ಬೆಂಗಳೂರು: ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ, ಸರಳ ಬದುಕು, ಸಾಮಾಜಿಕ ಕಾರ್ಯ ಮತ್ತು ಸಾಧನೆಯಿಂದ ಜನಮಾನಸದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕದ ಅತ್ಯುನ್ನತ ಮಹತ್ವ ಪ್ರಶಸ್ತಿಯಾದ ʻಕರ್ನಾಟಕ ರತ್ನʼ ವನ್ನು ಪ್ರಧಾನ ಮಾಡಲಾಯಿತು.
ಸರ್ಕಾರದ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಬೆಂಗಳೂರಿನ ವಿಧಾನಸೌಧದ ಮುಂದೆ ಇಂದು(ನವೆಂಬರ್ 01) ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಒಳಗೊಂಡು ಸಹಸ್ರಾರು ಜನತೆ ಸಾಕ್ಷಿಯಾದರು. ಬರೋ ಎಂದು ಸುರಿದ ಮಳೆಯನ್ನೂ ಲೆಕ್ಕಿಸದೇ ಸಹಸ್ರಾರು ಮಂದಿ ತಮ್ಮ ನೆಚ್ಚಿನ ನಟನಿಗೆ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹರ್ಷೋದ್ಘಾರದಿಂದ ಆನಂದಿಸಿದರು.
ಕಾರ್ಯರ್ಕಮದಲ್ಲಿ ಮುಖ್ಯ ಅಥಿತಿಯಾಗಿ ಇನ್ಫೋಸಿಸ್ ಪ್ರತಿಷ್ಟಾನದ ಡಾ.ಸುಧಾಮೂರ್ತಿ, ನಟ ರಜನಿಕಾಂತ್, ಜ್ಯೂನಿಯರ್ ಎನ್‌ಟಿಆರ್, ಪುನೀತ್ ಸಹೋದರರಾದ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬದ ಎಲ್ಲ ಸದಸ್ಯರು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಕಲಿಯುಗದ ಅಪ್ಪು, ದೇವರ ಮಗು: ರಜನಿಕಾಂತ್
ತಮಿಳು ಹಿರಿಯ ನಟ ರಜನಿಕಾಂತ್ ಮಾತನಾಡಿ, ಅತೀ ಕಡಿಮೆ ವಯಸ್ಸಿನಲ್ಲೇ ಹೇಗೆ ಬದುಕಬೇಕು? ಎಂದು ತೋರಿಸಿ ಕೊಟ್ಟ ಪುನೀತ್ ರಾಜ್ ಕುಮಾರ್ ದೇವರ ಮಗು. ಅವರು ಕಲಿಯುಗ ಅಪ್ಪು ಆಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಕರ್ನಾಟಕ ರತ್ನ’ ಇದು ಬಹಳ ಶ್ರೇಷ್ಟ ಪ್ರಶಸ್ತಿ. ಈ ಶ್ರೇಷ್ಠ ಪ್ರಶಸ್ತಿಯನ್ನು ದಿವಂಗತ ಡಾ. ರಾಜಕುಮಾರ್ ಅವರಿಗೆ ಇದೇ ವೇದಿಕೆಯಲ್ಲಿ ನೀಡುವಾಗಲೂ ಸಹ ಅಂದು ಮಳೆ ಬಂದಿತ್ತು. ರಾಷ್ಟ್ರಕವಿ ಕುವೆಂಪು, ತುಮಕೂರಿನ ಶಿವಕುಮಾರ ಸ್ವಾಮೀಜಿ ನೀಡಲಾಗಿತ್ತು. ಅವರ ನಂತರ ಅತೀ ಕಡಿಮೆ ವಯಸ್ಸಿನಲ್ಲೇ ಸಾಧನೆ ಮಾಡಿದ ಡಾ.ಪುನೀತ್ ರಾಜಕುಮಾರ್ ಅವರಿಗೆ ನೀಡಲಾಗುತ್ತಿದೆ.
1979ರಲ್ಲಿ ಶಬರಿಮಲೆಗೆ ಮಾಲೆ ಹಾಕಿ ಬರುತ್ತಿದ್ದ ಡಾ. ರಾಜಕುಮಾರ್ ಅವರ ಜೊತೆಗೆ ಅಂದು ಪುನೀತ್ ರಾಜ್ ಕುಮಾರ್ ಸಹ ಆಗಮಿಸಿದ್ದರು. ಆಗ ಪುನೀತ್‌ಗೆ ನಾಲ್ಕು ವರ್ಷ. ಅಪ್ಪುನನ್ನು 48 ಕಿಲೋಮಿಟರ್ ಹೊತ್ತುಕೊಂಡೆ ಡಾ. ರಾಜ್ ನಡೆದಿದ್ದರು. ಆಗ ಮೊದಲ ಬಾರಿಗೆ ಅಪ್ಪುನನ್ನು ನೋಡಿದ್ದೆ.
ನಂತರ ಅಪ್ಪು ಚಿತ್ರದಲ್ಲಿ ಪುನೀತ್ ಅವರ ನಟನೆ, ಡಾನ್ಸ್ ನೋಡಿ ರೋಮಾಂಚನಗೊಂಡಿದ್ದೆ. ಡಾ. ರಾಜಕುಮಾರ್ ಅವರ ಮಾತಿನಂತೆ ನಾನು ಅಪ್ಪು ಚಿತ್ರ ಶತದಿನೋತ್ಸವ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ್ದೇ ಎಂದು ನೆನಪು ಮಾಡಿಕೊಂಡರು.
ಪುನೀತ್ ಎಲ್ಲರಿಗೂ ಮಾದರಿ
ಪುನೀತ್ ಅವರ ನಿಧನ ವೇಳೆ ನನಗೆ ಆಪರೇಷನ್ ಆಗಿದ್ದರಿಂದ ಮೂರು ದಿನದ ನಂತರ ತಡವಾಗಿ ವಿಷಯ ಗೊತ್ತಾಗಿ ತೀವ್ರ ಬೇಸರವಾಯಿತು. ಅಪ್ಪುವಿನ ಅಂತಿಮ ದರ್ಶನ ಪಡೆಯಲು ಮೂರು ದಿನ ಲಕ್ಷಾಂತರ ಮಂದಿ ಆಗಮಿಸಿದ್ದರು. ಇಷ್ಟು ಜನ ಆರಾಧನೆಯಿಂದ ಅಪ್ಪು ಅವರ ಸಾಮಾಜಿಕ ಕಾರ್ಯಗಳು, ಆರ್ಥಿಕ ಸಹಾಯ, ಅವರ ವ್ಯಕ್ತಿತ್ವ, ಸರಳತೆ ಇನ್ನಷ್ಟು ಜಗತ್ತಿಗೆ ತಿಳಿಯುವಂತಾಯಿತು ಎಂದು ರಜನೀಕಾಂತ್ ತಿಳಿಸಿದರು.
ಕಲಿಯುಗಕ್ಕೆ ಪುನೀತ್ ದೇವರ ಮಗು, ನಚಿಕೆತ, ಮಾರ್ಕಾಂಡೇಯರ ಸಾಲಿಗೆ ಸೇರುವವರು ಅವರು. ಎನ್‌ಟಿಅರ್, ಎಂಜಿಆರ್, ಶಿವಾಜಿಗಣೇಶನ್, ರಾಜ್ ಕುಮಾರ್ ಅವರು 50 ವರ್ಷದಲ್ಲಿ ಸಾಧಿಸಿದ್ದನ್ನು ಅಪ್ಪು 20 ವರ್ಷಗಳಲ್ಲಿ ಸಾಧಿಸಿದ್ದರು. ಅಪ್ಪು ಯಾವಾಗಲೂ ನಮ್ಮೊಂದಿಗೇ ಇರ್ತಾರೆ. ಕೇವಲ ನಟನೆಯಿಂದಷ್ಟೇ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಆದರ್ಶಗಳ ಮೂಲಕ ಗೆಲ್ಲಬಹುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜ್ಯೂನಿಯರ್ ಎನ್‌ಟಿಆರ್ ಮಾತನಾಡಿ, ನಾನು ನನ್ನ ಸಾಧನೆಯಿಂದಾಗಿ ಇಲ್ಲಿ ಬಂದಿಲ್ಲ. ನಾನು ಹೆಮ್ಮೆಯ ಗೆಳೆಯನಾಗಿ ಇಲ್ಲಿಗೆ ಬಂದಿದ್ದೇನೆ. ಒಬ್ಬ ವ್ಯಕ್ತಿಗೆ ಉಪನಾಮ ಎಂಬುದು ಪರಂಪರೆಯಿಂದ ಬರುತ್ತದೆ. ವ್ಯಕ್ತಿತ್ವ ಸ್ವಂತ ಸಂಪಾದನೆಯಾಗಿರುತ್ತದೆ. ಸ್ವಂತ ವ್ಯಕ್ತಿತ್ವದಿಂದ ನಗುವಿನಿಂದಲೇ ಒಂದು ರಾಜ್ಯ ಗೆದ್ದ ರಾಜ ಪುನೀತ್ ರಾಜ್ ಕುಮಾರ್, ಅವರು ಎಲ್ಲಕ್ಕೂ ಮಿಗಿಲಾಗಿ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು. ಪುನೀತ್ ನಗುವಿನ ಒಡೆಯ ಅವರ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ಪಡೆದಿದ್ದರು, ಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜ್ ಕುಮಾರ್ ಅವರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಮ್ಮೆಯ ಗೆಳೆಯನಾಗಿ ನಿಂತಿದ್ದೇನೆ, ಈ ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ, ಡಾ. ರಾಜ್ ಕುಟುಂಬಕ್ಕೆ ಧನ್ಯವಾದಗಳು ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಗಾಯಕರಾದ ವಿಜಯಪ್ರಕಾಶ್, ಚೈತ್ರ ಅವರ ತಂಡದವರು ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡ ಗೀತೆಗಳು, ಅದರಲ್ಲೂ ಡಾ. ಪುನೀತ್ ರಾಜ್ ಕುಮಾರ್ ನಟಿಸಿದ ಚಿತ್ರಗಳ ಗೀತೆಗಳನ್ನು ಹಾಡಿ ಸ್ಮರಿಸಿಕೊಳ್ಳಲಾಯಿತು. ಅಭಿಮಾನಿಗಳ ಜನಸಾಗರದಲ್ಲಿ ಕನ್ನಡ ಬಾವುಟಗಳು, ಅಪ್ಪು ಭಾವಚಿತ್ರವುಳ್ಳ ಕನ್ನಡ ಬಾವುಟಗಳು ರಾರಾಜಿಸಿದವು.
ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಶುರುವಾದ ಮಳೆಯ ನಡುವೆಯು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಸರಳವಾಗಿ ನಡೆಯಿತು. ಮಳೆಯಿಂದಾಗಿ 6.30ಕ್ಕೆ ಪೂರ್ಣಗೊಳ್ಳಬೇಕಿದ್ದ ಸಮಾರಂಭ 5.30ಕ್ಕೆ ಮುಕ್ತಾಯವಾಯಿತು.