ಬೆಂಗಳೂರು: ಪುನೀತ್ ಅವರ ಅಂತಿಮ ಸಂಸ್ಕಾರವನ್ನು ನಾಳೆ (ಭಾನುವಾರ) ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಪುತ್ರಿ ಬೆಂಗಳೂರಿಗೆ ಬರುವುದು ಸಂಜೆ 6 ಗಂಟೆಯಾಗಲಿದೆ. ಸಂಜೆಯ ನಂತರ ಅಂತ್ಯಕ್ರಿಯೆ ನಡೆಸುವುದು ಕಷ್ಟವಾಗಬಹುದು. ಅಲ್ಲದೇ, ಅವರ ಅಭಿಮಾನಿಗಳು ಇನ್ನೂ ಬಹಳಷ್ಟು ಸಂಖ್ಯೆಯಲ್ಲಿ ಬರುವವರಿದ್ದಾರೆ. ಹೀಗಾಗಿ ರಾಜಕುಮಾರ್ ಕುಟುಂಬಸ್ಥರ ಜೊತೆ ಚರ್ಚೆ ಮಾಡಿ ನಾಳೆಗೆ ಅಂತ್ಯಕ್ರಿಯೆ ನಿಗದಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಇದನ್ನು ಓದಿ: ದಿನವಿಡೀ ಪುನೀತ್ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ
ಪುನೀತ್ ರಾಜಕುಮಾರ್ ಪಾರ್ಥಿವ ಶರೀರವನ್ನು ದರ್ಶನ ಮಾಡಲು ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದು (ಶನಿವಾರ) ಇಡೀ ದಿನ ಅಂತಿಮ ದರ್ಶನ ಪಡೆಯಲು ಅವಕಾಶವಿದೆ. ಅಭಿಮಾನಿಗಳು ಈ ದುಃಖಕರ ಸನ್ನಿವೇಶದಲ್ಲಿ ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದು. ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.
ರಾಘವೇಂದ್ರ ರಾಜಕುಮಾರ್ ಹೇಳಿಕೆ
ಮಗಳು ಬರುವುದರೊಳಗೆ ರಾತ್ರಿ 8 ಆಗಬಹುದು. ಅವಳನ್ನು ಸಮಾಧಾನ ಪಡಿಸಬೇಕಿದೆ. ಹೀಗಾಗಿ ಪುತ್ರಿ ಬಂದ ಬಳಿಕ ಅಂತ್ಯಕ್ರಿಯೆ ಬಗ್ಗೆ ನಿರ್ಧಾರಿಸಲಾಗುವುದು. ಪುನೀತ್ ಪುತ್ರಿ ನನ್ನನ್ನು ಅಪ್ಪ ಎಂದು ಕರೆಯುತ್ತಾಳೆ. ಇಂದು ಬಂದು ಪಪ್ಪಾ ಎಲ್ಲಿ ಎಂದು ಕೇಳಿದರೆ ಏನು ಹೇಳುವುದು ಎಂದು ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ್ ಹೇಳಿದರು.
ಇದನ್ನು ಓದಿ: ಅಪ್ಪಾಜಿ, ಅಮ್ಮನನ್ನು ನೋಡಲು ನಮಗಿಂತ ಮೊದಲೇ ಹೋಗಿ ಬಿಟ್ಟ: ರಾಘವೇಂದ್ರ ರಾಜಕುಮಾರ್
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಎಲ್ಲರೂ ದರ್ಶನ ಪಡೆಯಲು ಅನುಕೂಲ ಆಗುವಂತೆ ಭಾನುವಾರ ಅಂತ್ಯಕ್ರಿಯೆಗೆ ನಿರ್ಧರಿಸಲಾಗಿದೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಅಭಿಮಾನಿಗಳು ಸಹಕಾರ ನೀಡಬೇಕು” ಎಂದು ಅವರು ಮನವಿ ಮಾಡಿದರು.
ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಪುನೀತ್ ಅವರ ಅಂತಿಮ ವಿಧಿವಿಧಾನಗಳನ್ನು ಪುನೀತ್ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್ ಕುಮಾರ್ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.