ಫೆ.20ರಿಂದ ಪುನೀತ್‌ ರಾಜ್‌ಕುಮಾರ್‌ ವೇದಿಕೆಯಲ್ಲಿ ಕಿರು ಚಿತ್ರೋತ್ಸವ ಪ್ರದರ್ಶನ

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ನಡೆಯುತ್ತಿರುವ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ನಾಟಕ ಪ್ರದರ್ಶನಗಳು ಒಳಗೊಂಡು ವಿವಿಧ ಕಾರ್ಯಕ್ರಮಗಳು ಇರಲಿದೆ. ಈ ಬಾರಿ ಕನ್ನಡ ಚಿತ್ರರಂಗದ ನಟ ದಿವಂಗತ ಡಾ. ಪುನೀತ್‌ ರಾಜ್‌ಕುಮಾರ್‌ ವೇದಿಕೆಯಲ್ಲಿ ಮೂರು ದಿನಗಳು 5 ಕಿರು ಚಿತ್ರಗಳನ್ನು ಪ್ರದರ್ಶನಗೊಳ್ಳಲಿದೆ.

ರಂಗಭೂಮಿಯಲ್ಲಿಯೇ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಲಾವಿದರೇ ಚಿತ್ರಗಳನ್ನು ಸಿದ್ದಪಡಿಸಿರುವುದು ಅತ್ಯಂತ ವಿಶೇಷವಾದದ್ದು, ರಂಗಭೂಮಿ ಮತ್ತು ಚಿತ್ರರಂಗದಲ್ಲಿರುವ ಅಸಂಖ್ಯಾ ಮಂದಿ ಒಂದರೊಳಗೊಂದು ಪೂರಕವಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುತ್ತಾರೆ.

ಕಿರು ಚಿತ್ರೋತ್ಸವ ಸಮಿತಿಯ ಸಂಯೋಜಕರಾಗಿರುವ ತಾಯಿ ಲೋಕೇಶ್‌ ಈ ಬಗ್ಗೆ ಮಾಹಿತಿ ನೀಡಿದ್ದು, ರಂಗನಿರಂತರ ಸಾಂಸ್ಕೃತಿಕ ಸಂಘ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ರಂಗಭೂಮಿ ಹಿನ್ನೆಲೆ ಹೊಂದಿರುವವರೇ ಚಿತ್ರಗಳನ್ನು ನಿರ್ಮಿಸಿರುವುದು ವಿಶೇಷ. ರಂಗನಿರಂತರ ಬಳಗದ ಪ್ರಮುಖರು ಚಿತ್ರೋತ್ಸವದ ಬಗ್ಗೆ, ಕಿರುಚಿತ್ರಗಳ ಆಯ್ಕೆ ಬಗ್ಗೆ ಸಾಕಷ್ಟು ಗಮನ ನೀಡಿ ಆದ್ಯತಾ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಇದನ್ನು ಓದಿ: ಫೆ.19ರಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ; 4ದಿನ – 4ವೇದಿಕೆ – 6ನಾಟಕ – 5ಕಿರುಚಿತ್ರ – 5ಕಾರ್ಯಕ್ರಮ

ಅದರಲ್ಲೂ ಪ್ರದರ್ಶನಗೊಳ್ಳುತ್ತಿರುವ 5 ಕಿರುಚಿತ್ರಗಳಲ್ಲಿ ಮೂರು ಚಿತ್ರಗಳಿಗೆ ಪ್ರಶಸ್ತಿ ಲಭಿಸಿರುವುದು ವಿಶೇಷ. ಗ್ಲಿ, ಘಮ ಘಮ ಮತ್ತು ನಮ್‌ ಶೆಡ್ಡು ಚಿತ್ರಗಳು ಇತ್ತೀಚಿಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಅಖಿಲ ಭಾರತ ಸಮ್ಮೇಳನದ ಪೂರ್ವಭಾವಿ ಹಮ್ಮಿಕೊಂಡಿದ್ದ ಕಿರು ಚಿತ್ರ ಸ್ಪರ್ಧಾ ವಿಭಾಗದಲ್ಲಿ ಮೂರು ಚಿತ್ರಗಳು ಪ್ರಶಸ್ತಿಯನ್ನು ಗಳಿಸಿದೆ ಎಂದರು.

ಕಿರು ಚಿತ್ರಗಳ ಆಯ್ಕೆಗೆ ಸಂಬಂಧಿಸಿದಂತೆ ಹಲವರು ಸಹಕಾರ ನೀಡಿದ್ದು, ಅದರಲ್ಲಿ ಮುಖ್ಯವಾಗಿ ಚಿತ್ರ ನಿರ್ದೇಶಕ ಕೇಸರಿ ಹರವೂ, ಹಿರಿಯ ರಂಗಕರ್ಮಿ, ಸಮಯದಾಯ ತಂಡದ ಸಿ ಕೆ ಗುಂಡಣ್ಣ ಮತ್ತು ಮುರಳಿ ಮೋಹನ್‌ ಕಾಟಿ ಅವರುಗಳು. ಅಲ್ಲದೆ, ರಂಗೋತ್ಸವದ ವಿವಿಧ ರಂಗಕರ್ಮಿಗಳು ಸಹ ಜೊತೆಯಾಗಿದ್ದಾರೆ ಮತ್ತು ರಂಗಕರ್ಮಿ ಅಕ್ಷರ ಅವರು ಸಹ ಕಿರು ಚಿತ್ರೋತ್ಸವ ಸಂಯೋಜನೆಯ ಭಾಗವಾಗಿದ್ದಾರೆ ಎಂದು ತಿಳಿಸಿದರು.

ಕಿರು ಚಿತ್ರಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪುರುಷರ ವಿಶ್ರಾಂತಿ ಕೊಠಡಿಯಲ್ಲಿ ಪ್ರತಿದಿನ ಸಂಜೆ 4.00 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಪುನೀತ್‌ ರಾಜ್‌ಕುಮಾರ್‌ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ ಚಿತ್ರಗಳು;

ದಿನಾಂಕ : 20.02.2023, ಸೋಮವಾರ

ಗ್ಲೀ  Not Everyones joy

ರಚನೆ, ನಿರ್ದೇಶನ: ಕವಿತ ಬಿ. ನಾಯಕ್

ಭಾಷೆ: ಕನ್ನಡ / ಅವಧಿ: 6:58 ನಿಮಿಷ

ಭಾರತೀಯ ಮನೆಗಳಲ್ಲಿ ಮಗುವಿನ ಜನನದೊಂದಿಗೆ ಆಗುವ ಸಂತೋಷ ಮತ್ತು ಆಚರಣೆಯ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಆದರೆ, ಆ ಮಗುವನ್ನು ಹೆರುವ ಮಹಿಳೆಯರ ಹಕ್ಕು, ಭಾವನೆಗಳನ್ನು ಮತ್ತು ಅವಳ ನೋವನ್ನು ಪುರುಷ ಪ್ರಾಬಲ್ಯದ ಸಮಾಜ ಕಡೆಗಣಿಸುತ್ತದೆ. ಚಿತ್ರದ ಕಥಾನಾಯಕಿ ಭವಾನಿ ತಮ್ಮ ಅಭಿನಯದ ಮೂಲಕ ಈ ಸೂಕ್ಷ್ಮ ಸಮಸ್ಯೆಗಳನ್ನು ಅದ್ಭುತವಾಗಿ ವ್ಯಕ್ತಪಡಿಸಿದ್ದಾರೆ.

ಚಿತ್ರದ ನಿರ್ದೇಶಕಿ ಕವಿತ ಬಿ. ನಾಯಕ್ ರಂಗಭೂಮಿ ಕಲಾವಿದೆ. ಪೃಥ್ವಿ ಕೊಣನೂರು ಅವ ಹದಿನೇಳೆಂಟು(2018) ಕನ್ನಡ ಚಿತ್ರದಲ್ಲಿ ಸಹಾಯಕಿ ನಿರ್ದೇಶಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

ಚಿತ್ರದ ಕಲಾವಿದರು: ರಿಯಾ ಎಸ್ ನಾರಾಯಣ್, ಮಹೇಶ್ ಎಸ್.ಪಿ., ಮಾಲತೇಶ್, ನವ್ಯ ಶ್ರೀ ಜಿ.ಬಿ., ಪಾರ್ವತಮ್ಮ, ರೋಹಿಣಿ, ಧೃವ, ಮನೋಜ್, ಜಾವೀದ್.

ನಿರ್ಮಾಣ: ಆನಂದ್ ಎಂ. ಎ.ಕೆ. ಪ್ರೊಡಕ್ಷನ್, ಸಂಕಲನ/ ಡಿಐ: ಚಂದನ್ ಪಿ., ಡಿಓಪಿ: ಮಧು ಸುಗತ, ಸಂಗೀತ: ಎವಿ ರೆಕಾರ್ಡ್ ಸ್ಟುಡಿಯೋ.

ಘಮ ಘಮ

ಕಥೆ, ಚಿತ್ರಕಥೆ, ನಿರ್ದೇಶನ: ಮಾಲತೇಶ್  ಹೆಚ್. ವಿ.

ಭಾಷೆ: ಕನ್ನಡ / ಅವಧಿ: 6:55 ನಿಮಿಷ

ನಗರ ಜೀವನದ ದಿನನಿತ್ಯದ ಜಂಜಾಟದಲ್ಲಿ, ಗಮನಕ್ಕೆ ಬಾರದೆ ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳ ಸೂಕ್ಷ್ಮ ಎಳೆಯನ್ನಾಧರಿಸಿದ ಕಿರು (ವಿಡಂಬನಾತ್ಮಕ) ಚಿತ್ರ “ಘಮ ಘಮ”. ಇಲ್ಲಿ, ಕೆಳ ವರ್ಗದವರ ಬಗೆಗಿನ, ಮಧ್ಯಮ ವರ್ಗದ ಹಾಗೂ  ಮೇಲ್ಮಧ್ಯಮ ವರ್ಗದ ಜನರ ಪಕ್ಷಪಾತಿ ಧೋರಣೆಯನ್ನು ಚಿತ್ರಿಸಲಾಗಿದೆ.

ಚಿತ್ರದ ನಿರ್ದೇಶಕ ಮಾಲತೇಶ್ ಹೆಚ್‌.ವಿ., ಸಕಲೇಶಪುರ ಮೂಲದವರು. ಸಿನಿಮಾ ಮತ್ತು ರಂಗಭೂಮಿಯ ಪ್ರತಿಭಾನ್ವಿತ ನಟ, ನಿರ್ದೇಶಕ. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ವಿಭಾಗದ ಸ್ನಾತಕೋತ್ತರ ಪದವೀಧರ. ಸಮುದಾಯ, ಸಂಚಾರಿ, ಕಲಾಮೈತ್ರಿ, ದರ್ಪಣ ತಂಡಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರದ ಕಲಾವಿದರು: ಶ್ವೇತ ಮೂರ್ತಿ, ಪ್ರತಿಮಾ ಲಿಂಗರಾಜ್, ಶ್ವೇತ ಮಧು

ಛಾಯಾಗ್ರಹಣ: ಕೀರ್ತಿ, ಸ್ಥಿರ ಛಾಯಾಗ್ರಹಣ: ಲಹರಿ, ಸಂಕಲನ: ಕೀರ್ತಿ ತೊಂಡಗೆರೆ

ದಿನಾಂಕ : 21.02.2023, ಮಂಗಳವಾರ

ನಮ್ ಶೆಡ್ಡು

ಪರಿಕಲ್ಪನೆ ಮತ್ತು ನಿರ್ದೇಶನ: ಲಹರಿ, ಯಶ್ವಂತ್

ಭಾಷೆ: ಕನ್ನಡ / ಅವಧಿ: 12:40 ನಿಮಿಷ

ಬೆಂಗಳೂರಿನ ಕೊಳಚೆ ಪ್ರದೇಶದಲ್ಲಿ ವಾಸಿಸುವ ಮಕ್ಕಳ ಜೀವನದ ಅನುಭವದಿಂದ ಹುಟ್ಟಿಕೊಂಡ ಕಥೆ ಇದು. ಏಕಾಏಕಿ ಕೊಳೆಚೆ ಪ್ರದೇಶ ಖಾಲಿ ಮಾಡುವ ಪರಿಸ್ಥಿತಿ ಎದುರಾದಗ ಅಲ್ಲಿನ ನಾಲ್ಕು ಹುಡುಗಿಯರು ಪಟ್ಟ ನೋವು ಹಾಗೂ ಮನೆ ಕಳೆದುಕೊಳ್ಳುವ ಭಾವನಾತ್ಮಕ ಪ್ರಯಾಣದ ಸುತ್ತ ಕಥೆ ಸುತ್ತುತ್ತದೆ.

ರಂಗಭೂಮಿ ಹಾಗೂ ನೃತ್ಯ ಕಲಾವಿದೆ ಲಹರಿ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ದೂರದರ್ಶನ ಹಾಗೂ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಯಶ್ವಂತ್ ನಿರ್ದೇಶನದ ಪ್ರಥಮ ಚಿತ್ರವಿದು.

ಚಿತ್ರದ ಕಲಾವಿದರು: ಪವಿತ್ರ ಎನ್., ವೆಂಕಟಮ್ಮ, ಮಂಜುಶ್ರೀ, ಅಯ್ಯಮ್ಮ, ರಾಜೇಶ್ವರಿ, ಅಕ್ಷತ, ಹೊನ್ನಪ್ಪ, ಮಲ್ಲಿಕಾರ್ಜುನ, ಕಲ್ಪನ, ಲಕ್ಷ್ಮಿ, ಅಲವಲಪ್ಪ, ಗಂಗಾ, ಮಲ್ಲು, ಭಾಗ್ಯ, ಮಮತ, ಮಹೇಂದ್ರ, ಮಂಜು, ಚೇತನ್, ಮನೋಜ್, ಈರಮ್ಮ, ಶಿವಲಿಂಗಮ್ಮ, ರೇಣುಕಾ, ರಾಜಶೇಖರ, ಸುಂದರಿ, ಕಾವೇರಿ, ದೀಪ, ಮೌನೇಶ್, ಸಿಂಚನ, ಸತೀಶ್ ಎ.

ಕಥೆ, ಚಿತ್ರಕಥೆ ಮತ್ತು ಸಂಭಾಷಣೆ: ವಿನಾಯಕ ಬಡಾವಣೆಯ ಮಕ್ಕಳಿಂದ. ನಿರ್ಮಾಣ: ಜನ ಸಹಯೋಗ, ರಫ್‌ ಕಟ್ ಪ್ರೊಡಕ್ಷನ್, ಸಂಗೀತ: ಪ್ರಸನ್ನ ಕುಮಾರ್ ಎಂ ಎಸ್, ಸಂಕಲನ: ಚಂದ್ರು, ಸಿಂಕ್ ಸೌಂಡ್ ಇಂಜಿನಿಯರ್: ಮೇಘವರ್ಷ, ಛಾಯಾಗ್ರಹಣ: ಮೊಹಮ್ಮದ್ ಆಶಿಕ್.

ಚಕ್ರವ್ಯೂಹ

ಚಿತ್ರಕಥೆ ಮತ್ತು ನಿರ್ದೇಶನ: ರವಿಕಿರಣ್ ರಾಜೇಂದ್ರನ್

ಭಾಷೆ: ಕನ್ನಡ / ಅವಧಿ: 4:13 ನಿಮಿಷ

ಚಿತ್ರದಲ್ಲಿ ಅಬ್ದುಲ್ ಜೀವನವು ಎರಡು ವಿಭಿನ್ನ ಕಾಲಘಟ್ಟದ ಹಾಗೂ ವಿಭಿನ್ನ ಪ್ರಪಂಚಗಳಲ್ಲಿ ಹಂಚಿಹೋಗಿರುತ್ತದೆ. ಕೋವಿಡ್ ಮತ್ತು ಪ್ರಪಂಚದ ರಾಜಕೀಯ ಅವನು ಹಾಗೂ ಅವನ ರೀತಿಯ ಅನೇಕರ ಬಾಲ್ಯದ ಆಟಪಾಠಗಳಿಂದ ದೂರವಿರುವಂತೆ ಮಾಡುತ್ತದೆ. ನಿರ್ದೇಶಕ ರವಿಕಿರಣ್ ರಾಜೇಂದ್ರನ್ ಬಹುಭಾಷಾ ನಟ, ರಂಗ ಕಲಾವಿದ ಹಾಗೂ ಚಿತ್ರ ನಿರ್ಮಾಪಕ. `ಗೋದಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ. ಲಾಸ್ಟ್ ಕನ್ನಡಿಗ ಕಿರುಚಿತ್ರಕ್ಕಾಗಿ ಅವರು ಉತ್ತಮ ಪೋಷಕ ನಟನಾಗಿ ಸೈಮಾ ಕಿರುಚಿತ್ರ ಸ್ಪರ್ಧಾ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ಚಿತ್ರದ ಕಲಾವಿದರು: ಮಾಸ್ಟರ್ ಅಬ್ದುಲ್, ಶೇಖರ್, ರಾಮಕುಮಾರ್, ಬೇಬಿ ತಜುಮಾ.

ಸಂಗೀತ: ಮಿರಿಯಂ ಟಾಮ್, ಸೂರ್ಯ, ಕಲೆ: ಗೀತಾ ಎಂ., ಸಹಾಯಕ ನಿರ್ದೇಶಕರು: ಅಖಿಲೇಶ್ ದೇವಾಂಗ, ಆದಿಲ್ ಮಜೀದ್, ಮಿರಿಯಂ ಟಾಮ್, ಛಾಯಾಗ್ರಹಣ, ಸಂಕಲನ: ಮಲ್ಲಿಕಾರ್ಜುನ ಬಿ.ಎಸ್.

ದಿನಾಂಕ : 21.02.2023, ಮಂಗಳವಾರ

ಬಾಯಿಲ್ಡ್ ರೈಸ್

ನಿರ್ದೇಶನ: ಜಯಂತ್ ನಿಟ್ಟಡೆ

ಭಾಷೆ: ತುಳು / ಅವಧಿ: 19:50 ನಿಮಿಷ

ಕಲಾವಿದರು: ಮೇಘ ಕೆ., ಯೋಗಿನಿ, ಮಾನ್ವಿತ್, ಸಂಗೀತ: ಆಂಟೋನಿ. ಛಾಯಾಗ್ರಹಣ: ಜನಾರ್ಧನ್ ಮೌರ್ಯ, ಸಂಕಲನ: ಆರ್ ಪ್ರದೀಪ್ ಗರ್ದಡಿ

ಕರಾವಳಿಯ ಹಳ್ಳಿಯೊಂದರಲ್ಲಿ ಬಡ ಮಹಿಳೆ ರತ್ನ ಮತ್ತು ಮಗ ಮನ್ವಿತ್ ವಾಸವಾಗಿದ್ದಾರೆ. ಇವರಿಗೆ ಪಡಿತರ ವ್ಯವಸ್ಥೆಯಡಿ (ರೇಷನ್‌ ಕಾರ್ಡ್‌) ನೀಡುವ ವೈಟ್ ರೈಸ್‌ ಅನ್ನೇ ಊಟ ಮಾಡಬೇಕಾದ ಅನಿವಾರ್ಯತೆ ಉಂಟಾದಾಗ, ಬಾಯಿಲ್ಡ್ ರೈಸ್ ತಿನ್ನಲು ಇಷ್ಟಪಡುವ ಮಗ ವೈಟ್ ರೈಸ್‌ನ ಊಟವನ್ನು ನಿರಾಕರಿಸುತ್ತಾನೆ. ರತ್ನಳಿಗೆ ಕುಚ್ಚಲಕ್ಕಿಯನ್ನು ಕೊಳ್ಳುವಷ್ಟು ಹಣವಿರುವುದಿಲ್ಲ. ಈ ನಡುವೆ ತಾಯಿ ಮಗನ ಸಂಬಂಧ ಕೂಡ ಹದಗೆಡಲು ಶುರುವಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಕರಾವಳಿಗರ ಮೇಲೆ ಮಾಡುತ್ತಿರುವ ಆಹಾರ ಹೇರಿಕೆಯ ಚಿತ್ರಣ ತೆರೆದುಕೊಳ್ಳುತ್ತಾ, ಮಗ ಊಟ ಮಾಡುತ್ತಾನ..?! ರತ್ನ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ..?! ಎಂಬುದನ್ನು ಚಿತ್ರದಲ್ಲಿ ನೋಡಬಹುದು.

ನಿರ್ದೇಶಕ ಜಯಂತ್ ನಿಟ್ಟಡೆ ಅವರು ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಚಿತ್ರಕಥೆ ಮತ್ತು ನಿರ್ದೇಶನ ವಿಭಾಗದ ಡಿಪ್ಲೋಮೊ ಪದವೀಧರ. ಎರಡು ವರ್ಷದಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕಲರ್ ಆಫ್ ಟಮೊಟೋ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *