ಪುನೀತ್ ನಮನ: ಹಲವು ಗಣ್ಯರು-ಸ್ಟಾರ್ ನಟ-ನಟಿಯರು ಹಾಜರು

ಬೆಂಗಳೂರು: ಕನ್ನಡ ಚಲನಚಿತ್ರರಂಗದ ನಟ ಪುನೀತ್‌ ರಾಜಕುಮಾರ್‌ ಅವರಿಗೆ ಸಿನಿರಂಗದಿಂದ ಹಮ್ಮಿಕೊಂಡಿರುವ ಪುನೀತ್‌ ನಮನ ಕಾರ್ಯಕ್ರಮಕ್ಕೆ ಚಲನಚಿತ್ರರಂಗದ ನೂರಾರು ಸ್ಟಾರ್ ನಟ-ನಟಿಯರು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏರ್ಪಡಿಸಿದ್ದ ಪುನೀತ್ ನಮನ ಕಾರ್ಯಕ್ರಮಕ್ಕೆ ಇಡೀ ದಕ್ಷಿಣ ಭಾರತದ ಸ್ಟಾರ್ ನಟ-ನಟಿಯರು, ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದ ದಿಗ್ಗಜರೂ ಭಾಗಿಯಾಗಿ ಪುನೀತ್ ಅವರಿಗೆ ನಮನ ಸಲ್ಲಿಸಿದರು.

ಮಧ್ಯಾಹ್ನ 2.30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಧರ್ ಸಾಗರ್ ತಮ್ಮ ಸ್ಯಾಕ್ಸೋಫೋನ್ ವಾದನದ ಮೂಲಕ ಗೀತನಮನಕ್ಕೆ ಚಾಲನೆ ನೀಡಿದರು. ಪುನೀತ್ ಅವರ ಬಾಲ್ಯದಿಂದ ಈವರೆಗಿನ ಸಿನಿಮಾ ಜರ್ನಿ, ಸಾಮಾಜಿಕ ಸೇವೆಯ ವಿಡಿಯೋ ಪ್ರಸ್ತುತಪಡಿಸಲಾಯಿತು.ನಾಗೇಂದ್ರ ಪ್ರಸಾದ್ ರಚಿಸಿದ ನಾಲ್ಕೂವರೆ ನಿಮಿಷದ ಶ್ರದ್ಧಾಂಜಲಿ ಹಾಡು ನೆರೆದಿದ್ದವರ ಕಣ್ಣಂಚಿನಲ್ಲಿ ನೀರು ತರಿಸಿತ್ತು.

ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್, ಪುನೀತ್‌ ಪತ್ನಿ ಅಶ್ವಿನಿ ಸೇರಿದಂತೆ ಕುಟುಂಬದ ಸಮಸ್ತರು ಭಾಗಿಯಾಗಿದ್ದರು. ನಟರಾದ ಪ್ರಕಾಶ್ ರೈ, ಸಂಪತ್ ರಾಜ್, ಶ್ರೀಕಾಂತ್ ಸೇರಿದಂತೆ ಹಲವರು ಆಗಮಿಸಿದ್ದಾರೆ.

ಪುನೀತ್ ನಮನಕ್ಕೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ನಟ-ನಟಿಯರು, ವಿವಿಧ ರಾಜ್ಯಗಳಿಂದ ಆಗಮಿಸಿದ ಗಣ್ಯರು ವೇದಿಕೆ ಮೇಲೆ ತೆರಳಿ ಪುನೀತ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಪುನೀತ್ ರಾಜ್‍ಕುಮಾರ್ ಅವರೇ ನಡೆಸುತ್ತಿದ್ದ ಮೈಸೂರಿನ ಶಕ್ತಿಧಾಮದ ಮಕ್ಕಳು ಸಹ ಗೀತನಮನ ಸಲ್ಲಿಸಿದರು. ಗುರುಕಿರಣ್ ತಂಡದಿಂದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಸೃಜನ್ ಲೋಕೇಶ್, ಡಾರ್ಲಿಂಗ್ ಕೃಷ್ಣ  ಸಾಧು ಕೋಕಿಲ ಸೇರಿದಂತೆ ಸಂಗೀತ ದಿಗ್ಗಜರಿಂದ ಪುನೀತ್ ಅವರ 10 ಹಾಡುಗಳನ್ನು ಪ್ರಸ್ತುತಪಡಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್‌ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಚಿವ ಸಂಪುಟದ ಸದಸ್ಯರೂ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಅಪ್ಪುವಿನ ಆದರ್ಶಗಳನ್ನು ಗುಣಗಾನ ಮಾಡಿದರು. ಚಲನಚಿತ್ರರಂಗದ ಗಣ್ಯರು, ವಿವಿಧ ಕ್ಷೇತ್ರಗಳ ದಿಗ್ಗಜರು ಪುನೀತ್ ಅವರನ್ನು ಪ್ರಶಂಸಿಸಿದ್ದನ್ನು ಕಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ.ರಾಜ್‍ಕುಟುಂಬದವರು ಭಾವುಕರಾದರು.

ಪುನೀತ್​ ಅಂತಿಮ ನಮನ ಮತ್ತು ಅಂತಿಮ ಸಂಸ್ಕಾರದ ಸಮಯದಲ್ಲಿ ಸಹಕರಿಸಿದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ, ಸರ್ಕಾರದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದಾರೆ. ಪುನೀತ್​ ಸಮಾಧಿ ಸ್ಥಳವನ್ನು ಡಾ. ರಾಜ್​ಕುಮಾರ್​ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ಅವರ ಸ್ಮಾರಕದ ರೀತಿಯೇ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಪುನೀತ್ ನಿಧನದ ನಂತರ 48 ಗಂಟೆಗಳ ಕಾಲ ಹರಿದು ಬಂದ ಅಭಿಮಾನಿಗಳ ಜನಸಾಗರ ನಾನು ವರ್ಣಿಸಲು ಸಾಧ್ಯವಿಲ್ಲ. ಅಂದು ನಾನು ಪ್ರೀತಿಯ ಅಪ್ಪು ಕೆನ್ನೆಗೆ ಮುತ್ತಿಟ್ಟಾಗ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ಅದು ನನ್ನ ಹೃದಯದಿಂದ ಬಂದದ್ದು, ಆರು ಕೋಟಿ ಜನರ ಪರವಾಗಿ ಅಪ್ಪುಗೆ ನಾನು ಆ ಮುತ್ತು ಕೊಟ್ಟೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕವಾಗಿ ನುಡಿದರು.

ಪುನೀತ್ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಚಿತ್ರೀಕರಣದ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದೆ. ಚಿತ್ರರಂಗ ಸ್ವಯಂಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿತ್ತು. ಪುನೀತ್ ಅವರಿಗೆ 8 ನಿಮಿಷಗಳ ಟ್ರಿಬ್ಯೂಟ್ ವಿಡಿಯೋ, 4.5 ನಿಮಿಷದ ಶ್ರದ್ಧಾಂಜಲಿ ಆಡಿಯೋ ಪ್ರಸ್ತುತಪಡಿಸಲಾಯಿತು. ಪುನೀತ್ ಅವರ ಭಾವುಕವಾದ ಹಾಡುಗಳನ್ನು ಕೇಳಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರ ಕಣ್ಣಾಲಿಗಳು ಒದ್ದೆಯಾಗಿದ್ದವು.

ಪುನೀತ್​ ನಮನ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಇಲ್ಲ. ಚಿತ್ರರಂಗದ ಪ್ರಮುಖರಿಗೆ ಅವಕಾಶವಿದ್ದು, 2000 ಜನರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಪುನೀತ ನಮನದಲ್ಲಿ ಮನರಂಜನೆಗೆ ಯಾವುದೇ ಅವಕಾಶ‌‌ ಇಲ್ಲದೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಸಂಜೆ ಆರು ಗಂಟೆಗೆ ಕಾರ್ಯಕ್ರಮಗೊಂಡಿದೆ.

ಪೊಲೀಸರಿಂದ ಬಿಗಿ ಭದ್ರತೆ

ಕಾರ್ಯಕ್ರಮದ ಸುತ್ತಲೂ 500ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ ಮಾಡಲಾಗಿದೆ. ಪೊಲೀಸ್ ಭದ್ರತೆ ಬಗ್ಗೆ ಹೆಚ್ಚುವರಿ ಕಮಿಷನರ್ ಸೌಮೆಂದು ಮುಖರ್ಜಿ ಪರಿಶೀಲನೆಯನ್ನು ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಆಗಮಿಸುವುದರಿಂದ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಒಬ್ಬರು ಡಿಸಿಪಿ, ಮೂವರು ಎಸಿಪಿ, ಹಾಗೂ 10 ಇನ್ಸ್‌ಪೆಕ್ಟರ್‌ಗಳು ಇವತ್ತಿನ ಭದ್ರತೆಯ ಜವಬ್ದಾರಿ ಹೊತ್ತಿದ್ದಾರೆ. 500ಕ್ಕೂ ಹೆಚ್ಚಿನ ಪೊಲೀಸರು ಅರಮನೆ ಮೈದಾನದ ಸುತ್ತಾಮುತ್ತಾ ಕಣ್ಣಿಟ್ಟಿದ್ದು, ಪಾಸ್ ಇದ್ದವರಿಗಷ್ಟೇ ಗಾಯತ್ರಿ ವಿಹಾರ್‌ಗೆ ಪ್ರವೇಶ ನೀಡುತ್ತಿದ್ದಾರೆ. ಕಾರ್ಯಕ್ರಮದ ಪೂರ್ವ ತಯಾರಿಯಲ್ಲಿ ನಿರ್ಮಾಪಕ ಸಾ ರ ಗೋವಿಂದು, ಉಮೇಶ್ ಬಣಕಾರ್, ಚಿನ್ನೆಗೌಡರು ಎಲ್ಲಾ ಸಿದ್ಧತೆಗಳ ಬಗ್ಗೆಯೂ ಪರಿಶೀಲನೆ ನಡೆಸಿದರು.

ಅರಮನೆ ಮೈದಾನವಲ್ಲದೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಚೆನೈ, ಹೈದರಬಾದ್ ಸೇರಿದಂತೆ ಹಲವು ಕಡೆಗಳಿಂದ ಆಗಮಿಸುವ ಸ್ಟಾರ್‌ ನಟರಿಗೆ ತೊಂದರೆಯಾಗದಂತೆ ಭದ್ರತೆ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿ ಬೀಳುವ ಸಾಧ್ಯತೆಗಳು ಇರೋದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದರು.

 

Donate Janashakthi Media

Leave a Reply

Your email address will not be published. Required fields are marked *