ತಿರುವನಂತಪುರಂ: ಪ್ರೇಮ ನಿವೇದನೆಯನ್ನು ತಿರಸ್ಕರಿಸುವ ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕಿರುಕುಳ ನೀಡಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರಿಗೆ ಕಿರುಕುಳ ನೀಡುವುದು ಮತ್ತು ಅವರನ್ನು ಹಿಂಬಾಯಿಸುವುದು ಮಾಡುವವರನ್ನು ಪೊಲೀಸರು ನಿಗಾ ಇಡುತ್ತಾರೆ. ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ ಸಂದರ್ಭದಲ್ಲಿ ಮಹಿಳೆಯರಿಗೆ ತೊಂದರೆ ಮಾಡುವ ಏನನ್ನೂ ಯೋಜಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಂತವರ ಮೇಲೆ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇರಳ ರಾಜ್ಯದಲ್ಲಿ ಪ್ರೇಮಿಗಳು ಅಥವಾ ಅವರ ಪ್ರೇಮ ನಿವೇದನೆಗಳನ್ನು ತಿರಸ್ಕರಿಸಿದ ಯುವತಿಯರ ಸರಣಿ ಕೊಲೆಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಯು ಅತ್ಯಂತ ಮಹತ್ವ ಪಡೆದುಕೊಂಡಿದೆ.
ಇದನ್ನು ಓದಿ: ಸನ್ಯಾಸಿನಿಯರ ಮೇಲಿನ ಹಲ್ಲೆ ಕುರಿತ ಪಿಯೂಷ್ ಹೇಳಿಕೆ ʻನಾಚಿಕೆಗೇಡುʼ : ಪಿಣರಾಯಿ ವಿಜಯನ್
ಇತ್ತೀಚಿಗೆ 24 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿಯನ್ನು ಎರ್ನಾಕುಲಂ ಜಿಲ್ಲೆಯ ಕೋತಮಂಗಲಂನಲ್ಲಿ ಸಾಮಾಜಿಕ ಜಾಲತಾಣದ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಕೊಂದಿದ್ದನು. ಜುಲೈ 30 ರಂದು ಹಾಡ ಹಗಲಿನಲ್ಲಿ ಈ ಘಟನೆ ನಡೆದಿತ್ತು. ಯುವತಿ ತಂಗಿದ್ದ ಮನೆಗೆ ನುಗ್ಗಿದ ದುಷ್ಕರ್ಮಿ ಗುಂಡು ಹಾರಿಸಿದ್ದ ಘಟನೆ ನಡೆದಿತ್ತು.
ಈ ಘಟನೆಯನ್ನು ಸದನದ ಗಮನಕ್ಕೆ ತಂದ, ತೃಕ್ಕಾಕರ ಶಾಸಕ ಪಿ ಟಿ ಥಾಮಸ್ (ಕಾಂಗ್ರೆಸ್) ಸಮಾಜದಲ್ಲಿ ಯುವತಿಯರು ಮತ್ತು ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಪೊಲೀಸರ ಗುಪ್ತಚರ ವಿಭಾಗವು ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದರು.
ಪ್ರೀತಿಯ ಹೆಸರಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಪೊಲೀಸರು ಯಾವುದೇ ಮೃದು ನಿಲುವು ತಾಳುವುದಿಲ್ಲ ಎಂದು ಪಿಣರಾಯಿ ವಿಜಯನ್ ಸದನದ ಗಮನಕ್ಕೆ ತಂದರು. “ಪ್ರೇಮ ನಿವೇದನೆಗಳನ್ನು ನಿರಾಕರಿಸಿದ ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಿಕೊಳ್ಳಲು ಪೊಲೀಸರು ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಸೈಬರ್ ವೇದಿಕೆಗಳ ಮೂಲಕವೂ ಮಹಿಳೆಯರನ್ನು ಬಲೆಗೆ ಬೀಳಿಸಲು ಪ್ರಯತ್ನಪಡುವವರು ಮತ್ತು ಅವರ ಮಾನಸಿಕ ಪರಿಸ್ಥಿತಿಗಳ ಬಗ್ಗೆಯೂ ತನಿಖಾಧಿಕಾರಿಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಿಬೇಕಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯ ಪಟ್ಟರು.
ಕಾಂಗ್ರೆಸ್ ಶಾಸಕ ಮತ್ತು ಮಾಜಿ ಗೃಹ ಸಚಿವ ತಿರುವಂಚೂರು ರಾಧಾಕೃಷ್ಣನ್ ಸಹ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ದೌರ್ಜನ್ಯದ ದೂರುಗಳ ತನಿಖೆಗಾಗಿ ಮಹಿಳಾ ಅಧಿಕಾರಿಗಳ ಹೆಚ್ಚಿನ ಪರಿಣಾಮಕಾರಿ ತನಿಖಾ ತಂಡಗಳನ್ನು ರಚಿಸುವ ಅಗತ್ಯವಿದೆ ಎಂದು ಪ್ರಸ್ತಾಪಿಸಿದರು.