ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಎರಡು ನೇತ್ರಗಳು ನಾಲ್ವರು ಜೀವಕ್ಕೆ ಬೆಳಕು ನೀಡಿವೆ. ಡಾ. ರಾಜ್ ಕುಮಾರ್ ಅವರ ಹಾದಿಯಂತೆ ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಅಳವಡಿಸುವ ಮೂಲಕ ಬೆಳಕಾಗಿದೆ.
ಈ ಬಗ್ಗೆ ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ಕಣ್ಣಿನ ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಪದರಗಳನ್ನು ಬೇರ್ಪಡಿಸುವ (ಸೀಳುವ) ಮೂಲಕ ಪ್ರತಿ ಕಣ್ಣಿನಿಂದ ತಲಾ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಬಳಸಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಇದನ್ನು ಓದಿ: ಅಪ್ಪು ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ತಮಿಳು ನಟ ವಿಶಾಲ್
ಕಣ್ಣಿನ ಮೇಲ್ಪದರದ ಕಾರ್ನಿಯಲ್ ಕಾಯಿಲೆ ಇರುವ ಇಬ್ಬರು ರೋಗಿಗಳಿಗೆ ಮೇಲ್ಪದರವನ್ನು ಕಸಿ ಮಾಡಲಾಗಿದೆ. ಆಳವಾದ ಪದರವನ್ನು ಮಾತ್ರ ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಪದರದ ಕಾಯಿಲೆ ಇರುವ ರೋಗಿಗಳಿಗೆ ಕಸಿ ಮಾಡಲಾಗಿದೆ. ಆದ್ದರಿಂದ, ನಾಲ್ಕು ವಿಭಿನ್ನ ರೋಗಿಗಳಿಗೆ ದೃಷ್ಟಿ ಪುನಃಸ್ಥಾಪಿಸಲು ನಾವು ಎರಡು ಕಾರ್ನಿಯಾಗಳಿಂದ ನಾಲ್ಕು ವಿಭಿನ್ನ ಕಸಿಗಳನ್ನು ಮಾಡಿದ್ದೇವೆ. ಈ ರೀತಿ ಒಂದೇ ದಿನ ಒಬ್ಬರ ಕಣ್ಣನ್ನು ನಾಲ್ವರಿಗೆ ಕಸಿ ಮಾಡಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ಭುಜಂಗ ಶೆಟ್ಟಿ ತಿಳಿಸಿದರು.
ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪುನೀತ್ ರಾಜ್ ಕುಮಾರ್ ಅವರ ಎರಡು ಕಣ್ಣುಗಳನ್ನು ಸಂಗ್ರಹ ಮಾಡಿ ಅನ್ವೇಷಣೆ ಮಾಡಿದೆವು. ಎರಡೂ ಕಣ್ಣು ತುಂಬಾ ಉತ್ತಮ ಸ್ಥಿತಿಯಲ್ಲಿದ್ದವು. ಮರು ದಿನವೇ ಬೇಕಾದ ನಾಲ್ವರು ರೋಗಿಗಳನ್ನು ಕರೆಸಿಕೊಂಡು ಟ್ರಾನ್ಸ್ ಪ್ಲೆಂಟ್ ಮಾಡಿದೆವು. ಶನಿವಾರ ನಾಲ್ವರ ಬದುಕಿನಲ್ಲಿ ಪುನೀತ್ ದೃಷ್ಟಿ ನೀಡಿ ಪುನೀತರಾಗಿದ್ದರು. ಡಾ. ಯತೀಶ್, ಶರಣ್, ಹರ್ಷಾ ನೇತೃತ್ವದ ತಂಡ ಸರ್ಜರಿ ಮಾಡಿದ್ದು, ದೃಷ್ಟಿ ಪಡೆದ ನಾಲ್ವರು ಚೆನ್ನಾಗಿದ್ದಾರೆ ಎಂದು ಭುಜಂಗಶೆಟ್ಟಿ ಇದೇ ವೇಳೆ ತಿಳಿಸಿದರು.
ಇದನ್ನು ಓದಿ: ‘ಪೃಥ್ವಿ’ಯ ಮಡಿಲು ಸೇರಿದ ‘ಬೆಟ್ಟದ ಹೂ’
ಪುನೀತ್ ರಾಜಕುಮಾರ್ ಅವರ ನೇತ್ರಗಳನ್ನು ಕೂಡಲೇ ನಾಲ್ವರಿಗೆ ಬಳಕೆ ಮಾಡುವ ಹಿಂದೆ ನಾರಾಯಣ ನೇತ್ರಾಲಯ ಸಾಕಷ್ಟು ಶ್ರಮ ವಹಿಸಿದೆ. ಒಂದೇ ದಿನದಲ್ಲಿ ನಾಲ್ವರು ರೋಗಿಗಳನ್ನು ಹುಡುಕಬೇಕಿತ್ತು. ಈ ವೇಳೆ ಮಿಂಟೋ ಆಸ್ಪತ್ರೆಯ ಡಾ. ಸುಜಾತಾ ರಾಥೋಡ್ ಸಹಾಯ ಮಾಡಿದ್ದಾರೆ. ಅಂತಿಮವಾಗಿ ನಮ್ಮ ವೈದ್ಯರು ದಿನಪೂರ್ತಿ ಶ್ರಮ ವಹಿಸಿ ಸೂಕ್ತ ರೋಗಿಗಳನ್ನು ಹುಡುಕಿ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಡಾ. ಭುಜಂಗಶೆಟ್ಟಿ ಸ್ಪಷ್ಟಪಡಿಸಿದರು.
ಡಾ. ರಾಜ್ ಕುಮಾರ್ ಇಡೀ ಕುಟುಂಬ ನೇತ್ರದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. 2006 ರಲ್ಲಿ ಡಾ. ರಾಜ್ ಕುಮಾರ್ ಅವರು ಎರಡು ಕಣ್ಣು ದಾನ ಮಾಡಿದ್ದರು. 2017 ರಲ್ಲಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ನೇತ್ರ ದಾನ ಮಾಡಿದ್ದರು. ಇದೀಗ ಪುನೀತ್ ರಾಜ್ ಕುಮಾರ್ ತಮ್ಮ ಎರಡು ಕಣ್ಣು ದಾನ ಮಾಡಿದ್ದು, ಇಡೀ ಕುಟುಂಬದ ನೇತ್ರದಾನ ಕಾರ್ಯ ಶ್ಲಾಘನೀಯ ಎಂದು ಡಾ. ಭುಜಂಗಶೆಟ್ಟಿ ಸ್ಮರಿಸಿದರು.