಲಿಯೇ ಬಟಿಸ್ಟಾ ವಿರುದ್ಧ ವಿಫಲ ದಾಳಿ ನಡೆಸಿ, ಬಳಿಕ ಮೆಕ್ಸಿಕೋಗೆ ಪಲಾಯನಗೊಂಡು ಅಲ್ಲಿ ಮತ್ತೊಬ್ಬ ಕ್ರಾಂತಿಕಾರಿ ಸ್ನೇಹಿತ ಅರ್ಜೆಂಟೀನಾದ ಚೆಗುವೆರಾ, ಸಹೋದರ ರೌಲ್ ಕ್ಯಾಸ್ಟ್ರೊ ಜತೆ ಸೇರಿ ಗೆರಿಲ್ಲಾ ಪಡೆಯನ್ನು ಕಟ್ಟಿದರು. ಇದಕ್ಕೆ ’26 ಜುಲೈ ಮೂಮೆಂಟ್’ ಎಂದೇ ಹೆಸರು.
ಮೆಕ್ಸಿಕೋದಿಂದ ಕ್ಯೂಬಾಕ್ಕೆ ಮರಳಿದ ಬಳಿಕ ಈ ಗೆರಿಲ್ಲಾ ಪಡೆಯು 1959ರಲ್ಲಿ ಬಟಿಸ್ಟಾ ಆಡಳಿತದ ವಿರುದ್ಧ ಸೆಟೆದು ನಿಂತು, ಅವರನ್ನು ಪದಚ್ಯುತಗೊಳಿಸುವಲ್ಲಿ ಯಶಸ್ವಿಯಾಯಿತು. 1960ರಲ್ಲಿ ಅಧಿಕಾರದ ಗದ್ದುಗೆ ಏರಿದ ಕ್ಯಾಸ್ಟ್ರೊ ಅವರು ಅಮೆರಿಕದ ಎಚ್ಚರಿಕೆಯನ್ನೂ ಧಿಕ್ಕರಿಸಿ ಸೋವಿಯತ್ ಒಕ್ಕೂಟದ ಜತೆ ಸ್ನೇಹ ಹಸ್ತ ಚಾಚಿದರು. ಕ್ಯೂಬಾವನ್ನು ಕಮ್ಯುನಿಸ್ಟ್ ದೇಶವೆಂದು ಘೋಷಿಸಿ, ಶಿಕ್ಷಣ, ಆರೋಗ್ಯ, ಆರ್ಥಿಕ ಕ್ಷೇತ್ರಗಳಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನನಾಯಕನಾಗಿ ಗುರುತಿಸಿಕೊಂಡರು.
ಫಿಡೆಲ್ ಕ್ಯಾಸ್ಟ್ರೊ ಸರಕಾರದ ಜನಹಿತ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳದ ಅಮೆರಿಕ ಹೇಗಾದರೂ ಮಾಡಿ ಅದನ್ನು ಮಟ್ಟಹಾಕುವ ಉದ್ದೇಶದೊಂದಿಗೆ ಬಟಿಸ್ಟಾ ಬೆಂಬಲಿಗರನ್ನೇ ಕ್ಯಾಸ್ಟ್ರೊ ವಿರುದ್ಧ ಛೂ ಬಿಟ್ಟಿತು. ಆದರೆ ಕ್ಯಾಸ್ಟ್ರೊ ಬಲು ಚಾಣಕ್ಷಮತಿ. ಸೇನೆಯನ್ನು ನುಗ್ಗಿಸಿ ಅವರ ಅಟ್ಟಹಾಸವನ್ನು ಪುಡಿಗಟ್ಟಿದ್ದರು.
ಐದು ದಶಕಗಳ ಕಾಲ ಕ್ಯೂಬಾವನ್ನು ಆಳಿದ ಕ್ಯಾಸ್ಟ್ರೊ ತಮ್ಮ ಅಧಿಕಾರವಧಿಯುದ್ದಕ್ಕೂ ವಿರೋಧ ಕಟ್ಟಿಕೊಂಡು ಬಂದ ಅಮೆರಿಕವನ್ನು ಅಕ್ಷರಶಃ ಏಕಾಂಗಿ ವೀರನಂತೆ ಮಣಿಸಿದರು.
ಇದನ್ನು ಓದಿ: ಜುಲೈ 26 ಮೊಂಕಾಡಾ ದಿನ: ಕ್ಯೂಬಾದಲ್ಲಿ ಅಮೆರಿಕನ್ ಮೂಗುತೂರಿಸುವಿಕೆಯ ಖಂಡನೆ
ಅಮೆರಿಕದ ಎಚ್ಚರಿಕೆ, ಹತ್ಯೆ ಯತ್ನ ಹಾಗೂ ಆರ್ಥಿಕ ದಿಗ್ಬಂಧನಗಳೆಲ್ಲವನ್ನೂ ಗಟ್ಟಿಯಾಗಿ ಎದುರಿಸಿದ ಫಿಡೆಲ್ ಕ್ಯಾಸ್ಟ್ರೊ ಅವರ ಆಡಳಿತಾವಧಿಯಲ್ಲಿ ಕ್ಯೂಬಾದ ಬೆಂಬಲಕ್ಕೆ ನಿಂತಿದ್ದು ಸೋವಿಯತ್ ಒಕ್ಕೂಟ. 1961ರಲ್ಲಿ ಅಮೆರಿಕ-ಸೋವಿಯತ್ ನಡುವೆ ಶೀತಲ ಸಮರ ನಡೆಯುತ್ತಿತ್ತು. ಆಗ ಜಾನ್ ಎಫ್ ಕೆನಡಿ ಅಮೆರಿಕ ಅಧ್ಯಕ್ಷರಾಗಿದ್ದರು. ಇಂಥ ಸಂಕಷ್ಟದ ಸಮಯದಲ್ಲಿ ಕ್ಯಾಸ್ಟ್ರೊ ಅವರು ಕ್ರಾಂತಿಕಾರಕ ನಿರ್ಧಾರಗಳನ್ನು ತಳೆದು ಸೋವಿಯತ್ ಒಕ್ಕೂಟದ ಜತೆ ಮೈತ್ರಿ ಮಾಡಿಕೊಂಡರು.
ಸೋವಿಯತ್ ಒಕ್ಕೂಟ ಪತನದ ನಂತರದಲ್ಲಿ ಕ್ಯೂಬಾದ ಆಟವೂ ಮುಹಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆಗ ಅಮೆರಿಕ ಹೇರಿದ ಇನ್ನಷ್ಟು ಕಠಿಣ ಆರ್ಥಿಕ ದಿಗ್ಬಂಧನಗಳಿಂದ ಕ್ಯೂಬಾ ಸಂಕಷ್ಟಕ್ಕೆ ಸಿಲುಕಿತು. ತೈಲ ಆಮದು ಕಷ್ಟವಾದಾಗ 1998ರಲ್ಲಿ ವೆನಿಜುವೆಲಾದ ಅಧ್ಯಕ್ಷ ಹ್ಯೂಗೋ ಚಾವೇಜ್ ಜತೆ ಸ್ನೇಹ ಸಾಧಿಸಿ, ಇಂಧನ ಕೊರತೆಯನ್ನು ನಿಭಾಯಿಸಿ ದೇಶವನ್ನು ಮುನ್ನಡೆಸಿದ್ದರು.
ಇದನ್ನು ಓದಿ: ಕ್ಯೂಬಾ ನಾಯಕತ್ವ : ‘ಸಿಯೆರಾ ಮಿಸ್ತ್ರಾ ಪೀಳಿಗೆ’ಯಿಂದ ಹೊಸ ಪೀಳಿಗೆಯತ್ತ
ಕ್ಯೂಬನ್ ಕಮ್ಯುನಿಸ್ಟ್ ಪಾರ್ಟಿಯ ಮೊದಲ ಕಾರ್ಯದರ್ಶಿಯಾಗಿ ಕ್ಯಾಸ್ಟ್ರೊ ಕೈಗೊಂಡ ದಿಟ್ಟ ನಿರ್ಧಾರಗಳು ಕೇವಲ ಕ್ಯೂಬಾಕ್ಕೆ ಸೀಮಿತವಾಗಲಿಲ್ಲ. 1960ರಲ್ಲಿ ಕ್ಯೂಬಾದ ಸೇನಾ ಪಡೆಗಳನ್ನು ಆಫ್ರಿಕಾಕ್ಕೆ ಕಳುಹಿಸಿ ಕರಿಯರ ಮೇಲೆ ಬೀಳಿಯರು ನಡೆಸುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಡುವಂತೆ ಅಣಿ ನೆರೆಸಿದರು. ಜೀತದಾಳುಗಳಾಗಿ ಶೋಷಣೆಯಲ್ಲಿ ಪರಿತಪಿಸುತ್ತಿರುವ ಕರಿಯರ ಉದ್ಧಾರಕ್ಕೆಂದು ಸಾಕಷ್ಟು ಆರ್ಥಿಕ ಮತ್ತು ವೈದ್ಯಕೀಯ ನೆರವನ್ನೂ ನೀಡಿದರು. ಬಡವರ ಸೇವೆ ಮಾಡಲು ನೂರಾರು ವೈದ್ಯರನ್ನು ಆಫ್ರಿಕಾಕ್ಕೆ ರವಾನಿಸಿದ್ದರು. ದಕ್ಷಿಣ ಆಫ್ರಿಕಾದಿಂದ ನಮೀಬಿಯಾಕ್ಕೆ 1990ರಲ್ಲಿ ಮುಕ್ತಿಕೊಡಿಸುವಲ್ಲಿ ಹಾಗೂ ಸ್ಯಾಂಡಿನ್ಸಿಟಾ ಬಂಡುಕೋರರ ಕೈಗೆ 1979ರಲ್ಲಿ ‘ನಿಕರಾಗುವ’ದ ಅಧಿಕಾರ ಸಿಗುವಲ್ಲಿ ಕ್ಯೂಬಾ ಪ್ರಮುಖ ಪಾತ್ರವಹಿಸಿತ್ತು. ಈ ಎಲ್ಲ ಕಾರಣಗಳಿಂದಲೇ 1990ರಲ್ಲಿ ದಕ್ಷಿಣ ಆಫ್ರಿಕಾದ ಜನ ನಾಯಕ ನೆಲ್ಸನ್ ಮಂಡೇಲಾ ಅವರು ಜೈಲಿನಿಂದ ಬಿಡುಗಡೆಯಾದ ತಕ್ಷಣ ಫಿಡೆಲ್ ಕ್ಯಾಸ್ಟ್ರೊಗೆ ಅಭಿನಂದನೆಯ ಮಹಾಪೋರವೇ ಹರಿಸಿದರು.
ಭಾರತದೊಂದಿಗೆ ಫಿಡೆಲ್ ಕ್ಯಾಸ್ಟ್ರೋ ಸಂಬಂಧ
1983ರಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಮ್ಮೇಳನದಲ್ಲಿ ಇಂದಿರಾ ಗಾಂಧಿ ಅವರನ್ನು ಫಿಡೆಲ್ ಕ್ಯಾಸ್ಟ್ರೋ ಭೇಟಿಯಾದರು. ಎರಡು ರಾಷ್ಟ್ರಗಳ ನಡುವಿನ 14000 ಕಿ.ಮೀ. ಅಂತರವನ್ನು ಕೈಯಳತೆಗೆ ಕುಗ್ಗಿಸಿ ಸ್ನೇಹದ ಹಸ್ತ ಬೆಸೆದದ್ದು ಕ್ಯಾಸ್ಟ್ರೋ ತಾಕತ್ತು, ಭಾರತದ ಔದಾರ್ಯ.
ಬ್ಯಾಟಿಸ್ಟಾ ಸಾಮ್ರಾಜ್ಯವನ್ನು ಕಿತ್ತೆಸೆದು ಕ್ರಾಂತಿ ಮಾಡಿದ ಬಳಿಕ 1959ರಲ್ಲಿ ಕ್ಯೂಬಾಕ್ಕೆ ಮಾನ್ಯತೆ ನೀಡಿದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ರಾಜಕೀಯ, ವ್ಯಾಪಾರ, ಸಾಂಸ್ಕೃತಿಕ ಮಾತ್ರವಲ್ಲ ಜನರ ನಡುವಿನ ಸೌಹಾರ್ದತೆಗೂ ಅಮೆರಿಕ ವಿಧಿಸಿದ ನಿರ್ಬಂಧಗಳನ್ನು ಮೀರಿ ಭಾರತ ವ್ಯವಹರಿಸಿದೆ. ಅಲಿಪ್ತ ರಾಷ್ಟ್ರಗಳು ನಿಮ್ಮ ಮೇಲೆ ಅತ್ಯದ್ಭುತ ಆಶಾವಾದವನ್ನು ಹೊಂದಿವೆ ಎಂದು ಅಂದಿನ ಪ್ರಧಾನಿ ನೆಹರೂ ಕ್ಯಾಸ್ಟ್ರೋಗೆ ಹೇಳಿದ್ದರು.
634 ಬಾರಿ ಹತ್ಯೆ ಯತ್ನ
ಜೀವನದುದ್ದಕ್ಕೂ ಅಮೆರಿಕವನ್ನು ಎದುರುಹಾಕಿಕೊಂಡು ಬಂದಿದ್ದ ಕ್ಯಾಸ್ಟ್ರೊ ವಿಶ್ವದ ದೊಡ್ಡಣ್ಣನ ಚಳಿ ಬಿಡಿಸಿದ್ದರು. ಅದರ ಜತೆಗಿನ ಎಲ್ಲ ವ್ಯಾಪಾರ ವಹಿವಾಟಿಗಳ ಬಾಗಿಲು ಬಂದ್ ಮಾಡಿದ್ದರು. ಪ್ರತಿಕಾರವೆಂಬಂತೆ ಅಮೆರಿಕ ಸಹ ಕ್ಯೂಬಾದಿಂದ ಸಕ್ಕರೆ ಆಮದನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿತ್ತು. ಈ ಮುಸುಕಿನ ಗುದ್ದಾಟದಲ್ಲಿ ಸೋತು ಸುಣ್ಣವಾಗಿದ್ದ ಅಮೆರಿಕ ಹತಾಶೆಯಿಂದ ಕ್ಯಾಸ್ಟ್ರೊ ಹತ್ಯೆಗೆ 634 ಬಾರಿ ವಿಫಲ ಯತ್ನ ನಡೆಸಿತ್ತು. ಅದರ ಗುಪ್ತಚರ ಸಂಸ್ಥೆ ಸಿಐಎ ಇದನ್ನು ಒಪ್ಪಿಕೊಂಡಿತ್ತು. ದ್ವೇಷ ಎಷ್ಟಿತ್ತೆಂದರೆ ಕ್ಯಾಸ್ಟ್ರೊ ಸೇದುವ ಸಿಗಾರ್‌ನಲ್ಲೂ ವಿಷ ಬೆರೆಸುವುದೂ ಸೇರಿದಂತೆ ನಾನಾ ಬಗೆಯ ವಾಮ ಮಾರ್ಗಗಳಿಂದ ಹತ್ಯೆಗೆ ಯತ್ನಿಸಲಾಗಿತ್ತು.
ಒಮಾಬಾ-ಕ್ಯಾಸ್ಟ್ರೊ ಭೇಟಿ
1961ರಿಂದಲೂ ಅಮೆರಿಕ-ಕ್ಯೂಬಾ ನಡುವಿನ ಸಂಬಂಧ ಮುಳ್ಳು ಹಾಸಿಗೆಯಂತಿದೆ. ಈ ದ್ವೇಷಕ್ಕೆ ಅಂತ್ಯ ಹಾಡುವ ಬಯಕೆಯೊಂದಿಗೆ 2014ರ ಡಿಸೆಂಬರ್ 17ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಕ್ಯೂಬಾ ಜತೆ ಸಂಬಂಧ ಸುಧಾರಣೆಯ ಪ್ರಯತ್ನ ನಡೆಸುವುದಾಗಿ ಘೋಷಿಸಿದ್ದರು. ಅದರಂತೆ 2016ರ ಮಾರ್ಚ್‌ನಲ್ಲಿ ಒಬಾಮಾ ಅವರು ಹವಾನಾಕ್ಕೆ ಐತಿಹಾಸಿಕ ಭೇಟಿ ನೀಡಿ ಕ್ಯಾಸ್ಟ್ರೊ ಜತೆಗೆ ಮಾತುಕತೆ ನಡೆಸಿದ್ದರು.
1959ರ ಕ್ಯೂಬಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫಿಡೆಲ್ ಕ್ಯಾಸ್ಟ್ರೊ 90 ವರ್ಷ ಬದುಕಿದ್ದರು. ಸುಮಾರು ಅರ್ಧ ಶತಮಾನದಷ್ಟು ಆಡಳಿತ ನಡೆಸಿದ್ದ ಅವರು, 1959ರಿಂದ 1976ರವರೆಗೆ ದೇಶದ ಪ್ರಧಾನಿಯಾಗಿ, 1976ರಿಂದ 2008ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ಈಡಾಗಿದ್ದ ಇವರು 2008ರಲ್ಲಿಯೇ ಸಹೋದರ ರೌಲ್ ಕ್ಯಾಸ್ಟ್ರೊಗೆ ಕ್ಯೂಬಾದ ಅಧ್ಯಕ್ಷ ಸ್ಥಾನ ಹಸ್ತಾಂತರಿಸಿ, ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸಿದ್ದರು.