ಪುಣೆ | ‘ಜೈ ಶ್ರೀ ರಾಮ್’ ಕೂಗುತ್ತಾ ಎಫ್‌ಟಿಐಐ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಹಿಂದುತ್ವದ ಗುಂಪು

ಮುಂಬೈ: ಬಾಬರಿ ಮಸೀದಿ ಒಡೆದು ಅಯೋಧ್ಯೆಯಲ್ಲಿ ಕಟ್ಟಲಾಗಿರುವ ರಾಮಮಂದಿರ ಉದ್ಘಾಟನೆಯ ಒಂದು ದಿನದ ನಂತರ, ಹಿಂದೂ ಬಲಪಂಥೀಯ ಗುಂಪಿನ ಗೂಂಡಾಗಳು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಕ್ಯಾಂಪಸ್‌ಗೆ ಪ್ರವೇಶಿಸಿ ಮಂದಿರ ನಿರ್ಮಾಣದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಮಂಗಳವಾರದಂದು ಈ ದಾಳಿ ನಡೆದಿದ್ದು, ಘಟನೆಯ ವಿಡಿಯೊದಲ್ಲಿ ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿದ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದು ದಾಖಲಾಗಿದೆ. ಇಷ್ಟೆ ಅಲ್ಲದೆ, “ಬಾಬರಿಯನ್ನು ನೆನಪಿಸಿಕೊಳ್ಳಿ, ಸಂವಿಧಾನದ ಸಾವು” ಎಂಬ ಬರಹವಿದ್ದ ದೊಡ್ಡ ಬ್ಯಾನರ್‌ಗೆ ಬೆಂಕಿ ಹಚ್ಚಿದ್ದಾರೆ.

ದಾಳಿಯ ಸಂದರ್ಭದಲ್ಲಿ ಪೊಲೀಸರು ಕ್ಯಾಂಪಸ್‌ಗೆ ಆಗಮಿಸಿದರೂ ದುಷ್ಕರ್ಮಿಗಳ ಗುಂಪನ್ನು ಬಂಧಿಸಲಿಲ್ಲ ಎಂದು ವರದಿಯಾಗಿದೆ. ಅಲ್ಲದೆ, ಸಂಸ್ಥೆಯ ಭದ್ರತಾ ಸಿಬ್ಬಂದಿ ಕೂಡಾ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸುತ್ತಿರುವ ವೇಳೆ ಮಧ್ಯಪ್ರವೇಶಿಸಲು ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ದಾಳಿಯಲ್ಲಿ ಕನಿಷ್ಠ ನಾಲ್ವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಎಫ್‌ಟಿಐಐ ವಿದ್ಯಾರ್ಥಿ ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ. 

ಇದನ್ನೂ ಓದಿ: ‘ಕಾಶಿ ಮಥುರಾ ಬಾಕಿ ಹೈ’ | ಬೆಂಗಳೂರು – ರಾಜಧಾನಿಯ ಬೀದಿಗಳಲ್ಲಿ ಮಸೀದಿ ಒಡೆಯುವ ದ್ವೇಷದ ಕೂಗು

ದುಷ್ಕರ್ಮಿಗಳು ಸಂಸ್ಥೆಯಲ್ಲಿ ವಿಧ್ವಂಸಕ ಕೃತ್ಯ ನಡೆಸುತ್ತಿರುವ ವೇಳೆ ವಸ್ತುಗಳನ್ನು ನಾಶಪಡಿಸುತ್ತಾ “ಜೈ ಶ್ರೀ ರಾಮ್” ಎಂದು ಘೋಷಣೆ ಕೂಡಾ ಕೂಗಿದ್ದಾರೆ. ವೀಡಿಯೊವೊಂದರಲ್ಲಿ ದುಷ್ಕರ್ಮಿಗಳ ಗುಂಪು ದೊಡ್ಡ ಬೋರ್ಡ್ ಅನ್ನು ಒಡೆದು ಹಾಕುವುದು, ಒದೆಯುವುದು ಮತ್ತು ಒಡೆಯುವುದು ದಾಖಲಾಗಿದೆ. ದುಷ್ಕರ್ಮಿಗಳ ಗುಂಪು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವಾಗ ಖಾಕಿ ಸಮವಸ್ತ್ರದಲ್ಲಿರುವ ಜನರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಮತ್ತೊಂದು ವೀಡಿಯೊದಲ್ಲಿ, ದುಷ್ಕರ್ಮಿಗಳು ‘ಸಂವಿಧಾನದ ಮರಣವನ್ನು ನೆನಪಿಸಿಕೊಳ್ಳಿ’ ಎಂದು ಬರೆದಿದ್ದ ದೊಡ್ಡ ಬಟ್ಟೆಯ ಬ್ಯಾನರ್ ಅನ್ನು “ಜೈ ಶ್ರೀ ರಾಮ್” ಎಂದು ಕೂಗುತ್ತಾ ಬ್ಯಾನರ್‌ಗೆ ಬೆಂಕಿ ಹಚ್ಚಿದ್ದಾರೆ. 

ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆಗೆ ಅಪಮಾನ; ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

ದಾಳಿಯ ಕುರಿತು ಎಫ್‌ಟಿಐಐ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಫ್‌ಟಿಐಐಎಸ್‌ಎ) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, “20 ರಿಂದ 25 ಉದ್ರೇಕಿತ ಜನರ ಗುಂಪು ಮಧ್ಯಾಹ್ನ 1:30 ರ ಸುಮಾರಿಗೆ ಕ್ಯಾಂಪಸ್‌ಗೆ ಪ್ರವೇಶಿಸಿತು. ಕ್ಯಾಂಪಸ್ ಪ್ರವೇಶಿಸಲು ಮುಂದಾದ ಕಿಡಿಗೇಡಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ. ಸಂಘರ್ಷದ ಬಗ್ಗೆ ಕೆಲವು ವಿದ್ಯಾರ್ಥಿಗಳು ವಿಚಾರಿಸಲು ಪ್ರಾರಂಭಿಸಿದರು. ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದಾಗ, ದುಷ್ಕರ್ಮಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು ಮತ್ತು ವಿದ್ಯಾರ್ಥಿಗಳ ಮೇಲೆ ನಿಂದಿಸಿದ್ದಾರೆ” ಎಂದು ಹೇಳಿದೆ.

“ಎಫ್‌ಟಿಐಐಎಸ್‌ಎ ಅಧ್ಯಕ್ಷ ಮಂಕಪ್ ನೋಕ್ವೋಹಮ್ ಅವರು ಮುಖ್ಯ ಗೇಟ್‌ನ ಕಡೆಗೆ ಹೋಗುತ್ತಿರುವಾಗ, ಗುಂಪು ಜೋರಾಗಿ ಘೋಷಣೆಗಳನ್ನು ಕೂಗಿದೆ. ನಂತರ ಅವರ ಮೇಲೆ ಗುಂಪು ಹಲ್ಲೆ ಮಾಡಿದೆ. ಈ ಗುಂಪನ್ನು ತಡೆಯಲು ಭದ್ರತಾ ಸಿಬ್ಬಂದಿ ವಿಫಲರಾಗಿದ್ದಾರೆ. ಮಂಕಾಪ್ ಮೇಲೆ ಹಿಂಸಾತ್ಮಕವಾಗಿ ದಾಳಿ ಮಾಡಲಾಗಿದ್ದು, ಕ್ರೂರವಾಗಿ ಥಳಿಸಲಾಯಿತು. ಆಕ್ರಮಣದಲ್ಲಿ ಅವರ ಟಿ ಶರ್ಟ್ ಹರಿದುಹೋಗಿದ್ದು, ತೀವ್ರವಾದ ಗಾಯ ಸೇರಿದಂತೆ ಹಲವು ಮೂಗೇಟುಗಳು ಕೂಡಾ ಅವರಿಗೆ ಆಗಿದೆ” ಎಂದು ಸಂಘಟನೆಯ ಹೇಳಿಕೆ ತಿಳಿಸಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಎಫ್‌ಟಿಐಐ ಅಧ್ಯಕ್ಷರಾಗಿ ನೇಮಕಗೊಂಡ ನಟ ಆರ್. ಮಾಧವನ್ ಈ ಘಟನೆಯ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.

ವಿಡಿಯೊ ನೋಡಿ: ಸಂಸದರ ಕಛೇರಿ ಮುಂದೆ ಕಾರ್ಮಿಕರ ಪ್ರತಿಭಟನೆ : ಅಸಂಘಟಿತ ಕಾರ್ಮಿಕರಿಗೆ ಅಚ್ಚೆದಿನ್‌ ಯಾವಾಗ?

Donate Janashakthi Media

Leave a Reply

Your email address will not be published. Required fields are marked *