ಬೆಂಗಳೂರು : ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಗೆ ಕಂಠೀರವ ಸ್ಟುಡಿಯೊದ ಆವರಣದಲ್ಲಿರುವ ಡಾ. ರಾಜ್‌ಕುಮಾರ್ ಸ್ಮಾರಕ ಬಳಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 11 ಗಂಟೆಯ ಒಳಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಬೆಳಗ್ಗೆ 6 ಗಂಟೆಗೆ ಕಂಠೀರವ ಸ್ಟೇಡಿಯಂನಿಂದ ಅಂತಿಮಯಾತ್ರೆ ಆರಂಭವಾಗಿದ್ದು, ಆ ಹಿನ್ನೆಲೆಯಲ್ಲಿ ಮುಂಜಾನೆ 4 ರಿಂದ ನಗರದಾದ್ಯಂತ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಅಂತಿಮಯಾತ್ರೆ ಸಾಗಲಿರುವ ಪ್ರತಿ ಜಂಕ್ಷನ್ನಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಮೆರವಣಿಗೆ ಸಾಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಪ್ಪ-ಅಮ್ಮನ ಪಕ್ಕದಲ್ಲೇ ಪುನೀತ್ ಮಣ್ಣಾಗಲಿದ್ದಾರೆ. ಕುಟುಂಬಸ್ಥರು ಮತ್ತು ಅವರ ಆಪ್ತ ವಲಯಕ್ಕೆ ಮಾತ್ರ ಇಲ್ಲಿಗೆ ತೆರಳಲು ಅವಕಾಶ ಇದೆ. ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋದ ಒಳಗಡೆಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.
ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ಕಾರ್ಯ ನೆರವೇರಿಸಲಿದ್ದಾರೆ. ರಾಜ್‌ಕುಮಾರ್ ಕುಟುಂಬ ಸದಸ್ಯರು ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದು, ಸಕಲ ಸಿದ್ಧತೆ ನಡೆಸಿದ್ದಾರೆ. ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಅಂತ್ಯಕ್ರಿಯೆ ನಡೆಯುವ ಜಾಗ ಇಕ್ಕಟ್ಟಾಗಿದ್ದು, ಅಲ್ಲಿ ಕುಟುಂಬಸ್ಥರಿಗೆ ಮತ್ತು ಕೆಲವೇ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗುವುದು. ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಸ್ಟುಡಿಯೊದ ಹೊರಭಾಗದಲ್ಲಿ 12 ಕಡೆಗಳಲ್ಲಿ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು. ಅದರಲ್ಲಿ ಅಂತ್ಯ ಸಂಸ್ಕಾರವನ್ನು ವೀಕ್ಷಿಸುವ ಮೂಲಕ ಅಭಿಮಾನಿಗಳು ಸಹಕರಿಸಬೇಕು’ ಎಂದು ಸಿಎಂ ಮನವಿ ಮಾಡಿದರು.
‘ಪುನೀತ್ ನಿಧನರಾಗಿ ಭಾನುವಾರಕ್ಕೆ ಮೂರನೇ ದಿನ. ಹೀಗಾಗಿ, ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ಆದಷ್ಟು ಬೇಗ ಮುಗಿಸಬೇಕಿದೆ. ಬಳಿಕ ಕುಟುಂಬಸ್ಥರು ಮನೆಗೆ ಹೋಗಿ, ಮರಳಿ ಆ ಸ್ಥಳಕ್ಕೆ ಬಂದು ಹಾಲು ತುಪ್ಪ ಬಿಡಬೇಕಿದೆ. ಹೀಗಾಗಿ, ಅಂತ್ಯಕ್ರಿಯೆ ನಡೆಯಲಿರುವ ಸ್ಥಳದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು.
ಮೆರವಣಿಗೆ ಮಾರ್ಗ : ಕಂಠೀರವ ಕ್ರೀಡಾಂಗಣದಿಂದ ಆರ್ಆರ್ಎಂಆರ್ ರಸ್ತೆ, ಹಡ್ಸನ್ ಸರ್ಕಲ್, ಪೊಲೀಸ್ ಕಾರ್ನರ್, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್.ಸರ್ಕಲ್ ಎಡ ತಿರುವು, ಶೇಷಾದ್ರಿ ರಸ್ತೆ, ಮಹಾರಾಣಿ ಮೇಲ್ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್, ಟಿ.ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಅಪ್ ಱಂಪ್, ಪಿ.ಜಿ.ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್, ಬಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್, ಮಾರಮ್ಮ ವೃತ್ತ, ಬಿಹೆಚ್‌ಇಎಲ್ ಸರ್ವೀಸ್ ರಸ್ತೆ, ಬಿಹೆಚ್‌ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೋ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ್ ಥಿಯೇಟರ್ ಜಂಕ್ಷನ್, ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಸಿಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‌ಟಿಐ ವೃತ್ತ ಮಾರ್ಗದಲ್ಲಿ ಕಂಠೀರವ ಸ್ಟುಡಿಯೋಗೆ ಸ್ಥಳಾಂತರ ಮಾಡಲಾಗುತ್ತದೆ.
ವಾಹನಗಳಿಗೆ ಮಾರ್ಗ ಬದಲಾವಣೆ : ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಅದು ಈ ಕೆಳಗಿನಂತಿದೆ.
- ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ವಾಹನಗಳನ್ನು ನೈಸ್ ರಸ್ತೆ, ನಾಯಂಡಹಳ್ಳಿ, ನಾಗರಬಾವಿ ಮತ್ತು ಸುಮನಹಳ್ಳಿ ಜಂಕ್ಷನ್ಗೆ ಬದಲಾಯಿಸಿದ್ದಾರೆ.
- ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಮೇಲುಸೇತುವೆ ಮೇಲೆ ಹೋಗುವ ವಾಹನಗಳು ಮತ್ತು ತುಮಕೂರು ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ಸಿಎಂಟಿಐ ಜಂಕ್ಷನ್.
- ಜಾಲಹಳ್ಳಿ ಕ್ರಾಸ್ ಕಡೆಯಿಂದ ರಾಜಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು ಟಿವಿಎಸ್ ಕ್ರಾಸ್ ಮತ್ತು ಸೋನಾಲ್ ಗಾರ್ಮೆಂಟ್ಸ್ ಬಳಿ.
- ಮಹಾಲಕ್ಷ್ಮಿ ಬಡಾವಣೆ ಕಡೆಯಿಂದ ರಾಜಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು ಕೃಷ್ಣಾನಂದ ನಗರ ಜಂಕ್ಷನ್ ಬಳಿ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.