ಚಂಡೀಗಢ: ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿನ ಬಿಕ್ಕಟ್ಟಿನಿಂದಾಗಿ ಉಂಟಾಗಿದ್ದ ಅಸಮಾಧಾನದಿಂದಾಗಿ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾರೆ ಎನ್ನಲಾಗುತ್ತಿದೆ.
“ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಮತ್ತು ಸಚಿವರುಗಳ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ರಾಜಭವನ ದ್ವಾರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾರೆ,” ಎಂದು ಪಂಜಾಬ್ ಸಿಎಂ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ತಿಳಿಸಿದ್ದಾರೆ.
ಪಂಜಾಬ್‌ನ ಕಾಂಗ್ರೆಸ್ ಘಟಕದಲ್ಲಿನ ನಾಯಕತ್ವದ ವಿಚಾರವಾಗಿ ವೈಮನಸ್ಸು ಮತ್ತಷ್ಟು ಹೆಚ್ಚಾಗಿತ್ತು. ರಾಜ್ಯ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರುಗಳ ಸಭೆಯನ್ನು ಇಂದು ಕರೆದಿದೆ.
ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ವಿರುದ್ದವಾಗಿ ಕಳೆದ ತಿಂಗಳು ನಾಲ್ಕು ಸಚಿವರುಗಳು ಹಾಗೂ ಸುಮಾರು ಹನ್ನೆರಡಕ್ಕೂ ಹೆಚ್ಚಿನ ಶಾಸಕರು ಬಂಡಾಯ ಎದ್ದಿದ್ದರು. ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಗ್ಗೆ ಯಾವುದೇ ನಂಬಿಕೆ ಇಲ್ಲ ಎಂದು ಶಾಸಕರು, ಸಚಿವರುಗಳ ಹೇಳಿಕೆಯಾಗಿದೆ.
ಪಕ್ಷದೊಳಗಿನ ಬಿಕ್ಕಟ್ಟನ್ನು ಸರಿಪಡಿಸುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಪರಿಣಮಿಸಿತ್ತು. ಶಾಸಕರುಗಳು ಕೂಡಾ ಸಭೆ ಕರೆಯುವಂತೆ ಒತ್ತಡ ಹೇರುತ್ತಿದ್ದರು ಎಂದು ಹೇಳಲಾಗಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸುಮಾರು 50 ರಷ್ಟು ಶಾಸಕರು ಪತ್ರ ಬರೆದಿದ್ದರು.
ಇವೆಲ್ಲದರ ಬೆಳವಣಿಗೆ ಹಿನ್ನೆಲೆಯಲ್ಲಿ ಪಂಜಾಬ್‌ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಂಜಾಬ್‌ನ ಉಸ್ತುವಾರಿ ಹರೀಶ್ ರಾವತ್ “ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯನ್ನು ಸೇರುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ದೇಶನ ನೀಡಿದೆ. ಕಾಂಗ್ರೆಸ್‌ನ ಎಲ್ಲಾ ಶಾಸಕರುಗಳು ಈ ಸಭೆಗೆ ಹಾಜರಾಗಬೇಕಾಗಿ ವಿನಂತಿ,” ಎಂದು ನಿನ್ನೆ ತಡ ರಾತ್ರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮರೀಂದರ್ ಸಿಂಗ್, “ತಾನು ಅವಮಾನಕ್ಕೆ ಒಳಗಾಗುತ್ತೇನೆ ಎಂದನಿಸಿತು, ಆದ್ದರಿಂದ ನಾನು ರಾಜೀನಾಮೆ ನೀಡಿದೆ,” ಎಂದು ಹೇಳಿದ್ದಾರೆ. “ನಾನು ರಾಜೀನಾಮೆ ನೀಡಲು ಹೋಗುತ್ತಿದ್ದೇನೆ ಎಂದು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿಳಿಸಿದ್ದೇನೆ. ಇದು ಮೂರನೇ ಬಾರಿ ನಡೆಯುತ್ತಿದೆ. ನಾನು ಅವಮಾನಕ್ಕೆ ಒಳಗಾಗಿದ್ದೇನೆ. ಅವರು ಯಾರನ್ನು ನಂಬಬಲ್ಲರೋ ಅವರನ್ನು ಮುಖ್ಯಮಂತ್ರಿ ಮಾಡಬಹುದು. ಕಾಂಗ್ರೆಸ್ ಅಧ್ಯಕ್ಷೆ ಏನು ನಿರ್ಧಾರ ಮಾಡುತ್ತಾರೋ ಅದು ಸರಿ. ನಾನು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇನೆ, ನನ್ನ ಬೆಂಬಲಿಗರ ಭೇಟಿಯ ಬಳಿಕ ನನ್ನ ಮುಂದಿನ ಜೀವನದ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಹೇಳಿದ್ದಾರೆ.