ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿ ಇಂದಿಗೆ ಒಂದು ವರ್ಷ. ಸದಾ ಲವಲವಿಕೆಯಿಂದ ಇರುತ್ತಿದ್ದ ಅಪ್ಪು ಅವರ ಹಠಾತ್ ಅಗಲಿಕೆ ರಾಜ್ಯಕ್ಕೆ ದೊಡ್ಡ ಶಾಕ್ ನೀಡಿತ್ತು. ದೇಶ, ವಿದೇಶಗಳಲ್ಲಿರುವ ಅಪ್ಪು ಅಭಿಮಾನಿಗಳು ಕೂಡ ಮಮ್ಮಲ ಮರುಗಿದ್ದರು.
ವರನಟ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿ 1975 ರಲ್ಲಿ ಜನಿಸಿದ ಪುನೀತ್ (ಲೋಹಿತ್) ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಅಪ್ಪು ಚಿತ್ರದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿದ ಪುನೀತ್, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಬಾಲ ನಟನಿಂದ ನಾಯಕನಾಗಿ ಜನಮನ ಗೆದ್ದರು. 46ನೇ ವಯಸ್ಸಿನೊಳಗೆ ಅದೆಷ್ಟೋ ಸಾಧನೆ ಮಾಡಿದ್ದರು. ಅಪ್ಪು ರಾಜ್ಯದ ಜನರ ಎದೆಯ ಮೇಲೆ ರಾರಾಜಿಸಿದರು.
ಈ ಒಂದು ವರ್ಷದಲ್ಲಿ ಕರುನಾಡು ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಯದ ದಿನವಿಲ್ಲ. ಅವರ ಅಭಿಮಾನಿಗಳು ನೋವಿನಲ್ಲೇ ದಿನ ದೂಡುತ್ತಿದ್ದಾರೆ.
ಅಭಿಮಾನಿಗಳು ಭಾವುಕ
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಸತತ ಒಂದು ವರ್ಷದಿಂದ ಅಭಿಮಾನಿಗಳು ಭೇಟಿ ನೀಡುತ್ತಲೇ ಇದ್ದಾರೆ. ಇಡೀ ಕರುನಾಡು ತನ್ನ ಮನೆಯ ಯಾರೋ ಸದಸ್ಯರನ್ನೇ ಕಳೆದುಕೊಂಡಂತಹ ದುಃಖ ಸಾಗರದಲ್ಲಿ ಮುಳುಗಿದೆ. ಇದೇ ವೇಳೆ ಪುನೀತ್ ಪ್ರಚಾರದ ಹಂಗಿಲ್ಲದೇ ಮಾಡಿದ ಸಹಾಯಗಳು ಈ ಒಂದು ವರ್ಷದಲ್ಲಿ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ಕನ್ನಡ ಚಿತ್ರರಂಗ ಕೂಡಾ ಪುನೀತ್ ನಿಧನದ ನಂತರ ಯಾವುದೇ ಕಾರ್ಯಕ್ರಮ ಮಾಡಿದರೂ ಮೊದಲು ಅಲ್ಲಿ ಪುನೀತ್ ಸ್ಮರಣೆ ಮಾಡಿಯೇ ಕಾರ್ಯಕ್ರಮ ಶುರು ಮಾಡುತ್ತಿದೆ. ಜೊತೆಗೆ ಅನೇಕ ಅಭಿಮಾನಿಗಳು, ಸಿನಿಮಾ ಮಂದಿ ಪುನೀತ್ ರಾಜ್‌ಕುಮಾರ್ ಕುರಿತಾದ ಆಲ್ಬಂ ಹೊರತರುತ್ತಿದ್ದಾರೆ. ಸಾಕಷ್ಟು ಕಡೆಗಳಲ್ಲಿ ಪುನೀತ್ ಅವರ ಪುತ್ಥಳಿ ನಿರ್ಮಾಣವಾಗುತ್ತಿದೆ. ಅದೇನೇ ಆದರೂ ಪುನೀತ್ ಇಲ್ಲ ಎಂಬ ನೋವನ್ನು ಮಾತ್ರ ಹೃದಯದಿಂದ ಕಿತ್ತಾಕಲು ಯಾರಿಂದಲೂ ಸಾಧ್ಯವಿಲ್ಲ. ಅದೇ ನೋವಲ್ಲಿ ಅಭಿಮಾನಿಗಳು ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ನಮ್ಮೊಂದಿಗಿದ್ದಿದ್ದರೆ ಈ ಒಂದು ವರ್ಷದಲ್ಲಿ ಏನೇನಾಗುತ್ತಿತ್ತು ಎಂದು ಯೋಚಿಸಿದಾಗ ಸಾಕಷ್ಟು ಅಂಶಗಳು ಕಣ್ಣ ಮುಂದೆ ಬರುತ್ತವೆ. ಅದು ಸಿನಿಮಾದಿಂದ ಹಿಡಿದು ಅವರ ಸಾಮಾಜಿಕ ಕಾರ್ಯಗಳವರೆಗೂ. ಸಿನಿಮಾ ವಿಚಾರಕ್ಕೆ ಬರುವುದಾದರೆ ಪವನ್ ಜೊತೆಗಿನ “ದ್ವಿತ್ವ’ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸುತ್ತಿತ್ತು. ಇದಲ್ಲದೇ ಒಂದಷ್ಟು ಹೊಸಬರ ಸಿನಿಮಾಗಳ ಟ್ರೇಲರ್, ಟೀಸರ್‌ಗೆ ಪುನೀತ್ ಸಾಥ್ ನೀಡಿ, ಅವರು ಬೆನ್ನುತಟ್ಟುತ್ತಿದ್ದರು.
ಈ ಒಂದು ವರ್ಷದಲ್ಲಿ ಅನೇಕ ಸಿನಿಮಾಗಳಿಗೆ ಪುನೀತ್ ಹಾಡುತ್ತಿದ್ದರು. ಪುನೀತ್ ಅವರೇ ಹಾಡಬೇಕೆಂದು ಕಾದು ಕುಳಿತ ಹೊಸಬರಿಗೂ ನೋವು ಮಾಡದೇ, ಖುಷಿಯಿಂದ ಹಾಡುತ್ತಿದ್ದ ವ್ಯಕ್ತಿತ್ವ ಪುನೀತ್ ಅವರದ್ದು. ಆ ಕಾರಣದಿಂದಲೇ ಪುನೀತ್ ಇದ್ದಿದ್ದರೆ ಒಂದಷ್ಟು ವಿಭಿನ್ನ ಹಾಡುಗಳು ಅಪ್ಪು ಕಂಠಸಿರಿಯಲ್ಲಿ ಮೂಡಿಬರುತ್ತಿದ್ದವು. ಸಾಮಾಜಿಕ ಕಾರ್ಯಗಳ ವಿಚಾರಕ್ಕೆ ಬರುವುದಾದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ಸಹಾಯ ಮಾಡುವ ಗುಣ ಪುನೀತ್ ಅವರದು. ಅದೇ ಕಾರಣದಿಂದಲೇ ಈ ಒಂದು ವರ್ಷದಲ್ಲಿ ಪುನೀತ್ ಬದುಕಿರುತ್ತಿದ್ದರೆ ಸೂರಿಲ್ಲದವರಿಗೆ ಸೂರು ಕಟ್ಟಿಕೊಳ್ಳಲು, ವೈದ್ಯಕೀಯ, ಶೈಕ್ಷಣಿಕ ಸೇರಿದಂತೆ ಸಾಕಷ್ಟು ಕ್ಷೇತ್ರಗಳಿಗೆ ಪುನೀತ್ ಸಹಾಯ ಮಾಡುತ್ತಿದ್ದರು.