ಬೆಂಗಳೂರು: ಈ ಬಾರಿ ಸರಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ರೈತರಿಂದ ರಾಗಿ, ಭತ್ತ, ಜೋಳದಂತಹ ಕೃಷಿ ಉತ್ಪನ್ನಗಳನ್ನು ಖರೀದಿಸಿ ಸಂಗ್ರಹಿಸಲು ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ (ಪ್ಯಾಕ್ಸ್) ಮತ್ತು ಸ್ವಸಹಾಯ ಸಂಘಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ.
ಈ ಹಿಂದೆ ಕೃಷಿ ಮಾರಾಟ ಮಂಡಳಿ, ಕರ್ನಾಟಕ ಸಹಕಾರ ಮಾರಾಟ ಮಂಡಳಿ, ಕರ್ನಾಟಕ ಆಹಾರ ನಿಗಮಗಳನ್ನು ಖರೀದಿ ಏಜೆನ್ಸಿಗಳನ್ನಾಗಿ ನಿಯೋಜಿಸಲಾಗಿತ್ತು. ಆದರೆ, ಈ ಬಾರಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವೇ ಮುಖ್ಯ ಏಜೆನ್ಸಿಯಾಗಿರಲಿದ್ದು, ಪ್ಯಾಕ್ಸ್ ಮತ್ತು ಸ್ವಸಹಾಯ ಸಂಘಗಳನ್ನು ಬಳಸಿಕೊಂಡು ಬೆಂಬಲ ಬೆಲೆ ಯೋಜನೆಯಡಿ ಧಾನ್ಯಗಳನ್ನು ಖರೀದಿಸಿ, ಸಂಗ್ರಹಿಸಲು ನಿರ್ಧರಿಸಲಾಗಿದೆ.
ಜತೆಗೆ, ಪ್ರತಿ ವರ್ಷವೂ ನೋಂದಣಿ ವಿಳಂಬ, ಖರೀದಿ ಪ್ರಕ್ರಿಯೆ ತಡವಾಗುವುದು, ತಾಲೂಕು ಕೇಂದ್ರಗಳಿಗೆ ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯುವುದು ರೈತರಿಗೆ ಹೆಚ್ಚು ಹೊರೆಯಾಗುತ್ತಿತ್ತು. ಈ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ಸ್ವ ಸಹಾಯ ಸಂಘಗಳ ಮೂಲಕ ಸ್ಥಳೀಯ ಮಟ್ಟದಲ್ಲಿಸಂಗ್ರಹ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ನರೇಗಲ್ | ಮೊಳಕೆಯೊಡೆದ ಹೆಸರು ಬೆಳೆ ತಿಂದು ಎರಡು ಎಮ್ಮೆಗಳು ಸಾವು
ರೈತರಿಂದ 2025-26ನೇ ಸಾಲಿನಲ್ಲಿರಾಗಿ, ಬಿಳಿಜೋಳ ಮತ್ತು ಭತ್ತವನ್ನು ಸುಲಲಿತವಾಗಿ ಖರೀದಿಸಲು ಅನುವಾಗುವಂತೆ ಸಮರ್ಪಕ ಮತ್ತು ವ್ಯವಸ್ಥಿತ ಬೆಳೆ ಸಮೀಕ್ಷೆ ಹಾಗೂ ತಂತ್ರಾಂಶ ಸಿದ್ಧಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ, ಇ-ಗವರ್ನೆನ್ಸ್ ಮತ್ತು ಎನ್‌ಐಸಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ನವೆಂಬರ್‌ನಿಂದಲೇ ಖರೀದಿ
ಭತ್ತ ಖರೀದಿಗೆ ಸೆಪ್ಟೆಂಬರ್-ಅಕ್ಟೋಬರ್‌ನಿಂದಲೇ ನೋಂದಣಿ ಆರಂಭಿಸಿ, ನವೆಂಬರ್‌ನಿಂದಲೇ ಖರೀದಿ ಆರಂಭಿಸಲಾಗುವುದು. ರಾಗಿಗೆ ಅಕ್ಟೋಬರ್‌ನಲ್ಲಿನೋಂದಣಿ ಆರಂಭಿಸಿ ಜನವರಿ ಮೊದಲ ವಾರದಿಂದಲೇ ಖರೀದಿ ಆರಂಭಿಸಲಾಗುವುದು. ಜೋಳ ಖರೀದಿಗೆ ಡಿಸೆಂಬರ್ ಮೊದಲ ವಾರದಲ್ಲಿನೋಂದಣಿ ಆರಂಭಿಸಿ, ಮಾರ್ಚ್ -ಏಪ್ರಿಲ್‌ಗೆ ಖರೀದಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಭತ್ತ ಖರೀದಿಗೆ ಮಿತಿಯಿಲ್ಲ
ಅಂದ ಹಾಗೆ ಈ ಬಾರಿ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಭತ್ತ ಬೆಳೆದಿರುವ ಹಿಡುವಳಿಯ ಮಿತಿಗೆ ಒಳಪಟ್ಟು ಯಾವುದೇ ಗರಿಷ್ಠ ಮಿತಿಯಿಲ್ಲದೆ ರೈತರ ಹಿಡುವಳಿ ಹಾಗೂ ಬೆಳೆ ದಾಖಲೆಗಳ ದೃಢೀಕರಣದ ಆಧಾರದ ಮೇಲೆ ಲಭ್ಯವಾಗುವ ಭತ್ತದ ಪ್ರಮಾಣವನ್ನು ಪ್ರಸಕ್ತ ಸಾಲಿನಲ್ಲಿ ಖರೀದಿಸಲು ಚಿಂತನೆ ನಡೆಸಲಾಗಿದೆ.
ಇದನ್ನೂ ನೋಡಿ: ಗೌರಿ ನೆನಪು : ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ – ಡಾ. ಎಂ.ಎಸ್. ಆಶಾದೇವಿ – Janashakthi Media
