ತಿರುವನಂತಪುರಂ: ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಿಜಯ ದಶಮಿ ದಿನದಂದು ಪುಟ್ಟ ಮಕ್ಕಳ ಕೈ ಹಿಡಿದು ವಿದ್ಯಾರಂಭ ಮಾಡಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಸ್ವತಃ ಪಿಣರಾಯಿ ವಿಜಯನ್ ಅವರು ಹಂಚಿಕೊಂಡಿರುವ ಫೋಟೋಗಳು ಬಗ್ಗೆ, ಶಿಕ್ಷಣದ ಕುರಿತು ಬರೆದಿದ್ದಾರೆ.
ಜ್ಞಾನವು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ಅದಕ್ಕಾಗಿಯೇ ಶಿಕ್ಷಣವನ್ನು ಬಹಳ ಮುಖ್ಯವಾದ ಸಾಮಾಜಿಕ ಚಟುವಟಿಕೆಯೆಂದು ಪರಿಗಣಿಸಲಾಗಿದೆ ಎಂದು ಫೋಟೋನೊಂದಿನ ಸಂದೇಶವನ್ನು ಪಿಣರಾಯ್ ವಿಜಯನ್ ಹಾಕಿದ್ದಾರೆ.
ಇಂದು ಶಾಲೆಯ ಮೊದಲ ದಿನದಂದು ಅನೇಕ ಮಕ್ಕಳು ಜ್ಞಾನದ ಜಗತ್ತಿಗೆ ತಮ್ಮ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದಾರೆ. ನವರಾತ್ರಿಯ ಶುಭ ಸಂದರ್ಭ ಇಂದು, ನೇಹಾ, ನಿಯಾ, ಕನಿ ಮತ್ತು ಫಿಡೆಲ್ ತಮ್ಮ ಮಕ್ಕಳು ವಿದ್ಯಾರಂಭ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕೊರೋನಾದಿಂದಾಗಿ ದೀರ್ಘಕಾಲದಿಂದ ಮುಚ್ಚಲಾಗಿದ್ದ ಶಾಲೆಗಳು ಕೆಲವೇ ದಿನಗಳಲ್ಲಿ ಮತ್ತೆ ತೆರೆಯಲಿರುವುದು ಎಂಬ ಸುದ್ದಿಯನ್ನು ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ನಮ್ಮ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಮತ್ತು ದೇಶಕ್ಕೆ ಉಜ್ವಲ ಭವಿಷ್ಯವನ್ನು ಒದಗಿಸಲು ನಾವು ಒಟ್ಟಾಗಿ ನಿಲ್ಲೋಣ. ಎಲ್ಲರಿಗೂ ಮಹಾನವಮಿ – ವಿಜಯದಶಮಿ ಶುಭಾಶಯಗಳು ಎಂದು ಬರೆದಿದ್ದಾರೆ.
ಕೇರಳ ಶಾಲೆಗಳು, ಕಾಲೇಜುಗಳು ಮತ್ತೆ ತೆರೆಯುತ್ತಿವೆ. ಶಾಲೆಗಳನ್ನು ನವೆಂಬರ್ 1 ರಿಂದ ಮತ್ತೆ ತೆರೆಯಲು ನಿರ್ಧರಿಸಲಾಗಿದೆ. ಆದರೆ ಕಾಲೇಜುಗಳ ವಿಭಾಗದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಅಕ್ಟೋಬರ್ 4 ರಿಂದ ಮತ್ತೆ ತರಗತಿಗಳು ಆರಂಭವಾಗಲಿದೆ. ಕೋವಿಡ್ ಸುರಕ್ಷತಾ ನಿಯಮಗಳನ್ನು ಚಾಚುತಪ್ಪದೆ ಅನುಸರಿಸಲಾಗುತ್ತಿದ್ದು ಹಾಜರಾತಿ ಕಡ್ಡಾಯ ಮಾಡಿಲ್ಲ ಎನ್ನಲಾಗಿದೆ.
ಕೇರಳ ಶಾಲೆಗಳು, ಕಾಲೇಜುಗಳು ತೆರೆಯುವ ಮೊದಲು ಕೌನ್ಸಲಿಂಗ್ ನಡೆಸುವಂತೆಯೂ ಸೂಚನೆ ನೀಡಲಾಗಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಮಾಲೋಚನೆ ನಡೆಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೋವಿಡ್ -19 ಅವಧಿಯಲ್ಲಿ ತರಗತಿಗಳನ್ನು ಮಾತ್ರವಲ್ಲದೆ ಸ್ನೇಹಿತರನ್ನೂ ಕಳೆದುಕೊಂಡ ನಂತರ ಈ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಳಜಿಯಿಂದ ಇಂತಹ ಸೂಚನೆ ಎಲ್ಲ ವಿದ್ಯಾಕೇಂದ್ರಗಳಿಗೂ ನೀಡಬೇಕೆಂಬ ಸಂದೇಶ ಇದಾಗಿದೆ.