ಪುಟಾಣಿಗಳ ಶಿಕ್ಷಣಕ್ಕಿಲ್ಲ ಬಲ! 25 ಮಕ್ಕಳಿರುವ ಅಂಗನವಾಡಿಗೆ ಶಿಕ್ಷಕಿಯೂ ಇಲ್ಲ, ಸಹಾಯಕಿಯೂ ಇಲ್ಲ

ಕೊಡಗು : ಕೊಡಗಿನ ದಿಡ್ಡಳ್ಳಿ ಪುನರ್ವಸತಿ ಗ್ರಾಮ ಬ್ಯಾಡಗೊಟ್ಟದ ಅಂಗನವಾಡಿಯಲ್ಲಿ 25 ಮಕ್ಕಳಿದ್ದು, ಮಕ್ಕಳಿಗೆ ಕಲಿಸಲು ಯಾರು ಇಲ್ಲದೆ ಶಾಲಾಪೂರ್ವ ಶಿಕ್ಷಣದಿಂದಲೇ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ದಿಡ್ಡಳ್ಳಿ ಪುನರ್ವಸತಿ ಗ್ರಾಮ ಬ್ಯಾಡಗೊಟ್ಟದಲ್ಲಿರುವ ಪುಟಾಣಿಗಳ ಶಿಕ್ಷಣವನ್ನು ದುರ್ಬಲಗೊಳಿಸಲಾಗಿದೆ. ಇಲ್ಲಿ ಅಂಗನವಾಡಿ ಶಿಕ್ಷಕಕಿಯೂ ಇಲ್ಲ ಸಹಾಯಕಿಯೂ ಇಲ್ಲ. ಪಕ್ಕದ ಊರಿನ ಅಂಗನವಾಡಿ ಶಿಕ್ಷಕಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅರಣ್ಯ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಕುತ್ತು ಬಂದಿದೆ. ಪುಟಾಣಿಗಳ

2016 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ,  ದಿಡ್ಡಳ್ಳಿ ಪುನರ್ವಸತಿ ಯೋಜನೆ ಸಂದರ್ಭದಲ್ಲಿ, ನೀವು ಕಾಡಿನಲ್ಲಿ ಇದ್ದರೆ ಶಿಕ್ಷಣದಿಂದ ಹಾಗೂ ಮೂಲಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎಂದು ಕುಶಾಲನಗರ ತಾಲ್ಲೂಕಿನ ಬ್ಯಾಡಗೊಟ್ಟದಲ್ಲಿ 375 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂರು ಒದಗಿಸಲಾಗಿತ್ತು. ಅದ ವೇಳೆ ಅಂಗನವಾಡಿ ನಿರ್ಮಿಸುವ ಭರವಸೆ ನೀಡಲಾಗಿತ್ತು. ಆದರೆ 6 ವರ್ಷ ಕಳೆದರೂ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಈ ಕುರಿತು ಅಂಗನವಾಡಿ ಶಿಕ್ಷಕಿ ಶಾಲಿನಿ, ಜನಶಕ್ತಿ ಮೀಡಿಯ ಜೊತೆ ಮಾತನಾಡುತ್ತಾ, ನನಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ವಾರದಲ್ಲಿ ಮೂರು ದಿನ ಬ್ಯಾಡಗೊಟ್ಟಕ್ಕೆ ಇನ್ನೂ ಮೂರುದಿನ ಮೂಲ ಅಂಗನವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಶಿಕ್ಷಕಿಯನ್ನು ನೇಮಕಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಎರಡೆರಡು ಕಡೆ ಕೆಲಸ ಮಾಡುವ ಕಾರಣ ಮಕ್ಕಳಿಗೆ ಸರಿಯಾದ ನ್ಯಾಯ ಕೊಡಲಾಗುತ್ತಿಲ್ಲ ಎಂದು ಕಳವಳವ್ಯಕ್ತಪಡಿಸಿದರು.

ಮುಂದುವರೆದು ಮಾತನಾಡಿದ ಅವರು, ಬ್ಯಾಡಗೊಟ್ಟ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಇರುವುದರಿಂದ ಅಂಗನವಾಡಿಗೆ ಬಂದರೂ ಗರ್ಭಿಣಿಯರು, ಬಾಣಂತಿಯರನ್ನು ಭೇಟಿಯಾಗುವುದರಲ್ಲೇ ಸಮಯ ಮುಗಿಯುತ್ತಿದೆ. ಜೊತೆಗೆ ಅಂಗನವಾಡಿಗೆ ಸಹಾಯಕಿಯೂ ಇಲ್ಲದೆ ಇರುವುದರಿಂದ ಈ ಪುಟಾಣಿಗಳಿಗೆ ವಿತರಿಸಬೇಕಾಗಿರುವ ಆಹಾರ ಸಿದ್ಧಪಡಿಸುವುದನ್ನೂ ನಾನೇ ಮಾಡಬೇಕಾಗಿದೆ. ಇದರಿಂದ ಪುಟಾಣಿಗಳಿಗೆ ಕಲಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳು ಇಂದಿಗೂ ಶಾಲಾ ಪೂರ್ಣ ಶಿಕ್ಷಣದಿಂದಲೇ ವಂಚಿತರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪುಟಾಣಿಗಳ

ಇದನ್ನೂ ಓದಿದ್ವೇಷ ರಾಜಕಾರಣಕ್ಕೆ ಮಕ್ಕಳು, ಮಹಿಳೆಯರು ಬಲಿ – ಎಸ್.ಜಿ.ಸಿದ್ದರಾಮಯ್ಯ

ಐಟಿಡಿಪಿ ಇಲಾಖೆಯಿಂದ ಅಂಗನವಾಡಿಗೆಂದು ಕಳೆದ 6 ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಿದ್ದರೂ ಅದರ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ, ಬಣ್ಣ ಬಳಿದಿಲ್ಲ. ಕೂಡಿಗೆ ಗ್ರಾಮ ಪಂಚಾಯಿತಿಗೆ ಅಂಗನವಾಡಿ ಕಟ್ಟಡವನ್ನು ಹಸ್ತಾಂತರಿಸಬೇಕಾಗಿದ್ದು ಇಂದಿಗೂ ಹಸ್ತಾಂತರಿಸಿಲ್ಲ. ಪರಿಣಾಮವಾಗಿ ಅಂಗನವಾಡಿಯಲ್ಲಿ ಕನಿಷ್ಟ ಮಕ್ಕಳಿಗೆ ಕುಳಿತುಕೊಳ್ಳುವುದಕ್ಕೆ ಚಾಪೆಯೂ ಇಲ್ಲ. ಆಹಾರ ಸೇವಿಸುವುದಕ್ಕೆ ಪ್ಲೇಟು, ಲೋಟಗಳೂ ಇಲ್ಲ. ಇಲ್ಲಿನ ಸ್ವಸಹಾಯ ಸಂಘಗಳ ಸಹಾಯದಿಂದ ಚಾಪೆಪಡೆದುಕೊಂಡಿದ್ದಾರೆ.

ಶಿಕ್ಷಕಿ, ಸಹಾಯಕಿ ಯಾರೂ ಇಲ್ಲ, ಮೂಲಸೌಲಭ್ಯವೂ ಇಲ್ಲ ಇದರಿಂದಾಗಿ ನಮ್ಮ ಮಕ್ಕಳ ಶಿಕ್ಷಣಕ್ಕೆ ಕುತ್ತು ಬಂದಿದೆ.  ಅಧಿಕಾರಿಗಳಿಗೆ, ಶಾಸಕರಿಗೆ, ಸಂಸದರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ ಆದರೆ ಅವರು ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು  ಗ್ರಾಮದ ಮುಖಂಡ ಶಂಕರು ಪಿ ಆರೋಪಿಸಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತು ಕೂಡಲೇ ಈ ಅಂಗನವಾಡಿಗೆ ಅಗತ್ಯ ಮೂಲಸೌಲಭ್ಯ ಹಾಗೂ ಶಿಕ್ಷಕಿ ಮತ್ತು ಸಹಾಯಕಿಯರನ್ನು ನೇಮಿಸಿ ಮಕ್ಕಳ ಶಿಕ್ಷಣದ ಹಕ್ಕನ್ನು ಕಾಪಾಡಲು ಮುಂದಾಗಲಿ. ಪುಟಾಣಿಗಳ

 

ಈ ವಿಡಿಯೋ ನೋಡಿವೇತನವೂ ಇಲ್ಲ, ಮೂಲ ಸೌಲಭ್ಯವೂ ಇಲ್ಲ : ಕೇಂದ್ರ ಪುರಸ್ಕೃತ ಯೋಜನೆಗಳ ನೌಕರರ ಗೋಳು ಕೇಳುವವರು ಯಾರು?

 

Donate Janashakthi Media

Leave a Reply

Your email address will not be published. Required fields are marked *