ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸ್ಟಾರ್ ನಟರು, ರಾಜಕೀಯ ಮುಖಂಡರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ರಾಜ್ಯದ ಮೂಲೆ ಮೂಲೆಗಳಿಂದಲೂ ಜನರು ತಂಡೋಪ-ತಂಡವಾಗಿ ಬೆಂಗಳೂರಿನತ್ತ ಹರಿದು ಬರುತ್ತಿದ್ದು, ಹೀಗಾಗಿ ಇಂದು ದಿನವಿಡೀ ಪುನೀತ್ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸರ್ಪಗಾವಲು ಕ್ರೀಡಾಂಗಣ ಸುತ್ತುವರಿದಿದೆ.ಕ್ರೀಡಾಂಗಣ ಸುತ್ತಲೂ ಸುಮಾರು 3 ಸಾವಿರ ಪೇದೆ, ಕೆಎಸ್ ಆರ್ ಪಿ ತುಕಡಿ ಭದ್ರತೆ ನೀಡಲಿದೆ. ಕಂಠೀರವ ಸ್ಟೇಡಿಯಂಗೆ ಲಕ್ಷಾಂತರ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ.
ಇಂದು ಕೂಡ ಅಂತಿಮ ದರ್ಶನಕ್ಕೆ ಅವಕಾಶ ನೀಡಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಯಿತು. ಯಾವುದೇ ರೀತಿಯ ಲೋಪದೋಷ ಹಾಗೂ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
ಪುನೀತ್ ನಿಧನದಿಂದಾಗಿ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬೇರೆ ಭಾಷೆ ಚಿತ್ರರಂಗ ಕೂಡ ಶಾಕ್ಗೊಳಗಾಗಿದೆ. ಹೀಗಾಗಿ ಇಂದು ಕೂಡ ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರಮುಖ ನಟರು ಆಗಮಿಸುವ ಸಾಧ್ಯತೆ ಇದೆ.