ಪುನೀತ್‌ ಕನಸಿನ ʻಗಂಧದಗುಡಿʼ ಸಾಕ್ಷ್ಯಚಿತ್ರ ಟೀಸರ್‌ ಬಿಡುಗಡೆ

ಬೆಂಗಳೂರು: ಕನ್ನಡ ಚಿತ್ರರಂಗದ ನಟ ದಿ. ಪುನೀತ್ ರಾಜ್‍ಕುಮಾರ್ ಅವರ ಕನಸಿನ ಯೋಜನೆಯಾದ ಗಂಧದಗುಡಿ ಸಾಕ್ಷಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ನ, ರಾಷ್ಟ್ರಪ್ರಶಸ್ತಿ ವಿಜೇತ ‘ವೈಲ್ಡ್‌ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೆ.ಎಸ್‌. ಅವರ ಜೊತೆಗೂಡಿ ಪುನೀತ್‌ ರಾಜ್‌ಕುಮಾರ್‌ ತಯಾರಿಸಿದ್ದ ಸಾಕ್ಷ್ಯಚಿತ್ರ ‘ಗಂಧದಗುಡಿ’ಯ ಟೀಸರ್‌ ಬಿಡುಗಡೆಯಾಗಿದ್ದು, ‘ಇದನ್ನು ನೋಡಿ ಒಂದು ಕ್ಷಣ ಶಾಕ್‌ ಆಯಿತು, ಬೇಸರವೂ ಆಯಿತು’ ಎಂದಿದ್ದಾರೆ ನಟ ಶಿವರಾಜ್‌ಕುಮಾರ್‌.

ಟೀಸರ್‌ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ರಾಜ್‍ಕುಮಾರ್ ಅವರು ಜರ್ನಿಯನ್ನು ಆರಂಭಿಸುತ್ತಾರೆ.  ಬೆಟ್ಟ, ಗುಡ್ಡ ಪ್ರಕೃತಿಯ ಸೌಂದರ್ಯದ ನಡುವೆ  ಆನೆ, ಹುಲಿ, ಹಾವು ಸುಮುದ್ರ, ನದಿ  ಹಾಗೂ ಇನ್ನಿತರ ಸುಂದರವಾದ ತಾಣಗಳ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಲ್ಲಿ ಅಚ್ಚಾಗಿ ಉಳಿಯುವಂತೆ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.  ಟೀಸರ್ ಕೊನೆಯಲ್ಲಿ  ರಾಜ್ ಕುಮಾರ್  ಅವರ ಧ್ವನಿಯಲ್ಲಿ ನಿನ್ನ ಕೈ ಮುಗಿಯುತ್ತೇನೆ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂದು ಹೇಳುತ್ತಿರುವ ಸಂದೇಶದ ಸಾಲುಗಳನ್ನು ಕೇಳ ಬಹುದಾಗಿದೆ.

ನಟ ಶಿವರಾಜಕುಮಾರ್‌ ಮಾತನಾಡಿ ‘ಒಂದು ಕ್ಷಣ ಶಾಕ್‌ ಆಯಿತು. ಬೇಸರವೂ ಆಯಿತು. ಇಂಥ ಚಿತ್ರವನ್ನು ತೆಗೆದ ಮನುಷ್ಯನೇ ಇಲ್ಲವೆಂದಾಗ ಬೇಜಾರಾಗುತ್ತಿದೆ. ಅಪ್ಪುವಿನ ಆ ಲುಕ್‌, ಆ ನಗು ಬಹಳ ಕಾಡುತ್ತದೆ. ಬಹಳ ನೋವಾಗುತ್ತದೆ. ಈ ಪ್ರಯತ್ನಕ್ಕೆ ಸರಿಸಾಟಿಯಿಲ್ಲ. ಗಂಧದಗುಡಿ ಎಂದರೆ ಕರುನಾಡು. ಕನ್ನಡದ ಸ್ವತ್ತು. ಗಂಧದಗುಡಿ ಮೊದಲ ಭಾಗದಲ್ಲಿ ಅಪ್ಪಾಜಿ, ಎರಡನೇ ಭಾಗದಲ್ಲಿ ನಾನು ಹಾಗೂ ಅಪ್ಪಾಜಿ, ಈಗ ಗಂಧದಗುಡಿಯಲ್ಲಿ ಅಪ್ಪು. ಹೀಗೆ ಗಂಧದಗುಡಿಗೂ ನಮ್ಮ ಕುಟುಂಬಕ್ಕೂ ಸಂಬಂಧವಿದೆ. ಇದು ಹೆಮ್ಮೆ ಎನಿಸುತ್ತದೆ. ಆದರೆ ಅಪ್ಪು ಇಲ್ಲ ಎನ್ನುವುದು ದುಃಖದ ವಿಷಯ. ಆದರೆ ನಾವು ಎಂದೂ ಅಪ್ಪು ಇಲ್ಲ ಎಂದುಕೊಂಡಿಲ್ಲ’ ಎಂದರು.

ವಿನಯ್ ರಾಜ್‍ಕುಮಾರ್ ʻʻಈ ಚಿತ್ರವು ಹಲವು ಕಾರಣಗಳಿಂದ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಮೊದಲನೆಯದಾಗಿ ಇದು ಚಿಕ್ಕಪ್ಪನ ಕನಸಿನ ಯೋಜನೆಯಾಗಿ ಕರ್ನಾಟಕದ ವೈಭವವನ್ನು ತೋರುವುದು, ಪ್ರೀತಿಯ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ನಟನಾಗಿ ಅಥವಾ ಸೂಪರ್ ಸ್ಟಾರ್‌ ಆಗಿ ಅಲ್ಲದೆ, ಅವರದೇ ಆದ ವೈಯಕ್ತಿಕ ದೃಷ್ಟಿಕೋನವನ್ನು ನೀಡುವುದು. ಎರಡನೆಯದಾಗಿ, ಇದು ನೈಸರ್ಗಿಕ ಪ್ರಪಂಚ, ಅದರ ವಿಶೇಷತೆಗಳು ಮತ್ತು ಅದು ನಮಗೆ ಪ್ರತಿದಿನವು ಕಲಿಸುವ ಪಾಠಗಳ ಬಗ್ಗೆ. ಏಕೆಂದರೆ ಇದು ನನ್ನ ತಾತನಿಗೆ ತುಂಬಾ ಹತ್ತಿರವಿದ್ದ ವಿಷಯ, ಚಿಕ್ಕಪ್ಪ ಅವರಿಗೆ ಇತ್ತೀಚೆಗೆ ಬೆಳವಣಿಗೆಯಾದ ಆಸಕ್ತಿ, ಹಾಗೆಯೇ ನನ್ನ ಜೀವನದ ಉತ್ಸಾಹ ಕೂಡ. ಅಜ್ಜಿಯ ಜನ್ಮದಿನದಂದು, ಈ ಕನಸು ನನಸಾಗುತ್ತಿರುವುದು ನನಗೆ ತುಂಬಾ ಖುಷಿ. ಇದುವರೆಗೂ ಕಂಡಿರದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅನುಭವ ಗಂಧದ ಗುಡಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ತಮ್ಮ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಸಂದೇಶವನ್ನು ನೀಡಿದ್ದಾರೆ.  “ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಈ ಅದ್ಭುತವಾದ ದೃಶ್ಯ ಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡಿವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ-ನಟ ವೃಷಭ್ ಶೆಟ್ಟಿ   “ಅಪ್ಪು ಸರ್ ಅವರ ಕನಸು ಒಂದು ಅದ್ಭುತ ಜರ್ನಿ. ನಮ್ಮ ನೆಲದ ಸಂಭ್ರಮ ಮತ್ತು ಅದರ ದಂತಕಥೆ. ಇದು ಗಂಧದ ಗುಡಿ ಮರುಕಳಿಸುವ ಸಮಯ.” ಎಂದು ಟ್ವೀಟ್ ಮಾಡಿದ್ದಾರೆ.

ಅಮೋಘವರ್ಷ ನಿರ್ದೇಶನದ ಡಾಕ್ಯುಮೆಂಟರಿ ಇದಾಗಿದೆ. ಸಾಮಾನ್ಯವಾಗಿ ಸಾಕ್ಷ್ಯಚಿತ್ರಗಳು ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಮುಂದಿನ  ವರ್ಷ 2022ರಲ್ಲಿ ತೆರೆಕಾಣಲಿದೆ.

Donate Janashakthi Media

Leave a Reply

Your email address will not be published. Required fields are marked *