ಚಿತ್ರದುರ್ಗ: ಮುರುಘಾಮಠದಿಂದ ಪುನೀತ್ ರಾಜ್ಕುಮಾರ್ ಅವರಿಗೆ ಬಸವ ಜಯಂತಿ ದಿನವಾದ ಇಂದು (ಮೇ 3) ಮರಣೋತ್ತರ ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಅಪ್ಪು ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸ್ವೀಕರಿಸಿದರು.
ಐದು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುವ ಈ ಪ್ರಶಸ್ತಿಗೆ ಹಲವು ಮಂದಿ ಭಾಜನರಾಗಿದ್ದಾರೆ. ಸಿನಿಮಾ ಕ್ಷೇತ್ರದ ಸಾಧನೆಗಾಗಿ ಇದೇ ಮೊದಲು ನಟರೊಬ್ಬರಿಗೆ ಈ ಪ್ರಶಸ್ತಿ ಸಂದಿರುವುದು ವಿಶೇಷ. ಈ ವೇಳೆ ಅಶ್ವಿನಿಯವರು ಭಾವುಕರಾಗಿ ಗದ್ಗದಿತರಾದರು.
ಅಪ್ಪು ಅಭಿನಯದ ಹಾಡಿಗೆ ವೇದಿಕೆಯಲ್ಲಿ ಮಕ್ಕಳ ನೃತ್ಯ ಮಾಡುತ್ತಿರುವಾಗ ವೇದಿಕೆಗೆ ಆಗಮಿಸಿದ ಅಶ್ವಿನಿ ಪುನೀತ್ ರಾಜಕುಮಾರ್, ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಪ್ರಶಸ್ತಿ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘‘ಡಾ.ರಾಜಕುಮಾರ್ ಮುದ್ದಿನ ಮಗ ಪುನೀತ್‌ರಾಜಕುಮಾರ್. ಅಭಿನಯದ ಜತೆ ಹಾಡುಗಾರಿಕೆ ಮೈಗೂಡಿಸಿಕೊಂಡಿದ್ದರು. ಅಭಿನಯ, ಹಾಡುಗಾರಿಕೆಯಲ್ಲಿ ಪುನೀತರು ಪ್ರಣೀತರು. ತಂದೆಯ ಮಾರ್ಗದರ್ಶನ ಆಂತರ್ಯದಲ್ಲಿಟ್ಟುಕೊಂಡು ಆಕಾಶದ ಎತ್ತರಕ್ಕೆ ಬೆಳೆದರು. ಕನ್ನಡ ಚಲನಚಿತ್ರ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಪುನೀತ್ರಂತ ಪ್ರತಿಭೆ ಪಡೆದ ನಾವು ನೀವು ಧನ್ಯರು’’ ಎಂದು ಹೇಳಿದರು.
ಮುರುಘಾ ಶರಣರ ಕೋರಿಕೆ ಮೇರೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವಿನಿ, ಪುನೀತ್ಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದಕ್ಕೆ ಮುರುಘಾಮಠಕ್ಕೆ ಧನ್ಯವಾದ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ನಂದಿನಿದೇವಿ, ಎಸ್‌ಪಿ ಕೆ.ಪರಶುರಾಮ್ ಉಪಸ್ಥಿತರಿದ್ದರು.
ವಚನ ಗಾಯನದೊಂದಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭವಾಯಿತು. ಬಸವ ಜಯಂತಿ ಪ್ರಯುಕ್ತ ಸರ್ವ ಶರಣರ ಭಾವಚಿತ್ರಕ್ಕೆ ಮುರುಘಾಶ್ರೀ ನೇತೃತ್ವದಲ್ಲಿ ಪುಷ್ಪನಮನ ಸಲ್ಲಿಸಲಾಯಿತು.